ಬಂಟ್ವಾಳ, ಆಗಸ್ಟ್ 27, 2021 (ಕರಾವಳಿ ಟೈಮ್ಸ್) : ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಮೂಡೂರು ಗ್ರಾಮದ ಕಾರಿಂಜೇಶ್ವರ ದೇವಸ್ಥಾನದ ಕೆರೆ ಬಳಿ ಗುರುವಾರ ಸಂಜೆ ವಿಹಾರಕ್ಕೆಂದು ಆರು ಮಂದಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಬಂದಿದ್ದ ವೇಳೆ ಸುಮಾರು ಐದಾರು ವ್ಯಕ್ತಿಗಳ ತಂಡ ದಾಳಿ ನಡೆಸಿ ಪ್ರಶ್ನಿಸಿದ ಬಗ್ಗೆ ವಿದ್ಯಾರ್ಥಿಗಳು ಠಾಣೆಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂರು ಮಂದಿ ಆರೋಪಿಗಳನ್ನು ಗುರುವಾರ ರಾತ್ರಿಯೇ ಬಂಧಿಸಿದ್ದಾರೆ.
ಮಂಗಳೂರು ಎಜೆ ಆಸ್ಪತ್ರೆಯ ಪ್ಯಾರಾ ಮೆಡಿಕಲ್ ವಿಭಾಗದ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳು ಹಾಗೂ ಮೂರು ಮಂದಿ ವಿದ್ಯಾರ್ಥಿನಿಯರು ಒಟ್ಟಾಗಿ ಕಾವಳಮೂಡೂರು ಗ್ರಾಮದ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಂದು ಫೋಟೋ ತೆಗೆದು ವಾಪಾಸು ಮನೆಗೆ ತೆರಳುವ ಮಧ್ಯೆ ದೇವಸ್ಥಾನದ ಕೆರೆ ಬಳಿ ಇರುವಾಗ ಐದು ಮಂದಿಯ ಅಪರಿಚಿತ ಯುವಕರ ತಂಡ ಬಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2021 ಕಲಂ 143, 147, 341, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಠಾಣೆಯಲ್ಲಿ ಜಮಾಯಿಸಿದ ಯುವಕರು
ಕಾರಿಂಜೇಶ್ವರ ದೇವಸ್ಥಾನದ ಬಳಿ ಯುವಕ-ಯುವತಿಯರು ಇರುವ ಬಗ್ಗೆ ಮಾಹಿತಿ ಪಡೆದ ಯುವಕರ ತಂಡ ದಾಳಿ ನಡೆಸಿ ಕಿರುಕುಳ ನೀಡುವ ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೂಂಜಾಲಕಟ್ಟೆ ಪಿಎಸ್ಐ ಸೌಮ್ಯ ನೇತೃತ್ವದ ಪೊಲೀಸರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಈ ಸಂದರ್ಭ ಠಾಣೆಗೂ ಆಗಮಿಸಿದ ಯುವಕರ ತಂಡ ಪೊಲೀಸರೊಂದಿಗೂ ಮಾತಿನ ವಿನಿಮಯ ನಡೆಸಿದೆ ಎನ್ನಲಾಗಿದೆ. ಬಳಿಕ ಪರಿಸ್ಥಿತಿ ನಿಯಂತ್ರಿಸಿದ ಪಿಎಸ್ಐ ಸೌಮ್ಯ ಅವರು ಯುವಕರನ್ನು ಚದುರಿಸಿ ವಿದ್ಯಾರ್ಥಿಗಳ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ರಾತ್ರಿಯೇ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
0 comments:
Post a Comment