ಚಹಲ್ ಚಮತ್ಕಾರದ ಹೊರತಾಗಿಯೂ ಕೊನೆಯ ಎಸೆತದಲ್ಲಿ ರೋಚಕವಾಗಿ ಸೋತ ಆರ್‍ಸಿಬಿ - Karavali Times ಚಹಲ್ ಚಮತ್ಕಾರದ ಹೊರತಾಗಿಯೂ ಕೊನೆಯ ಎಸೆತದಲ್ಲಿ ರೋಚಕವಾಗಿ ಸೋತ ಆರ್‍ಸಿಬಿ - Karavali Times

728x90

15 October 2020

ಚಹಲ್ ಚಮತ್ಕಾರದ ಹೊರತಾಗಿಯೂ ಕೊನೆಯ ಎಸೆತದಲ್ಲಿ ರೋಚಕವಾಗಿ ಸೋತ ಆರ್‍ಸಿಬಿ
ರಾಹುಲ್-ಗೇಲ್ ಅಬ್ಬರದ ನಡುವೆಯೂ ಜಯಕ್ಕಾಗಿ ಚಡಪಡಿಸಿದ ಪಂಜಾಬ್


ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ 8 ವಿಕೆಟ್ ಜಯ


ಶಾರ್ಜಾ, ಅ. 16, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಐಪಿಎಲ್ ಕೂಟದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಢ ಪಂದ್ಯದ ಅಂತಿಮ ಎಸೆತದಲ್ಲಿ ರೋಮಾಂಚಕ ಜಯ ದಾಖಲಿಸಿದೆ. 

ಪಂಜಾಬ್ ಪರ ನಾಯಕ ಕೆ ಎಲ್ ರಾಹುಲ್ 61 ರನ್, ಗೇಲ್ 53 ಹಾಗೂ ಅಗರ್ವಾಲ್ ಅವರ 45 ರನ್‍ಗಳ ಭರ್ಜರಿ ಆಟ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟಿತ್ತು. 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡ ಪಂಜಾಬ್ 177 ರನ್ ಗಳಿಸಿ 8 ವಿಕೆಟ್‍ಗಳ ಜಯ ತನ್ನದಾಗಿಸಿಕೊಂಡಿತು. ಚಹಲ್ ಏಕಮಾತ್ರ ಸಳಪ ಬೌಲರ್ ಆಗಿ ಆರ್‍ಸಿಬಿ ಪರ ಮೂಡಿ ಬಂದರು. ಬಹುತೇಕ ಏಕಮುಖವಾಗಿ ಸಾಗಿದ ಪಂದ್ಯದಲ್ಲಿ ಪಂಜಾಬ್ ಸುಲಭ ಜಯ ದಾಖಲಿಸುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಚಹಲ್ ಚಮತ್ಕಾರದಿಂದಾಗಿ ಪಂಜಾಬ್ ಕೊನೆ ಎಸೆತದವರೆಗೂ ಜಯಕ್ಕಾಗಿ ಪರದಾಡುವಂತಾಯಿತು. ಅದೂ ಕೂಡಾ ಭರ್ಜರಿ ಬ್ಯಾಟಿಂಗ್ ಲಯ ಕಂಡುಕೊಂಡಿದ್ದ ರಾಹುಲ್ ಹಾಗೂ ಗೇಲ್ ಕ್ರೀಸ್‍ನಲ್ಲಿದ್ದುಕೊಂಡೇ ಪಂಜಾಬ್ ಶ್ವಾಸ ಬಿಗಿ ಹಿಡಿದ ಸ್ಥಿತಿಯಲ್ಲಿ ಜಯ ದಾಖಲಿಸುವಂತಾದದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. 

172 ಗಳ ಗುರಿ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ನಾಯಕ ಕೆ ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭವನ್ನೇ ನೀಡಿದರು. ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದ ಈ ಜೋಡಿ ಪವರ್ ಪ್ಲೇ ಅಂತ್ಯಕ್ಕೆ 56 ರನ್ ಗಳಿಸಿತ್ತು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಮಯಾಂಕ್ (45 ರನ್, 25 ಎಸೆತ, 3 ಸಿಕ್ಸರ್, 4 ಬೌಂಡರಿ) ಭಾರೀ ಹೊಡೆತಕ್ಕೆ ಮುಂದಾಗಿ ಚಹಲ್‍ಗೆ ವಿಕೆಟ್ ಒಪ್ಪಿಸುವ ಮೂಲಕ ಅರ್ಧ ಶತಕದಿಂದ ವಂಚಿತರಾದರು. 

