ಬಂಟ್ವಾಳ ತಾ ಪಂ‌ ಅಧ್ಯಕ್ಷರ ತುಘಲಕ್ ನಿರ್ಧಾರವೇ ಸರಪಾಡಿ ಹೈಡ್ರಾಮಾಕ್ಕೆ ಕಾರಣವಾಯಿತೇ? - Karavali Times ಬಂಟ್ವಾಳ ತಾ ಪಂ‌ ಅಧ್ಯಕ್ಷರ ತುಘಲಕ್ ನಿರ್ಧಾರವೇ ಸರಪಾಡಿ ಹೈಡ್ರಾಮಾಕ್ಕೆ ಕಾರಣವಾಯಿತೇ? - Karavali Times

728x90

30 January 2021

ಬಂಟ್ವಾಳ ತಾ ಪಂ‌ ಅಧ್ಯಕ್ಷರ ತುಘಲಕ್ ನಿರ್ಧಾರವೇ ಸರಪಾಡಿ ಹೈಡ್ರಾಮಾಕ್ಕೆ ಕಾರಣವಾಯಿತೇ?

ಬಂಟ್ವಾಳ‌, ಜ. 30, 2021 (ಕರಾವಳಿ ಟೈಮ್ಸ್) : ಇಲ್ಲಿನ ತಾ ಪಂ ಅಧ್ಯಕ್ಷರು ಯಾವುದೇ ಅಧಿಕಾರಿಗಳನ್ನಾಗಲೀ, ತಾ ಪಂ, ಜಿ ಪಂ ಸದಸ್ಯರುಗಳನ್ನಾಗಲೀ ವಿಶ್ವಾಸಕ್ಕೆ ಪಡೆದುಕೊಳ್ಳದೆ, ಯಾವುದೇ ಸಮಾಲೋಚನಾ ಸಭೆಯನ್ನೂ ನಡೆಸದೆ ಸರಪಾಡಿ ಬಹುಗ್ರಾಮ‌ ಕುಡಿಯುನ ನೀರಿನ ಘಟಕಕ್ಕೆ ಸಚಿವರು ಉದ್ಘಾಟಿಸುವ ಮುನ್ನಾ ದಿನ ಶನಿವಾರ ಏಕಾಏಕಿ ವೀಕ್ಷಣೆಗೆ ತೆರಳಿದ್ದು ಬಳಿಕ ಬಿಜೆಪಿ ಕಾರ್ಯಕರ್ತರಿಂದ ಪ್ರತಿರೋಧ ಎದುರಿಸಿ ಒಂದು ರೀತಿಯ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಮಾಜಿ ಸಚಿವ ರಮಾನಾಥ ರೈ ಅವರು ಸಚಿವರಾಗಿದ್ದ ವೇಳೆ ಕಳೆದ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಬಂಟ್ವಾಳ ತಾಲೂಕಿಗೆ ಮಂಜೂರುಗೊಂಡ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ‌ ಪೈಕಿ ಒಂದಾದ ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರಮಾನಾಥ ರೈ ಅವರು ಸುಮಾರು 33 ಕೋಟಿ ರೂಪಾಯಿ ಒದಗಿಸಿದ್ದರು. ಇದೀಗ ಈ ಯೋಜನೆ ಪೂರ್ಣಗೊಂಡಿದ್ದು, ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಅವರು ಭಾನುವಾರ (ಜ 31) ರಂದು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಈ ಮಧ್ಯೆ ತಾ ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಅವರು