ಬಂಟ್ವಾಳ, ಜುಲೈ 03, 2021 (ಕರಾವಳಿ ಟೈಮ್ಸ್) : ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನೀಡಲಾಗುವ ಆಹಾರ ಕಿಟ್‍ಗಳನ್ನು ಗ್ರಾಮ ಮಟ್ಟದಲ್ಲಿ ನೀಡಬೇಕು ಹಾಗೂ ಶಾಸಕರುಗಳು ಆಹಾರ ಕಿಟ್ ಗಳಲ್ಲಿ ಹಸ್ತಕ್ಷೇಪ ಮಾಡವುದನ್ನು ಖಂಡಿಸಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ವತಿಯಿಂದ ಬಂಟ್ವಾಳ ಕಾರ್ಮಿಕ ನಿರೀಕ್ಷಕರ ಮುಖಾಂತರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಯವರಿಗೆ ಹಾಗೂ ಸಹಾಯಕ ಕಾರ್ಮಿಕ ಆಯುಕ್ತರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ರಾಜ್ಯದಲ್ಲಿ ಕೋವಿಡ್-19 2ನೇ ಅಲೆಯ ಸಂಕಷ್ಟದಲ್ಲಿರುವ ನೋಂದಾಯಿತ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ನೀಡಲು ಆದೇಶಿಲಾಗಿದೆ. ಈ ಆಹಾರ ಕಿಟ್‍ಗಳನ್ನು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸರಿಯಾಗಿ ತಲುಪಿಸುವಲ್ಲಿ ಬಂಟ್ವಾಳ ಮತ್ತು ಪುತ್ತೂರು ತಾಲೂಕಿನಲ್ಲಿ ಕಾರ್ಮಿಕ ಇಲಾಖೆ ವಿಫಲವಾಗಿದೆ. ಕಾರ್ಮಿಕ ಇಲಾಖೆ ನೀಡಬೇಕಾದ ಆಹಾರ ಕಿಟ್‍ಗಳನ್ನು ಆಡಳಿತ ಪಕ್ಷದ ಶಾಸಕರು ಸರಕಾರದಿಂದ ನೀಡುವ ಕಿಟ್ ಎಂದು ಹೇಳಿ ಕಾರ್ಮಿಕರಿಗೆ ಸುಳ್ಳು ಮಾಹಿತಿ ನೀಡಿ ಕೆಲವೊಂದು ಕಾರ್ಮಿಕರಿಗೆ ಮಾತ್ರ ಫೋನ್ ಮುಖಾಂತರ ಸಂಪರ್ಕ ಮಾಡಿ ಬಿ ಸಿ ರೋಡಿನ ರಂಗೋಲಿ ಸಭಾಂಗಣದಲ್ಲಿ ಬೆರಳೆಣಿಕೆಯ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ನೀಡಿರುತ್ತಾರೆ. ಪುತ್ತೂರು ಶಾಸಕರ ನೇತೃತ್ವದಲ್ಲಿ ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಬೆರಳೆಣಿಕೆಯ ಕಾರ್ಮಿಕರಿಗೆ ಮಾತ್ರ ಕಿಟ್ ನೀಡಿದ್ದಾರೆ.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಮಂಡಳಿಗೆ ಜಮಾವಣೆ ಆಗುವ ಸೆಸ್ ಹಣದಿಂದ ಆಹಾರ ಕಿಟ್ ನೀಡಲಾಗುತ್ತಿದ್ದು, ಎಲ್ಲಾ ನೋಂದಾಯಿತ ಕಾರ್ಮಿಕರಿಗೆ ಆಹಾರ ಕಿಟ್ ನೀಡಲು ಆದೇಶವಾಗಿರುತ್ತದೆ. ಸ್ಥಳೀಯ ಶಾಸಕರು ರಾಜಕೀಯ ಪ್ರಭಾವ ಬಳಸಿ ಕೆಲವೇ ಕೆಲವು ಸೀಮಿತ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ನೀಡುತ್ತಿದ್ದಾರೆ. ಅಲ್ಲದೆ ಕೆಲವೊಂದು ಕಾರ್ಮಿಕರಿಗೆ ಆಹಾರ ಕಿಟ್ ನೀಡದೆ ಮಾಸ್ಕ್, ಸಾನಿಟೈಸರ್, 2 ಸೋಪ್ ಮತ್ತು ಸೋಪ್ ವಾಟರ್ ಇರುವ ಚೀಲದ ಕಿಟ್ ನೀಡಿ ವಂಚಿಸಲಾಗಿದೆ. ಬಂಟ್ವಾಳ ತಾಲೂಕಿನ ಕೆಲ ಕಾರ್ಮಿಕರಿಗೆ ಬಂಟ್ವಾಳ ಶಾಸಕರ ಕಛೇರಿಯಿಂದ ಕರೆ ಮಾಡಿ ಬರಲು ಹೇಳಿ ನಂತರ ನೀವು ನಮ್ಮ ಕ್ಷೇತ್ರದವರಲ್ಲ ಎಂದು ಹೇಳಿ ಕಾರ್ಮಿಕರನ್ನು ಬೆಳಗ್ಗಿನಿಂದ ಸಂಜೆ ತನಕ ಕಾಯಿಸಿ ಅನ್ಯಾಯವೆಸಗಲಾಗಿದೆ.
