ನವದೆಹಲಿ, ಎಪ್ರಿಲ್ 15, 2021 (ಕರಾವಳಿ ಟೈಮ್ಸ್) : ದೇಶದಲ್ಲಿ ನಿತ್ಯವೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಎಲ್ಲ ರಾಜ್ಯಗಳೂ ತೀವ್ರ ಆತಂಕದ ಸ್ಥಿತಿ ಎದುರಿಸುವಂತಾಗಿದೆ. ಕೊರೋನಾ ನಿಯಂತ್ರಣಕ್ಕೆ ಪ್ರತೀ ರಾಜ್ಯಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿಯಲ್ಲಿ ವೀಕೆಂಡ್ ಲಾಕ್‍ಡೌನ್ ಘೋಷಣೆ ಮಾಡಿದ್ದಾರೆ.
ಮದುವೆಗಳಿಗೆ ಪಾಸ್ ಕಡ್ಡಾಯ ಮಾಡಲಾಗಿದೆ. ಸಿನೆಮಾ ಥಿಯೇಟರ್‍ಗಳಲ್ಲಿ ಶೇ.30ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ. ವಾರಾಂತ್ಯದಲ್ಲಿ ರೆಸ್ಟೋರೆಂಟ್ ಹೋಟೆಲ್, ಮಾಲ್, ಜಿಮ್ ಕಡ್ಡಾಯವಾಗಿ ಬಂದ್ ಮಾಡಲಾಗುತ್ತಿದೆ. ಅಲ್ಲದೆ ಸಿನಿಮಾ ಥೀಯೇಟರ್‍ಗಳು ಕೂಡ ವಾರಾಂತ್ಯದಲ್ಲಿ ಬಂದ್ ಆಗಲಿದೆ.
ವೀಕೆಂಡ್ ಪ್ರಯಾಣಕ್ಕೆ ಟಿಕೆಟ್ ತೋರಿಸಿದರಷ್ಟೆ ಅನುಮತಿ ನೀಡಲಾಗುತ್ತದೆ. ಅತ್ಯವಶ್ಯಕ ಓಡಾಟಕಷ್ಟೇ ಅವಕಾಶ ನೀಡಲಾಗುತ್ತಿದ್ದು, ಅನಾವಶ್ಯಕ ಓಡಾಟವನ್ನು ಸಂಪೂರ್ಣ ನಿರ್ಬಂಧಿಸಲಾಗುತ್ತಿದೆ. ರೆಸ್ಟೋರೆಂಟ್‍ಗಳಲ್ಲಿ ಪಾರ್ಸೆಲ್‍ಗಷ್ಟೇ ಅವಕಾಶ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಪ್ಯೂ ವಿಧಿಸಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಯಾವುದೇ ಬೆಡ್ ಕೊರತೆ ಇಲ್ಲ. ಒಂದೆರಡು ಆಸ್ಪತ್ರೆಗಳಲ್ಲಿ ಬೆಡ್ ಫುಲ್ ಆಗಿರಬಹುದು. ಆದ್ರೆ ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇದೆ. ಸಾರ್ವಜನಿಕರು ಕೂಡಾ ಇಂತದ್ದೇ ಆಸ್ಪತ್ರೆ ಬೇಕೆಂದು ಹಠ ಮಾಡಬಾರದು. ಅದು ನಮ್ಮನ್ನು ಸಂಕಷ್ಟಕ್ಕೆ ದೂಡುತ್ತದೆ ಎಂದಿದ್ದಾರೆ.
ಆಸ್ಪತ್ರೆ, ರೈಲ್ವೇ ನಿಲ್ದಾಣ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಅವಕಾಶ ಕಲ್ಪಿಸಲಾಗಿದೆ. ವೀಕೆಂಡ್ ಲಾಕ್‍ಡೌನ್ ವೇಳೆ ಸಂಚರಿಸುವ ಜನರು ಸ್ಥಳೀಯ ಅಧಿಕಾರಿಗಳಿಂದ ಪಾಸ್ ಪಡೆಯಬೇಕು. ವಾರಾಂತ್ಯದಲ್ಲಿ ಮೂಲಭೂತ ಸೌಕರ್ಯಗಳನ್ನ ಹೊರತುಪಡಿಸಿ ಎಲ್ಲ ಚಟುವಟಿಕೆಗಳು ಬಂದ್ ಆಗಲಿವೆ. ವಾರದ ಮಾರುಕಟ್ಟೆಯಲ್ಲಿ ಜನ ಸಂದಣಿ ಕಡಿಮೆ ಮಾಡಲು ಕೆಲ ನಿಯಮಗಳನ್ನ ಜಾರಿಗೆ ತರಲಾಗುವುದು. ವಾರಾಂತ್ಯದಲ್ಲಿ ಜನ ಸಂಚಾರ ಕಡಿಮೆ ಮಾಡೋದು ನಮ್ಮ ಉದ್ದೇಶ ಎಂದವರು ಹೇಳಿದ್ದಾರೆ.
ಈಗಾಗಲೇ ದಿನ ನಿಗದಿಯಾಗಿರುವ ಮುದವೆ ಕಾರ್ಯಕ್ರಮಗಳಿಗೆ ವೀಕೆಂಡ್ ಲಾಕ್‍ಡೌನ್ ಕಾರಣದಿಂದ ತೊಂದರೆ ಆಗಲಾರದು. ಮದುವೆ ಆಯೋಜಿಸುವ ಕುಟುಂಬಗಳಿಗೆ ವಿಶೇಷ ಪಾಸ್ ನೀಡಲಾಗುತ್ತದೆ. ಈ ಎಲ್ಲ ನಿರ್ಬಂಧಗಳು ನಿಮ್ಮ ಹಾಗೂ ನಿಮ್ಮೆಲ್ಲರ ಕುಟುಂಬ ಸದಸ್ಯರ ಸುರಕ್ಷತೆಗಾಗಿ ತಂದಿದ್ದೇವೆ. ಈ ನಿರ್ಬಂಧಗಳಿಂದ ಕಷ್ಟ ಆಗಲಿದೆ. ಆದ್ರೂ ನೀವೆಲ್ಲರೂ ಸರಕಾರದ ಜೊತೆ ಈ ನಾಲ್ಕನೇ ಅಲೆ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸುತ್ತಿರಿ ಎಂದು ನಂಬಿದ್ದೇನೆ ಎಂದು ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.
0 comments:
Post a Comment