ದುಬೈ, ಜುಲೈ 16, 2021 (ಕರಾವಳಿ ಟೈಮ್ಸ್) : ಇದೇ ವರ್ಷದ ಅಕ್ಟೋಬರ್ 17 ರಿಂದ ನವೆಂಬರ್ 14ರವರೆಗೆ ಯುಎಇ ಹಾಗೂ ಓಮನ್ ದೇಶದಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್-2021 ಟೂರ್ನಿಯಲ್ಲಿ ಭಾಗವಹಿಸುವ ತಂಡಗಳ ಪಟ್ಟಿಯನ್ನು ಐಸಿಸಿ ಪ್ರಕಟಿಸಿದ್ದು, ಬದ್ದ ಎದುರಾಳಿ ದೇಶಗಳಾದ ಭಾರತ-ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಟೂರ್ನಿಯ ಕುತೂಹಲ ಹೆಚ್ಚಿಸಿದೆ.
ಗ್ರೂಪ್ ಒಂದರಲ್ಲಿ ವೆಸ್ಟ್ ಇಂಡಿಸ್, ಇಂಗ್ಲೆಂಡ್ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಎರಡು ತಂಡಗಳು ಕಾಣಿಸಿಕೊಳ್ಳಲಿದ್ದು, ಗ್ರೂಪ್ ಎರಡರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಘ್ಘಾನಿಸ್ತಾನ ಮತ್ತು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಎರಡು ತಂಡಗಳು ಭಾಗವಹಿಸಲಿದೆ.
ಕ್ರಿಕೆಟ್ ಇತಿಹಾಸದಲ್ಲಿ ಬದ್ಧ ಪ್ರತಿಸ್ಪರ್ಧಿಗಳು ಎಂದೇ ಖ್ಯಾತಿ ಹೊಂದಿರುವ ಭಾರತ-ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿರುವುದು ಈ ಬಾರಿಯ ಟಿ-20 ವಿಶ್ವಕಪ್ ಲೀಗ್ ಹಂತದಲ್ಲೇ ರೋಚಕತೆಯನ್ನು ಪಡೆದಂತಾಗಿದೆ.
2021ರ ಟಿ-20 ವಿಶ್ವಕಪ್ ಭಾರತದಲ್ಲಿ ನಡೆಸಲು ಐಸಿಸಿ ನಿರ್ಧರಿಸಿತ್ತು. ಆದರೆ ಭಾರತದಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವುದರಿಂದ ಟೂರ್ನಿಯನ್ನು ಯುಎಇ ಮತ್ತು ಓಮನ್ ದೇಶದಲ್ಲಿ ನಡೆಸಲು ಐಸಿಸಿ ನಿರ್ಧರಿಸಿದೆ.
0 comments:
Post a Comment