ಮಯಾಂಕ್ ಔಟಾಗುತ್ತಿದಂತೆ ಕ್ರೀಸ್‍ಗೆ ಬಂದ ಕ್ರಿಸ್ ಗೇಲ್ ಟೂರ್ನಿಯ ಮೊದಲ ಇನ್ನಿಂಗ್ಸ್‍ನಲ್ಲೇ ಭರ್ಜರಿಯಾಗಿ ಬ್ಯಾಟ್ ಬೀಸಿದರು. ವಿಶೇಷ ಎಂದರೇ ಬರೋಬ್ಬರಿ 8 ವರ್ಷಗಳ ಬಳಿಕ ಗೇಲ್ ಒನ್‍ಡೌನ್ ಆಟಗಾರನಾಗಿ ಕಣಕ್ಕಿಳಿದಿದ್ದರು. 5 ಸಿಕ್ಸರ್ ಸಿಡಿಸಿ ರಂಜಿಸಿದ್ದ ಗೇಲ್ ಇನ್ನಿಂಗ್ಸ್‍ನ ಕೊನೆಯ ಎಸೆತ ಬಾಕಿ ಇರುವ ಸಮಯದಲ್ಲಿ ರನೌಟ್ ಆಗಿ ಹೊರ ನಡೆದರು. 36 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿದ ಗೇಲ್ ವೃತ್ತಿ ಜೀವನದ ಐಪಿಎಲ್‍ನಲ್ಲಿ 29ನೇ ಅರ್ಧಗಳಿಸಿದರು. ಇತ್ತ ಪಂದ್ಯ ಆರಂಭದಿಂದಲೂ ನಾಯಕನ ಜವಾಬ್ದಾರಿಯುತ ಆಟವಾಡಿದ ಕೆಎಲ್ ರಾಹುಲ್ 49 ಎಸೆತಗಳಲ್ಲಿ 61 ರನ್ ಗಳಿಸಿ ಅಜೇಯರಾಗುಳಿದರು.

ಪಂದ್ಯದ ಕೊನೆಯ ಓವರಿನಲ್ಲಿ ಪಂಜಾಬ್ ಗೆಲುವಿಗೆ 2 ರನ್ ಬೇಕಿತ್ತು. ಚಹಲ್ ಎಸೆದ ಮೊದಲ ಎರಡು ಎಸೆತಗಳು ಡಾಟ್ ಬಾಲ್ ಆಗಿ ಪರಿಣಮಿಸಿದೆ, 3ನೇ ಎಸೆತದಲ್ಲಿ ಒಂಟಿ ರನ್ ಬಂತು. 4ನೇ ಎಸೆತ ಮತ್ತೆ ಡಾಟ್ ಬಾಲ್ ಆಗಿ ಪರಿಣಮಿಸಿತು. 5ನೇ ಎಸೆತದಲ್ಲಿ ಗೇಲ್ ರನೌಟ್ ಆದರು. ಅಂತಿಮ ಎಸೆತದಲ್ಲಿ ಪಂಜಾಬ್ ಗೆಲುವಿಗೆ 1 ರನ್ ಗಳಿಸುವ ಅಗತ್ಯವಿತ್ತು. ಈ ವೇಳೆ ಆಗತಾನೇ ಕ್ರೀಸಿಗೆ ಬಂದ ನಿಕೋಲಸ್ ಪೂರನ್ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬೆಂಗಳೂರು ತಂಡಕ್ಕೆ 5ನೇ ಓವರಿನಲ್ಲಿ ಹರ್ಷದೀಪ್ ಶೈನಿ ಮೊದಲ ಅಘಾತ ನೀಡಿದರು. ಟೂರ್ನಿಯಲ್ಲಿ ಸತತ ಅರ್ಧ ಶತಕ ಸಿಡಿಸಿ ಭರವಸೆ ಮೂಡಿಸಿದ್ದ ಪಡಿಕ್ಕಲ್ 12 ಎಸೆತಗಳಲ್ಲಿ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆರ್‍ಸಿಬಿ ಬ್ಯಾಟಿಂಗ್ ಲೈನ್‍ಅಪ್‍ನಲ್ಲಿ ಬದಲಾವಣೆ ಮಾಡಿ ಎಬಿ ಡೆವಿಲಿಯರ್ಸ್‍ಗೆ ಬ್ಯಾಂಟಿಂಗಿನಲ್ಲಿ ಹಿಂಭಡ್ತಿ ನೀಡಿ ಸುಂದರ್ ಹಾಗೂ ದುಬೆಗೆ ಮೊದಲು ಅವಕಾಶ ನೀಡಲಾಯಿತು. ಇದುವೇ ಆರ್‍ಸಿಬಿ ಪಾಲಿಗೆ ಮುಳುವಾಯಿತು ಎಂಬುದು ಅಭಿಮಾನಿಗಳ ಆಕ್ರೋಶ. ನೀಡಿದ ಅವಕಾಶದಲ್ಲಿ ಮಿಂಚಲು ವಿಫಲರಾದ ಸುಂದರ್ 13 ರನ್ ಗಳಿಸಿ ಅಶ್ವಿನ್‍ಗೆ ವಿಕೆಟ್ ಒಪ್ಪಿಸಿದರೆ, 19 ಎಸೆತಗಳಲ್ಲಿ ದುಬೆ 23 ರನ್ ಗಳಿಸಿ ಔಟಾದರು. ಪಂದ್ಯದಲ್ಲಿ ದುಬೆ 2 ಸಿಕ್ಸರ್ ಸಿಡಿಸಿದರು. ಈ ವೇಳೆ 2020ರ ಐಪಿಎಲ್ ಟೂರ್ನಿಯಲ್ಲಿ 400 ಸಿಕ್ಸರ್‍ಗಳು ಪೂರ್ಣಗೊಂಡವು. 

