ಬಂಟ್ವಾಳ (ಕರಾವಳಿ ಟೈಮ್ಸ್) : ದಕ್ಷ ಕ್ರಿಯೇಷನ್ಸ್ ಮಂಗಳೂರು ಪ್ರಸ್ತುತಿಯ ಅನಿವಾಸಿ ಭಾರತೀಯ ಪ್ರವೀಣ್ ಶೆಟ್ಟಿ ಪಿಲಾರ್ ಮೇಗಿನಮನೆ ನಿರ್ಮಾಣದಲ್ಲಿ ಉದಯೋನ್ಮುಖ ಯುವ ಗಾಯಕ ಮನೀಶ್ ಕುತ್ತಾರ್ ಧ್ವನಿ ನೀಡಿರುವ ಕಲೆಯೆರ್ಕಿ ಕಲ್ಲುರ್ಟಿ ವೀಡಿಯೋ ಆಲ್ಬಮ್ ಬಂಟ್ವಾಳ ತಾಲೂಕಿನ ಪಣೋಲಿಬೈಲು ಕಲ್ಲುರ್ಟಿ ಕ್ಷೇತ್ರದಲ್ಲಿ ಶನಿವಾರ ಬಿಡುಗಡೆಗೊಂಡಿತು.
ನಿವೃತ್ತ ಕಾರ್ಗಿಲ್ ಯೋಧ ಪ್ರವೀಣ್ ಶೆಟ್ಟಿ ಪಿಲಾರ್ ಅವರು ವೀಡಿಯೋ ಆಲ್ಬಮ್ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಹಿಂದೆ ಕಲಾವಿದರು ಅವಕಾಶಕ್ಕಾಗಿ ಕಾಯುವುದೋ ಅಥವಾ ಯಾರದೋ ಬೆನ್ನ ಹಿಂದೆ ಬೀಳೋ ಪರಿಸ್ಥಿತಿ ಇತ್ತು. ಆದರೆ ಇಂದು ಕಲಾವಿದರು ತಮ್ಮ ಕಲೆಯನ್ನು ಅನಾವರಣಗೊಳಿಸಲು ಇಂತಹ ಆಲ್ಬಮ್‍ಗಳು ಪ್ರಮುಖ ಪಾತ್ರವಹಿಸುವುದಲ್ಲದೆ, ಇಂತಹ ಪ್ರಯತ್ನದಲ್ಲಿ ಕಲಾವಿದರು ರಾತ್ರಿ ಕಳೆದು ಹಗಲಾಗುವಾಗ ಪ್ರಸಿದ್ಧಿ ಪಡೆದಿರುವ ಉದಾಹರಣೆಗಳಿವೆ. ಬೆನ್ನು ತಟ್ಟಿ ಹುರಿದುಂಬಿಸುವ ಜನರಿದ್ದರೆ ಬಡ ಕಲಾವಿದರ ಕಲಾ ನೈಪುಣ್ಯತೆಯು ಪ್ರಪಂಚಕ್ಕೆ ಪರಿಚಿತವಾಗಲು ಸಾಧ್ಯ ಎಂದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್‍ಸಾರ್ ಮಾತನಾಡಿ, ಮನೀಶ್ ಕುತ್ತಾರ್ ಏಕಲವ್ಯನ ಹಾಗೆ. ನಿರ್ದಿಷ್ಟ ಗುರುಗಳಿಲ್ಲದ ಪ್ರತಿಭೆ ಅವರದ್ದಾಗಿದೆ. ಸಾಧಕರು, ಕಲಾವಿದರು ಯಾರೇ ಆಗಲಿ ಅವರಲ್ಲಿ ವಿದೇಯತೆ ಇರಬೇಕು ಆ ವಿಧೇಯತೆಯನ್ನು ಮನೀಷ್ ಅವರು ಮೈಗೂಡಿಸಿದ್ದು, ಅವರು ಉತ್ತಮ ಗಾಯಕರಾಗಿ ಪ್ರಸಿದ್ಧಿ ಪಡೆಯಲೆಂದು ಹಾರೈಸಿದರು.
ಸಜಿಪಮೂಡ ಗ್ರಾ.ಪಂ. ಮಾಜಿ ಸದಸ್ಯರಾದ ರಮೇಶ್ ಎಂ. ಪಣೋಲಿಬೈಲು ಭಂಡಾರಮನೆ, ಪಣೋಲಿಬೈಲು ಕ್ಷೇತ್ರದ ಅರ್ಚಕರಾದ ರಮೇಶ್ ಮೂಲ್ಯ, ಶ್ರೀ ಗುಡ್ಡಮೂಲ್ಯ ಯಾನೆ ವಾಸುದೇವ್ ಮೂಲ್ಯ, ಗಾಯಕ ಮನೀಷ್ ಕುತ್ತಾರ್, ಮಾಜಿ ಯೋಧ ಸುನಿಲ್ ಕುಮಾರ್, ರಜನೀಶ್ ನಾಯ್ಕ್ ಪಂಡಿತ್ ಹೌಸ್, ಪ್ರತೀಕ್ ಬಜ್ಪೆ, ಕೊಳಲು ವಾದಕ ಸಂತೋಷ್ ವಿಟ್ಲ, ನಿಖಿತ್ ಕುತ್ತಾರ್ ಮೊದಲಾದವರು ಉಪಸ್ಥಿತರಿದ್ದರು. ವಿಜೆ ಮನೋಜ್ ವಾಮಂಜೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment