ಪಾಂಡೆ-ಶಂಕರ್ ಜುಗಲ್‍ಬಂದಿ : ಹೈದರಾಬಾದ್‍ಗೆ 8 ವಿಕೆಟ್‍ಗಳ ಜಯ - Karavali Times ಪಾಂಡೆ-ಶಂಕರ್ ಜುಗಲ್‍ಬಂದಿ : ಹೈದರಾಬಾದ್‍ಗೆ 8 ವಿಕೆಟ್‍ಗಳ ಜಯ - Karavali Times

728x90

22 October 2020

ಪಾಂಡೆ-ಶಂಕರ್ ಜುಗಲ್‍ಬಂದಿ : ಹೈದರಾಬಾದ್‍ಗೆ 8 ವಿಕೆಟ್‍ಗಳ ಜಯಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಹೈದರಾಬಾದ್ 


ದುಬೈ,  ಅ. 23, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಐಪಿಎಲ್-2020ಯ 40ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್‍ರೈಸರ್ಸ್ ಹೈದರಾಬಾದ್ ತಂಡ 8 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. 

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಸನ್‍ರೈಸರ್ಸ್ ಹೈದರಾಬಾದ್ ದಾಳಿಗೆ ತತ್ತರಿಸಿ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 154 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ ಮೊದಲ ಎರಡು ವಿಕೆಟ್ ಬೇಗನೇ ಕಳೆದುಕೊಂಡರು 3ನೇ ವಿಕೆಟ್‍ಗೆ ಮನೀಷ್ ಪಾಂಡೆ ಹಾಗೂ ವಿಜಯ್ ಶಂಕರ್ ಅವರ 140 ರನ್‍ಗಳ ಅತ್ಯುತ್ತಮ ಜೊತೆಯಾಟದಿಂದ ಹೈದರಾಬಾದ್ 8 ವಿಕೆಟ್‍ಗಳಿಂದ ವಿಜಯ ಪತಾಕೆ ಹಾರಿಸಿತು. 

ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್ಸ್ಟೋವ್ ಅವರ ವಿಕೆಟ್ ಬಹುಬೇಗ ಕಳೆದುಕೊಂಡರೂ 3ನೇ ವಿಕೆಟ್‍ಗೆ ಕ್ರೀಸಿನಲ್ಲಿ ಒಂದುಗೂಡಿದ ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ಅವರು 140 ರನ್‍ಗಳ ಜೊತೆಯಾಟವಾಡಿ ದಾಖಲೆ ಬರೆದರು. ಈ ಮೂಲಕ ಇಬ್ಬರು ಭಾರತ ಆಟಗಾರೇ ಸೇರಿ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕಾಗಿ ಶತಕ ಜೊತೆಯಾಟವಾಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2013ರಲ್ಲಿ ಐಪಿಎಲ್‍ಗೆ ಪಾದಾರ್ಪಾಣೆ ಮಾಡಿದ ಸನ್‍ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ಇದುವರೆಗೂ 24 ಬಾರಿ ಶತಕ ಜೊತೆಯಾಟವಾಡಿದ್ದಾರೆ. ಆದರೆ ಇದರಲ್ಲಿ 23 ಬಾರಿಯೂ ವಿದೇಶಿ ಆಟಗಾರರು ಪಾಲುದಾರಿಕೆ ಹೊಂದಿದ್ದಾರೆ. ಆದರೆ ಏಳು ವರ್ಷದಲ್ಲಿ ಇದೇ ಮೊದಲ ಬಾರಿಗೆ ಯಾವುದೇ ವಿದೇಶಿ ಆಟಗಾರನ ಪಾಲುದಾರಿಕೆ ಇಲ್ಲದೇ ಮನೀಶ್ ಪಾಂಡೆ ಹಾಗೂ ಶಂಕರ್ ಶತಕ ಜೊತೆಯಾಟವಾಡಿ ದಾಖಲೆ ಬರೆದಿದ್ದಾರೆ.

155 ರನ್ ಗುರಿ ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಜೋಫ್ರಾ ಆರ್ಚರ್ ಆರಂಭಿಕ ಆಘಾತ ನೀಡಿದರು. ಈ ಮೂಲಕ ಇನ್ನಿಂಗ್ಸ್‍ನ ನಾಲ್ಕನೇ ಎಸೆತದಲ್ಲೇ ನಾಯಕ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿದರು. ನಂತರ ಜೋಫ್ರಾ ಆರ್ಚರ್ ಅವರೇ 2ನೇ ಓವರ್‍ನ ನಾಲ್ಕನೇ  ಎಸೆತದಲ್ಲಿ 10 ರನ್ ಗಳಿಸಿದ್ದ ಜಾನಿ ಬೈರ್ಸ್ಟೋವ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಬಳಿಕ ಜೊತೆಗೂಡಿದ ಕನ್ನಡಿಗ ಮನೀಶ್ ಪಾಂಡೆ ಅವರು, ವಿಜಯ್ ಶಂಕರ್ ಅವರ ಜೊತೆಗೂಡಿ ಸಿಕ್ಸರ್-ಬೌಂಡರಿಗಳ ಸುರಿಮಳೆಗೈದರು. ಈ ಮೂಲಕ ಪವರ್ ಪ್ಲೇ ಅಂತ್ಯದ ವೇಳೆಗೆ ಹೈದರಾಬಾದ್ ತಂಡ 2 ವಿಕೆಟ್ ನಷ್ಟಕ್ಕೆ 58 ರನ್ ಪೇರಿಸಿತು. ಜೊತೆಗೆ ಪಾಂಡೆ ಮತ್ತು ವಿಜಯ್ ಶಂಕರ್ ಜೋಡಿ ಕೇವಲ 30 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿ ಆರಂಭಿಕ ಕುಸಿತ ಕಂಡಿದ್ದ ತಂಡಕ್ಕೆ ನೆರವಾದರು. ಉತ್ತಮ ಬ್ಯಾಟಿಂಗ್ ನಡೆಸಿದ ಮನೀಶ್ ಪಾಂಡೆ ಅವರು ಅರ್ಧಶತಕ ಸಿಡಿಸಿ ಮಿಂಚಿದರು. ಜೊತೆಗೆ ಈ ಜೋಡಿ 71 ಎಸೆತಗಳಲ್ಲಿ ಶತಕದ ಜೊತೆಯಾಟವಾಡಿತು. ವಿಜಯ್ ಶಂಕರ್ 51 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಮನೀಶ್ ಪಾಂಡೆ 47 ಎಸೆತಗಳಲ್ಲಿ ಅಜೇಯ 83 (8 ಸಿಕ್ಸರ್, 4 ಬೌಂಡರಿ) ಸಿಡಿಸಿದರು. 

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಅವರು 26 ಎಸೆತಗಳಲ್ಲಿ  36 ರನ್ ಸಿಡಿಸಿ ಚೇತೋಹಾರಿ ಪ್ರದರ್ಶನ ನೀಡಿದರು. ಕೊನೆಯಲ್ಲಿ ರಿಯಾನ್ ಪರಾಗ್ ಹಾಗೂ ಜೋಫ್ರಾ ಆರ್ಚರ್ ಅವರು ಸ್ಫೋಟಕವಾಗಿ ಬ್ಯಾಟಿಂಗ್ ಪ್ರದರ್ಶಿಸಿದ ಕಾರಣ ರಾಜಸ್ಥಾನ್ ತಂಡ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತ್ತು. 
  • Blogger Comments
  • Facebook Comments

0 comments:

Post a Comment

Item Reviewed: ಪಾಂಡೆ-ಶಂಕರ್ ಜುಗಲ್‍ಬಂದಿ : ಹೈದರಾಬಾದ್‍ಗೆ 8 ವಿಕೆಟ್‍ಗಳ ಜಯ Rating: 5 Reviewed By: karavali Times
Scroll to Top