2014ರ ಬಳಿಕ ಎಬಿ ಡಿವಿಲಿಯರ್ಸ್ ಮೊದಲ ಬಾರಿಗೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿದಿದ್ದರು. ಇನ್‍ಫಾರ್ಮ್‍ನಲ್ಲಿದ್ದ ಆಟಗಾರರನ್ನು ಯಾವ ಕಾರಣಕ್ಕೆ 6ನೇ ಕ್ರಮಾಂಕಕ್ಕೆ ಹಿಂಭಡ್ತಿ ನೀಡಲಾಗಿತ್ತು ಎಂಬುದು ಗೊತ್ತಾಗಿಲ್ಲ ಎಂದು ಅಭಿಮಾನಿಗಳು ಪ್ರಶ್ನೆ ಮಾಡುವಂತೆ ಮಾಡಿತು. ಹಿಂಭಡ್ತಿಯಿಂದಾಗಿ ಮೂಡ್ ಕಳಕೊಂಡ ಎಬಿ ಡಿವಿಲಿಯರ್ಸ್ 5 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಕೊಹ್ಲಿ (48 ರನ್, 39 ಎಸೆತ,  3 ಬೌಂಡರಿ) ಶಮಿಗೆ ವಿಕೆಟ್ ಒಪ್ಪಿಸಿದರು. ಅಂತಿಮ ಹಂತದಲ್ಲಿ 12 ಎಸೆತಗಳನ್ನು ಎದುರಿಸಿದ ಉದಾನಾ ಮತ್ತು ಮೋರಿಸ್ 35 ರನ್ ಜೊತೆಯಾಟ ನೀಡಿದರು. ಅಂತಿಮ ಓವರಿನಲ್ಲಿ ಆರ್‍ಸಿಬಿ ತಂಡ 23 ರನ್ ಗಳಿಸಿ, ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಪೇರಿಸಿತ್ತು.
  • Blogger Comments
  • Facebook Comments

0 comments:

Post a Comment

Item Reviewed: ಚಹಲ್ ಚಮತ್ಕಾರದ ಹೊರತಾಗಿಯೂ ಕೊನೆಯ ಎಸೆತದಲ್ಲಿ ರೋಚಕವಾಗಿ ಸೋತ ಆರ್‍ಸಿಬಿ Rating: 5 Reviewed By: karavali Times
Scroll to Top