ಬೆಂಗಳೂರು, ಆಗಸ್ಟ್ 14, 2021 (ಕರಾವಳಿ ಟೈಮ್ಸ್) : ವಿದ್ಯಾರ್ಥಿಗಳ ಹಾಜರಾತಿಯಿಲ್ಲದೇ ಈ ವರ್ಷ ಶಾಲೆಗಳ ಆವರಣದಲ್ಲಿ ಕಡ್ಡಾಯವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕೋವಿಡ್ ನಿಯಮಾವಳಿಗಳನ್ನು ಅನುಸರಿಸುವುದರ ಜೊತೆಗೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಈ ಆಚರಣೆ ನಡೆಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಮುಖ್ಯಸ್ಥರಿಗೆ ಸೂಚಿಸಿದೆ.
ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ವಿಡಿಯೋವನ್ನು ಶಾಲೆಗಳು ರೆಕಾರ್ಡ್ ಮಾಡಿಕೊಂಡು ಆನ್ ಲೈನ್ ಮೂಲಕ ಮಕ್ಕಳಿಗೆ ಶೇರ್ ಮಾಡಬೇಕು. ದೈಹಿಕ ತರಗತಿಗಳಿಗೆ ಹಾಜರಾಗಲು ಅನುಮತಿಸದ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಮ್ಮತಿಯಿಲ್ಲ. ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಮುಖ್ಯಸ್ಥರು, ಸದಸ್ಯರು ಮತ್ತು ಮುಖ್ಯ ಶಿಕ್ಷಕರು, ಇತರ ನಾಗರಿಕರೊಂದಿಗೆ ಆಚರಣೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸ್ವಾತಂತ್ರ್ಯ ದಿನದ ನಂತರ ವಿದ್ಯಾರ್ಥಿಗಳು ದಿನದ ಮಹತ್ವ, ರಸಪ್ರಶ್ನೆ ಮತ್ತು ರಾಷ್ಟ್ರೀಯತೆಯ ಬಗ್ಗೆ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಆನ್ ಲೈನ್ ಚರ್ಚೆಗಳಲ್ಲಿ ಭಾಗವಹಿಸಬೇಕು, ಸ್ವಾತಂತ್ರ್ಯ ಹೋರಾಟಗಾರರ ಪ್ರಾಮುಖ್ಯತೆ ಮತ್ತು ಸ್ವಾತಂತ್ರ್ಯಹೋರಾಟದ ಮಹತ್ವದ ಬಗ್ಗೆ ಅರಿಯಬೇಕಾಗಿದೆ ಎಂದು ಸುತ್ತೋಲೆ ತಿಳಿಸಿದೆ.
ದೊಡ್ಡ ದೊಡ್ಡ ಸಭೆ ನಡೆಸುವಂತಿಲ್ಲ, ಸಾರ್ವಜನಿಕರಿಗೆ ಅವಕಾಶವಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮದ್ಯದ ಬಾಟಲಿಗಳನ್ನು ಒಳಗೆ ಒಯ್ಯಬಾರದು ಎಂಬ ನಿಯಮ ರೂಪಿಸಿ ಈ ಆದೇಶ ಹೊರಡಿಸಲಾಗಿದೆ.
0 comments:
Post a Comment