ಸಹಸದಸ್ಯರೊಂದಿಗಾಗಲೀ, ಜಿ ಪಂ ಸದಸ್ಯರೊಂದಿಗಾಗಲಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗಾಗಲೀ ಯಾವುದೇ ಸಮಾಲೋಚನೆ ನಡೆಸದೆ, ಕನಿಷ್ಠ ಪಕ್ಷ ಸಭೆಯನ್ನಾಗಲೀ ನಡೆಸದೆ ಏಕಾಏಕಿ ಪಕ್ಷದ ನಿಯೋಗ‌ ಕಟ್ಟಿಕೊಂಡು‌ ಘಟಕ ವೀಕ್ಷಣೆಗೆ ತೆರಳಿದ್ದು, ಇಡೀ ಹೈಡ್ರಾಮಾಕ್ಕೆ ಕಾರಣವಾಗಿದೆ ಎಂಬ ಆಕ್ರೋಶ ತಾಲೂಕಿನ ಜನತೆಯಿಂದ ಕೇಳಿ ಬಂದಿದೆ. ತಾ ಪಂ ಅಧ್ಯಕ್ಷರ ತುಘಲಕ್ ನಿರ್ಧಾರದಿಂದಾಗಿ ಕೋಟಿ‌‌ ಕೋಟಿ ಅನುದಾನ ಒದಗಿಸಿದ ಮಾಜಿ ಸಚಿವ ರಮಾನಾಥ ರೈ ಅವರೂ ಕೂಡಾ ಅಗೌರವವನ್ನು ಮೈಮೇಳೆದುಕೊಳ್ಳುವಂತಾಗಿದೆ ಎಂಬ ಮಾತು ಸ್ವಪಕ್ಷೀಯ ನಾಯಕರಿಂದಲೇ ಕೇಳಿ ಬರುವಂತಾಗಿದೆ. ತಾ ಪಂ‌ ಅಧ್ಯಕ್ಷರು ಪಕ್ಷ ಬೇಧ ಮರೆತು ತಾ ಪಂ‌‌ ಹಾಗೂ ತಾಲೂಕಿನ ಜಿ‌ ಪಂ ಸದಸ್ಯರುಗಳ‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಬಳಿಕ ಅಲ್ಲಿಂದಲೇ ನಿಯೋಗದೊಂದಿಗೆ ಘಟಕ‌ ವೀಕ್ಷಣೆಗೆ ತೆರಳಿದ್ದರೆ ಅದಕ್ಕೊಂದು ನಿಯಮ ಎನ್ನುವಂತಿತ್ತು. ಈ ಸಂದರ್ಭ ಯೋಜನೆಗೆ ಅನುದಾನ ಒದಗಿಸಿದ ಮಾಜಿ ಸಚಿವರನ್ನೂ ಆಹ್ವಾನಿಸಿ ವೀಕ್ಷಣೆ ನಡೆಸಿದ್ದರೆ ಮಾಜಿ ಸಚಿವರಿಗೂ ಗೌರವ ನೀಡಿದಂತಾಗುತ್ತಿತ್ತು. ಆದರೆ ತಾ ಪಂ ಅಧ್ಯಕ್ಷರು ಸರಕಾರಿ ಯೋಜನೆಯನ್ನು ಒಂದು ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಲು ಹೊರಟದ್ದೇ ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣವಾಯಿತು. ತಾ ಪಂ ಅಧ್ಯಕ್ಷರು ಸರಕಾರಿ ಯೋಜನೆಯ ಕ್ರೆಡಿಟನ್ನು ಒಂದು ಪಕ್ಷಕ್ಕೆ ಸೀಮಿತಗೊಂಡು ಪಡೆಯಲು ಯತ್ನಿಸಿದ್ದನ್ನು ಬಿಜೆಪಿ ಕಾರ್ಯಕರ್ತರು ಸೂಕ್ತ ಎದಿರೇಟು ನೀಡುವ ಮೂಲಕ ವಿಫಲಗೊಳಿಸಿದ್ದಾರೆ. ತಾ ಪಂ ಅಧ್ಯಕ್ಷರ ನಿಯೋಗ ಸರಪಾಡಿ ನೀರಿನ ಘಟಕದ ಬಳಿ ಬರುವುದನ್ನು ತಿಳಿದ ಬಿಜೆಪಿ ಕಾರ್ಯಕರ್ತರು ಮೊದಲೆ ಅಲ್ಲಿ ಜಮಾಯಿಸಿ ಘೋಷಣೆ, ಧಿಕ್ಕಾರ ಕೂಗಲು ಆರಂಭಿಸಿದರು. ಘಟಕಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬೀಗ ಹಾಕಿ ಅನುಮತಿ ರಹಿತ ಪ್ರವೇಶ ನಿಷೇಧಿಸಲಾಗಿದೆ ಎಂಬ ನಾಮಫಲಕವನ್ನೂ ಹಾಕಿದ್ದರು.‌ ಅಧಿಕಾರಿಗಳ ಅಪ್ಪಣೆ ವಿನಃ ಯಾರನ್ನೂ ಒಳಗೆ ಪ್ರವೇಶಿಸಲು ಅನುಮತಿಸಬಾರದು ಎಂದು ಬಿಜೆಪಿಗರು ಪೊಲೀಸರನ್ನು ಆಗ್ರಹಿಸಿದರು. ಅಲ್ಲದೆ ನಾಳೆ ಸಚಿವರು ಈ ಯೋಜನೆ ಉದ್ಘಾಟಿಸಲಿದ್ದು ಆ ಸಂದರ್ಭ ಬಂದು ವೀಕ್ಷಿಸಿ ಊಟ ಕಾಫಿ ಸೇವಿಸಿ ಹೋಗಲಿ ಎಂದು ಬಿಜೆಪಿ ಕಾರ್ಯಕರ್ತರು ವ್ಯಂಗ್ಯ ಮಾತುಗಳ ಮೂಲಕ ಪ್ರತಿಕ್ರಯಿಸಿದರು. ಈ ಸಂದರ್ಭ ಪೊಲೀಸ್ ಅಧಿಕಾರಿಗಳು ಕೂಡಾ ಖಡಕ್ ಮಾತುಗಳಲ್ಲಿ ಪ್ರತಿಕ್ರಯಿಸಿದ್ದು, ಲಾ ಆಂಡ್ ಆರ್ಡರ್ ಕಾಪಾಡುವುದು ನಮ್ಮ‌ ಕರ್ತವ್ಯವಾಗಿದ್ದು, ನೀರಿನ‌ ಘಟಕಕ್ಕೆ ಸಂಬಂಧಿಸಿದ ಅಧಿಕಾರಿಗಳು ಅಥವಾ ಇಂಜಿನಿಯರ್ ಗಳು ಸ್ಥಳಕ್ಕೆ ಬಂದು ಅನುಮತಿ ನೀಡಿದರಷ್ಟೆ ನಾವು ಅವಕಾಶ‌ ನೀಡಲು ಸಾಧ್ಯ ಎಂದು‌ ಕಡ್ಡಿ‌ ಮುರಿದಂತೆ ಪ್ರತಿಕ್ರಯಿಸಿದರು. ಇದರಿಂದ ತನ್ನ ನಿರ್ಧಾರದ ಬಗ್ಗೆ ಹಳಿದುಕೊಂಡ ತಾ ಪಂ ಅಧ್ಯಕ್ಷರು ಬಳಿಕ ಪಕ್ಷದ ಕೆಲ ನಾಯಕರು ಹಾಗೂ ಕಾರ್ಯಕರ್ತರನ್ನು ಸೇರಿಸಿಕೊಂಡು ಒಂದಷ್ಟು ಸಮಯ ಧರಣಿ‌ ನಡೆಸಿ ಬಳಿಕ ಸ್ಥಳಕ್ಕೆ ಯಾವ ಅಧಿಕಾರಿಯೂ ಮೂಸಿ ನೋಡದ ಹಿನ್ನಲೆಯಲ್ಲಿ ಬಂದ‌ ದಾರಿಗೆ ಸುಂಕ ಇಲ್ಲ ಎಂಬಂತೆ ಅಧ್ಯಕ್ಷರ ನಿಯೋಗ ವಾಪಸ್ಸಾಯಿತು. ಇಲ್ಲಿಗೆ ಸರಪಾಡಿ ಹೈಡ್ರಾಮಾ ಕೊನೆಗೊಂಡಿತು.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ತಾ ಪಂ‌ ಅಧ್ಯಕ್ಷರ ತುಘಲಕ್ ನಿರ್ಧಾರವೇ ಸರಪಾಡಿ ಹೈಡ್ರಾಮಾಕ್ಕೆ ಕಾರಣವಾಯಿತೇ? Rating: 5 Reviewed By: karavali Times
Scroll to Top