ಆಡಳಿತ ಯಂತ್ರ ಅಕ್ರಮಗಳ ವಿರುದ್ದ ನಿರ್ಣಯ ಕೈಗೊಂಡರೆ, ಆಡಳಿತಾಧಿಕಾರಿಗಳ ಅವಧಿಯಲ್ಲಿ ಡೀಲಿಂಗ್ ಮೂಲಕ ಸಕ್ರಮ ಆಗುತ್ತಿದೆ : ಬಂಟ್ವಾಳ ಪುರಸಭಾ ಸದಸ್ಯ ರಾಮಕೃಷ್ಣ ಆಳ್ವ ಗಂಭೀರ ಆರೋಪ - Karavali Times ಆಡಳಿತ ಯಂತ್ರ ಅಕ್ರಮಗಳ ವಿರುದ್ದ ನಿರ್ಣಯ ಕೈಗೊಂಡರೆ, ಆಡಳಿತಾಧಿಕಾರಿಗಳ ಅವಧಿಯಲ್ಲಿ ಡೀಲಿಂಗ್ ಮೂಲಕ ಸಕ್ರಮ ಆಗುತ್ತಿದೆ : ಬಂಟ್ವಾಳ ಪುರಸಭಾ ಸದಸ್ಯ ರಾಮಕೃಷ್ಣ ಆಳ್ವ ಗಂಭೀರ ಆರೋಪ - Karavali Times

728x90

13 January 2021

ಆಡಳಿತ ಯಂತ್ರ ಅಕ್ರಮಗಳ ವಿರುದ್ದ ನಿರ್ಣಯ ಕೈಗೊಂಡರೆ, ಆಡಳಿತಾಧಿಕಾರಿಗಳ ಅವಧಿಯಲ್ಲಿ ಡೀಲಿಂಗ್ ಮೂಲಕ ಸಕ್ರಮ ಆಗುತ್ತಿದೆ : ಬಂಟ್ವಾಳ ಪುರಸಭಾ ಸದಸ್ಯ ರಾಮಕೃಷ್ಣ ಆಳ್ವ ಗಂಭೀರ ಆರೋಪ

ಬಂಟ್ವಾಳ, ಜ. 14, 2021 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ಆರೋಗ್ಯಾಧಿಕಾರಿ ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಹೊರಳಾಡಿ ಖಾಸಗಿ ಮನೆಯಲ್ಲಿ ಹೋಗಿ ಮಲಗಿದ್ದಲ್ಲದೆ ಪುರಸಭಾ ಹಿರಿಯ ಅಧಿಕಾರಿಗಳ ವಿರುದ್ದ ಕಿರುಕುಳ ಆರೋಪ ಹೊರಿಸಿ ಡೆತ್ ನೋಟ್ ಬರೆದು ಅತ್ಮಹತ್ಯೆಗೆ ಯತ್ನಿಸಿದ್ದು ಎಂಬ ಸುಳ್ಳು ಸುದ್ದಿ ಹಬ್ಬಿಸಿದ ಡೆತ್ ನೋಟ್ ಮಾಧ್ಯಮಗಳಿಗೆ ಸೋರಿಕೆಯಾದುದಕ್ಕೆ ಪುರಸಭಾಧ್ಯಕ್ಷರು ನೇರ ಹೊಣೆ ಎಂದು ವಿಪಕ್ಷ ಹಿರಿಯ ಸದಸ್ಯ ಎ ಗೋವಿಂದ ಪ್ರಭು ಆರೋಪಿಸಿದರು. ಬುಧವಾರ ಇಲ್ಲಿನ ಪುರಸಭಾ ಕಛೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭೆಯ ಆರೋಗ್ಯಾಧಿಕಾರಿ ಕಳೆದ ತಿಂಗಳ ಸಾಮಾನ್ಯ ಸಭೆಯ ದಿನದಂದೇ ಆತ್ಮಹತ್ಯೆ ಯತ್ನ ನಾಟಕ ಮಾಡಿದ್ದು, ಈ ಬಾರಿಯ ಸಭೆಗೂ ಗೈರಾಗಿದ್ದಾರೆ ಎಂದು ವಿಷಯ ಪ್ರಸ್ತಾಪಿಸಿದ ಗೋವಿಂದ ಪ್ರಭು, ಕಳೆದ ಸಭೆಯ ವೇಳೆ ಆರೋಗ್ಯಾಧಿಕಾರಿ ಮದ್ಯಪಾನ ಮಾಡಿ ಬೀದಿ ರಂಪಾಟ ಮಾಡಿದ್ದಲ್ಲದೆ ಆತ್ಮಹತ್ಯೆ ಯತ್ನ ಎಂದು ಬಿಂಬಿಸಿ ಡೆತ್ ನೋಟ್ ಬರೆದು ಪುರಸಭಾಧ್ಯಕ್ಷರಿಗೆ ರವಾನಿಸಿದ್ದರು. ಆದರೆ ಈ ಡೆತ್ ನೋಟ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂಬಂತೆ ನೇರವಾಗಿ ಮಾಧ್ಯಮದಲ್ಲಿ ಅಚ್ಚಾಗಿ ಬಂದಿದ್ದು, ಇದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದವರು ಯಾರು ಎಂದು ಪ್ರಶ್ನಿಸಿದರು. ಆರೋಗ್ಯಾಧಿಕಾರಿಯ ದುರ್ವರ್ತನೆಯಿಂದಾಗಿ ಬಂಟ್ವಾಳ ಪುರಸಭೆಯ ಮಾನ ಇಡೀ ರಾಜ್ಯದ ಮುಂದೆ ಹರಾಜಾಗಿದೆ. ಈ ಬಗ್ಗೆ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರು ಆರೋಗ್ಯಾಧಿಕಾರಿ ಆತ್ಮಹತ್ಯೆ ಯತ್ನ ನಡೆಸುವ, ಮದ್ಯಪಾನ ಹಾಗೂ ಡೆತ್ ನೋಟ್ ಬರೆಯುವ ಸಂದರ್ಭ ಅವರ ಜೊತೆಗಿದ್ದವರು ಯಾರು ಎಂಬುದನ್ನು ಎಲ್ಲರಿಗೂ ತಿಳಿದಿದೆ. ಅವರೇ ಇದನ್ನು ಮಾಧ್ಯಮಗಳಿಗೂ ಸೋರಿಕೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು. ಇದೇ ವೇಳೆ ಮಾತನಾಡಿದ ಮೂನಿಶ್ ಅಲಿ ಬಂಟ್ವಾಳ ಪುರಸಭೆಗೆ ಆರೋಗ್ಯಾಧಿಕಾರಿ ಫಲಿಸುವುದಿಲ್ಲ. ಯಾವಾಗ ಯಾರು ಬರುತ್ತಾರೆ ಹೋಗುತ್ತಾರೆ ಎಂಬುದು ಸ್ವತಃ ಸದಸ್ಯರ ಗಮನಕ್ಕೇ ಬರುವುದಿಲ್ಲ. ಬಂದ ಆರೋಗ್ಯಾಧಿಕಾರಿಯನ್ನು ಸದಸ್ಯರು ಕಂಡು ಮಾತನಾಡಿಸುವಷ್ಟರಲ್ಲಿ ಅವರು ಹೋಗಿ ಆಗಿರುತ್ತದೆ. ಇದರಿಂದ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಯಾರಿಗೆ ಹೇಳುವುದು ಎಂಬುದೇ ಅರ್ಥ ಆಗುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಅಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅವರು ಆತ್ಮಹತ್ಯೆಗೆ ಯತ್ನಿಸಿದ ಆರೋಗ್ಯಾಧಿಕಾರಿಯನ್ನು ನಾನೇ ಸ್ವತಃ ಭೇಟಿಯಾಗಿ ವಿಚಾರಿಸಿ ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಅಲ್ಲದೆ ಈ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಇಲಾಖಾ ತನಿಖೆ ನಡೆದಿದ್ದು, ಈ ಸಂದರ್ಭ ಅಧಿಕಾರಿಗಳ ಮುಂದೆ ಆರೋಗ್ಯಾಧಿಕಾರಿ ತನ್ನದೇ ತಪ್ಪು ಎಂದು ತಪ್ಪೊಪ್ಪಿಕೊಂಡಿದ್ದು, ಪ್ರಕರಣ ಅಲ್ಲಿಗೆ ಮುಕ್ತಾಯಗೊಂಡಿದೆ. ಈ ಬಗ್ಗೆ ಚರ್ಚಿಸಿ ವಿನಾ ಕಾರಣ ಕಾಲಹರಣ ಮಾಡುವುದು ಬೇಡ ಎಂದು ಚರ್ಚೆಗೆ ತೆರೆ ಎಳೆದರು. ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಸ, ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗ್ಗೆ ಚರ್ಚೆ ನಿರಂತರವಾಗಿದ್ದು, ಈ ಬಾರಿಯೂ ಅದು ಪುನರಾವರ್ತನೆಯಾಗಿದೆ. ಇದಕ್ಕೆ ಪರಿಸಮಾಪ್ತಿ ಎಂಬುದು ಇಲ್ಲವೇ ಎಂದು ಸದಸ್ಯರು ಪಕ್ಷಬೇಧ ಮರೆತು ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ಅವರನ್ನು ತೀವ್ರ ತರಾಟೆಗೆಳೆದರು. ವಾಹನದ ಕೊರತೆ ಬಗ್ಗೆ ಅಧಿಕಾರಿಗಳು ನೆಪ ಹೇಳಿದಾಗ ರಮಾನಾಥ ರೈ ಸಚಿವರಾಗಿದ್ದಾಗಲೇ ಇಲ್ಲಿನ ಕಸ, ತ್ಯಾಜ್ಯ ಸಮಸ್ಯೆಗೆ ವಾಹನ ಖರೀದಿಗೆ 90 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ. ಮೂರು ವರ್ಷಗಳು ಕಳೆದರೂ ಇನ್ನೂ ವಾಹನ ಖರೀದಿ ಮಾಡಲು ಅಧಿಕಾರಿಗಳಿಗೆ ಇರುವ ಇಚ್ಛಾಶಕ್ತಿಯ ಕೊರತೆಗೆ ಕಾರಣವಾದರೂ ಏನು ಎಂದು ಸದಸ್ಯರು ಮುಖ್ಯಾಧಿಕಾರಿಗಳನ್ನು ತೀವ್ರವಾಗಿ ಝಾಡಿಸಿದರು. ಇನ್ನೂ ಪುರಸಭಾ ವ್ಯಾಪ್ತಿಯಲ್ಲಿ ಕಸ ಸಂಗ್ರಹ, ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದಾಗಿ ತಕ್ಷಣದಿಂದ ತೆರಿಗೆ ಜೊತೆಯಲ್ಲಿ ಕಸ, ತ್ಯಾಜ್ಯ ಸಂಗ್ರಹ ಶುಲ್ಕ ಸಂಗ್ರಹ ಮಾಡುವುದನ್ನು ನಿಲ್ಲಿಸುವಂತೆ ಸದಸ್ಯರು ಪಕ್ಷ ಬೇಧ ಮರೆತು ತಾಕೀತು ಮಾಡಿದರು. ಬಂಟ್ವಾಳ, ಬಿ ಸಿ ರೋಡು, ಕೈಕಂಬ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ ಎಂದು ವಾಸು ಪೂಜಾರಿ, ಲುಕ್ಮಾನ್, ಹಸೈನಾರ್, ಗಂಗಾಧರ್, ಮೂನಿಶ್ ಅವರು ಆರೋಪಿಸಿದರೆ, ಪಾಣೆಮಂಗಳೂರು ಸಾಲುಮರ ಪ್ರದೇಶದಲ್ಲೂ ನರಕಸದೃಶ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇದ್ರೀಸ್ ದೂರಿದರು. ಮೆಲ್ಕಾರ್ ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ ಎಂದು ಸಿದ್ದೀಕ್ ಆರೋಪಿಸಿದರು. ಅಕ್ರಮ ಕದ ನಂಬ್ರ, ಡಬಲ್ ಟ್ಯಾಕ್ಸ್ ಸಂಬಂಧಿ ವಿಷಯ ಚರ್ಚೆಗೆ ಬಂದಾಗ ಪುರಸಭಾ ಆಡಳಿತ ಯಂತ್ರದಲ್ಲಿ ಅಕ್ರಮಗಳ ನಿಯಂತ್ರಣಕ್ಕೆ ನಿರ್ಣಯ ಕೈಗೊಂಡರೆ ಜನಪ್ರತಿನಿಧಿಗಳ ಆಡಳಿತ ಇಲ್ಲದೆ ಆಡಳಿತಾಧಿಕಾರಿಗಳು ಅಧಿಕಾರ ಚಲಾಯಿಸುವ ಸಂದರ್ಭ ಎಲ್ಲವೂ ಡೀಲಿಂಗ್ ಮಾದರಿಯಲ್ಲಿ ಅಧಿಕಾರಿಗಳು ಸಕ್ರಮವಾಗುತ್ತದೆ ಎಂದು ಸದಸ್ಯ ರಾಮಕೃಷ್ಣ ಆಳ್ವ ಗಂಭೀರವಾಗಿ ಆರೋಪಿಸಿದರು. ಇದರಲ್ಲಿ ಯಾರಿಗೆ ಎಷ್ಟೆಷ್ಟು ಸಂದಾಯವಾಗುತ್ತದೆ ಎಂಬುದೂ ಗುಟ್ಟಾಗಿ ಉಳಿದಿಲ್ಲ ಎಂದು ದೂರಿದರು. ಪುರಸಭೆಯಿಂದ ಪರಿಶಿಷ್ಟ ಜಾತಿ-ಪಂಗಡಗಳಿಗೆ ಸಬ್ಸಿಡಿ ಸಾಲದ ವ್ಯವಸ್ಥೆ ಇದ್ದರೂ ಬ್ಯಾಂಕ್ ಅಧಿಕಾರಿಗಳು ಸತಾಯಿಸುವುದರಿಂದ ಇದರ ಸದುಪಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಬ್ಯಾಂಕ್ ಸಾಲಕ್ಕೆ ಹೊಂದುವುದನ್ನು ಬಿಟ್ಟು ನೇರವಾಗಿ ಪುರಸಭೆಯಿಂದಲೇ ಇದನ್ನು ನೀಡುವಂತೆ ಕ್ರಮ ಆಗಬೇಕು ಎಂದು ಜನಾರ್ದನ ಚೆಂಡ್ತಿಮಾರ್ ಆಗ್ರಹಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಆಡಳಿತ ಯಂತ್ರ ಅಕ್ರಮಗಳ ವಿರುದ್ದ ನಿರ್ಣಯ ಕೈಗೊಂಡರೆ, ಆಡಳಿತಾಧಿಕಾರಿಗಳ ಅವಧಿಯಲ್ಲಿ ಡೀಲಿಂಗ್ ಮೂಲಕ ಸಕ್ರಮ ಆಗುತ್ತಿದೆ : ಬಂಟ್ವಾಳ ಪುರಸಭಾ ಸದಸ್ಯ ರಾಮಕೃಷ್ಣ ಆಳ್ವ ಗಂಭೀರ ಆರೋಪ Rating: 5 Reviewed By: karavali Times
Scroll to Top