ವಿಟ್ಲ, ಡಿ. 19, 2020 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮ ಪಂಚಾಯತಿನಲ್ಲಿ ಬಿಜೆಪಿಗರ ನಡೆಯಿಂದ ಅಸಮಾಧಾನಗೊಂಡು ಬಂಡಾಯಗಾರರಾಗಿ ಸ್ಪರ್ಧಿಸಿರುವ ಸ್ವಪಕ್ಷೀಯರನ್ನು ಸಮರ್ಥಿಸಲಾಗದೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿ ಕೈ ತೊಳೆದುಕೊಳ್ಳಲು ಬಿಜೆಪಿ ನಾಯಕರು ಹೆಣಗಾಟ ನಡೆಸುತ್ತಿದ್ದಾರೆ ಎಂದು ಅನಂತಾಡಿ ವಲಯ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕಳೆದ ಬಾರಿ ಅನಂತಾಡಿ ಗ್ರಾಮ ಪಂಚಾಯತಿನಲ್ಲಿ ಬಿಜೆಪಿ ಬೆಂಬಲಿತರು ಬಹುಮತ ಪಡೆದು 5 ವರ್ಷಗಳ ಕಾಲ ಆಡಳಿತ ನಡೆಸಿದ್ದರು. ತಮ್ಮ ಆಡಳಿತಾವಧಿಯಲ್ಲಿ ಬಿಜೆಪಿಗರಿಂದ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಿಲ್ಲದೆ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ಸ್ವಪಕ್ಷೀಯರ ನಡುವಿನ ಆಂತರಿಕ ಕಚ್ಚಾಟದಿಂದಾಗಿ ಗ್ರಾಮದ ಅಭಿವೃದ್ಧಿ ಮರೀಚಿಕೆಯಾಗಿತ್ತು. ಬಿಜೆಪಿಗರ ಈ ಎಲ್ಲಾ ನಡೆಯನ್ನು ಗ್ರಾಮದ ಜನ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಆಂತರಿಕ ಕಚ್ಚಾಟದ ಪರಿಣಾಮವಾಗಿ ಈ ಬಾರಿಯ ಪಂಚಾಯತ್ ಚುನಾವಣೆಯಲ್ಲಿ ಸ್ಥಳೀಯ ಬಿಜೆಪಿ ಪ್ರಮುಖರಾಗಿದ್ದವರೇ ಇದೀಗ ಬಿಜೆಪಿಗೆ ಬಂಡಾಯ ಎದುರಾಳಿಗಳಾಗಿ ಪಕ್ಷೇತರವಾಗಿ ಸ್ಪರ್ಧೆಗೆ ಇಳಿದಿದ್ದಾರೆ.
ಸ್ವಪಕ್ಷೀಯರ ಬಂಡಾಯ ಇದೀಗ ಬಿಜೆಪಿಗೆ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ತಮ್ಮ ವೈಫಲ್ಯ ಹಾಗೂ ಅಹಂಕಾರವನ್ನು ಮರೆಮಾಚಲು ಬಂಡಾಯಗಾರರ ಸ್ಪರ್ಧೆಗೆ ಕಾಂಗ್ರೆಸ್ ಹಾಗೂ ಮಾಜಿ ಸಚಿವರು ಕಾರಣ ಎಂಬ ಅಪಪ್ರಚಾರದ ಮಾತುಗಳನ್ನು ಪಂಚಾಯತ್ ವ್ಯಾಪ್ತಿಯಲ್ಲಿ ಹರಿಯಬಿಟ್ಟು ಮತ್ತೆ ತಮ್ಮ ಹಳೆ ಚಾಳಿಯನ್ನು ಮುಂದುವರಿಸಿದ್ದಾರೆ. ತಮ್ಮ ಸಾಧನೆ, ಅಭಿವೃದ್ದಿ ಏನೂ ಇಲ್ಲದಿದ್ದರೂ ವಿರೋಧಿ ಪಾಳಯದ ಮೇಲೆ ವಿನಾ ಕಾರಣ ಅಪಪ್ರಚಾರ ಕೈಗೊಂಡು ಆ ಮೂಲಕ ಮತ ಪಡೆದು ಜಯ ಗಳಿಸುತ್ತೇವೆ ಎಂಬ ಭ್ರಮೆಯಲ್ಲಿ ಈಗಲೂ ಬಿಜೆಪಿಗರು ತೇಲಾಡುತ್ತಿದ್ದಾರೆ. ಆದರೆ ಇದೀಗ ಬಿಜೆಪಿಗರ ಅಪಪ್ರಚಾರ, ಸುಳ್ಳುಗಳನ್ನು ಜನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು, ಯಾವುದೇ ಕಾರಣಕ್ಕೂ ಕಿವಿಗೊಡುವ ಸ್ಥಿತಿಯಲ್ಲಿಲ್ಲ ಎಂದಿರುವ ಕಾಂಗ್ರೆಸ್ ನಾಯಕರು ಈ ಬಾರಿ ಅನಂತಾಡಿ ಪಂಚಾಯತಿನಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರವನ್ನೇ ಮಾಡಿರುವ ಬಿಜೆಪಿಗರಿಗೆ ತಕ್ಕ ಶಾಸ್ತಿ ಮಾಡಲು ಜನ ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅನಂತಾಡಿ ಪಂಚಾಯತಿನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆಗೂ, ಕಾಂಗ್ರೆಸ್ಸಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಬಿಜೆಪಿಗರು ಕಾಂಗ್ರೆಸ್ ಹಾಗೂ ಮಾಜಿ ಸಚಿವರನ್ನು ಎಳೆದು ತರುವ ಮೂಲಕ ಕಪೋಲ ಕಲ್ಪತ ಆರೋಪಗಳನ್ನು ಮಾಡುತ್ತಿದ್ದಾರೆ. 5 ವರ್ಷ ಆಡಳಿತ ನಡೆಸಿದ ಬಿಜೆಪಿಗರ ಹೇಳಿಕೊಳ್ಳಲು ಸಾಧನೆಗಳೇನೂ ಇಲ್ಲದ್ದರಿಂದ ಈ ರೀತಿಯ ಅಪಪ್ರಚಾರಕ್ಕೆ ಇಳಿದಿದ್ದಾರೆ ಎನ್ನುವ ಸ್ಥಳೀಯ ಕಾಂಗ್ರೆಸ್ ಮುಖಂಡರು ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಅಲ್ಪಸಂಖ್ಯಾತ ಧಾರ್ಮಿಕ ಕಟ್ಟಡ ನಿರ್ಮಾಣಕ್ಕಾಗಿ ಪಂಚಾಯತ್‍ಗೆ ಅರ್ಜಿ ಸಲ್ಲಿಸದೆ ಇದ್ದರೂ ಈ ಬಗ್ಗೆ ವಿಷಯ ಪ್ರಸ್ತಾಪಿಸಿ ರಾಜಕೀಯದ ಮಧ್ಯೆ ಜಾತಿ-ಧರ್ಮ ಎಳೆದು ತಂದು ಕ್ಷುಲ್ಲಕ ರಾಜಕಾರಣ ಮಾಡುತ್ತಿರುವ ಬಿಜೆಪಿಗರ ನಡೆಯನ್ನು ಅನಂತಾಡಿ ವಲಯ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸಿದೆ.
0 comments:
Post a Comment