ಬಂಟ್ವಾಳ ಶಾಸಕರ ಕಚೇರಿಯಿಂದ ಆಡಳಿತ ಪಕ್ಷದ ಶಾಸಕರು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಲಾಗುವ ಆಹಾರ ಕಿಟ್‍ನಲ್ಲಿ ತಮ್ಮ ರಾಜಕೀಯ ಪ್ರಭಾವ ಬಳಸಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಲ್ಲದೆ ಈ ಆಹಾರ ಕಿಟ್‍ನಲ್ಲಿ ವ್ಯಾಪಕ ಭ್ರಷ್ಟಚಾರವಾಗಿರುವುದು ಕಂಡುಬರುತ್ತದೆ. ತಾವುಗಳು ಕೂಡಲೇ ಈ ಬಗ್ಗೆ ಗಮನಹರಿಸಿ ಕಾರ್ಮಿಕರಿಗೆ ನೀಡಲಾಗುವ ಆಹಾರ ಕಿಟ್ ನೇರವಾಗಿ ಕಾರ್ಮಿಕ ಇಲಾಖೆಯ ಮುಖಾಂತರ ಗ್ರಾಮ ಮಟ್ಟದಲ್ಲಿ ಅರ್ಹ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವಿತರಿಸಲು ಆದೇಶಿಸುವಂತೆ ಸಿಐಟಿಯು ಮನವಿಯಲ್ಲಿ ವಿನಂತಿಸಿದೆ.
ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಾರ್ಮಿಕರಿಗೆ ಕೋವಿಡ್-19 ರ ಪರಿಹಾರ ಧನ 3,000/-ರೂಪಾಯಿ ನೀಡಲು ಆದೇಶವಾಗಿದ್ದು, ಇದು ಕೆಲವೇ ಕೆಲವು ಬೆರಳೆಣಿಕೆಯ ಕಾರ್ಮಿಕರ ಖಾತೆಗೆ ಮಾತ್ರ ಜಮಾ ಆಗಿರುತ್ತದೆ. ಕೆಲ ಕಾರ್ಮಿಕರ ಬ್ಯಾಂಕ್ ಖಾತೆ ಮಂಡಳಿಯಲ್ಲಿ ಇರುವುದಿಲ್ಲ ಹಾಗೂ ಇತ್ತೀಚೆಗೆ ಬ್ಯಾಂಕ್‍ಗಳು ವಿಲೀನವಾದ ಕಾರಣ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಐಎಫ್‍ಎಸ್ಸಿ ಕೋಡ್‍ಗಳು ಬದಲಾಗಿದೆ. ಈ ಬಗ್ಗೆ ಪರಿಹಾರ ಧನ 3,000/- ಸಿಗಲು ಬಾಕಿ ಇರುವ ಕಾರ್ಮಿಕರ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಹಾಗೂ ಮಂಡಳಿಯ ಗುರುತಿನ ಚೀಟಿ ಪಡೆದುಕೊಂಡು ಕೂಡಲೇ ಎಲ್ಲಾ ಕಾರ್ಮಿಕರ ಪರಿಹಾರ ಮೊತ್ತವನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ಬಂಟ್ವಾಳ ತಾಲೂಕು ಸಮಿತಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿಯವರಿಗೆ ಹಾಗೂ ಜಿಲ್ಲಾ ಸಹಾಯಕ ಕಾರ್ಮಿಕ ಆಯುಕ್ತರಿಗೆ ನೀಡಿದ ಮನವಿಯಲ್ಲಿ ಅಗ್ರಹಿಸಿದೆ.
ನಿಯೋಗದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಉದಯ ಕುಮಾರ್ ಬಂಟ್ವಾಳ, ಕಾರ್ಯದರ್ಶಿ ರಾಮಣ್ಣ ವಿಟ್ಲ, ಕಾರ್ಮಿಕ ಮುಖಂಡ ಲಿಯಾಖತ್ ಖಾನ್ ಇದ್ದರು.
0 comments:
Post a Comment