ಮಂಗಳೂರು, ಆಗಸ್ಟ್ 26, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಕೂಡಾ ಕೋವಿಡ್ ಪಾಸಿಟಿವಿಟಿ ದರ ಶೇ. 2ಕ್ಕಿಂತ ಮೇಲ್ಪಟ್ಟಿರುವುದರಿಂದ ಸೆಪ್ಟೆಂಬರ್ 15ರವರೆಗೂ ಶಾಲಾ-ಕಾಲೇಜು ಭೌತಿಕ ತರಗತಿಗಳನ್ನು ಆರಂಭಿಸದಂತೆ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆವಿ ಗುರುವಾರ ಆದೇಶಿಸಿದ್ದಾರೆ.
ಕೊರೊನಾ ಸೋಂಕು ಪಾಸಿಟಿವಿಟಿ ದರ ಹೆಚ್ಚಿರುವ ಹಿನ್ನೆಲೆಯಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಭೌತಿಕ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸದ್ಯ ಕೇವಲ ಪ್ರಸ್ತುತ ಚಾಲ್ತಿಯಲ್ಲಿರುವಂತೆ ಆನ್ ಲೈನ್ ಮೂಲಕ ಮಾತ್ರ ತರಗತಿ ನಡೆಸುವಂತೆ ಕಾಲೇಜು ಶಿಕ್ಷಣ ಇಲಾಖಾ ವಿಶೇಷಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲೆಯ ಕೊರೊನಾ ಪಾಸಿಟಿವಿಟಿ ದರ ನೋಡಿಕೊಂಡು ಸೆಪ್ಟೆಂಬರ್ 15ರೊಳಗೆ ಮತ್ತೊಮ್ಮೆ ಸಂಬಂಧಪಟ್ಟ ಕಾಲೇಜು ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ ತರಗತಿ ಪ್ರಾರಂಭದ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದ ಡೀಸಿ ಸದ್ಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಪ್ರಾಯೋಗಿಕ ತರಗತಿಗಳನ್ನು ಬ್ಯಾಚ್ ವೈಸ್ ಆಗಿ ಸಂಪೂರ್ಣ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿ ನಡೆಸಲು ಅನುಮತಿಸಿದ್ದಾರೆ. ವಿಜ್ಞಾನ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬಾಕಿ ಉಳಿದ ಎಲ್ಲ ವಿಭಾಗಗಳ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕವೇ ತರಗತಿ ಮುಂದುವರಿಸುವಂತೆ ಸೂಚಿಸಿದರು.
ಕಾಲೇಜಿನ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು ಎಂದ ಡೀಸಿ ವಿದ್ಯಾರ್ಥಿಗಳ ನೆಟ್‍ವರ್ಕ್ ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಪರ್ಯಾಯ ಮಾರ್ಗ ಹುಡುಕಿ ಅಂತಹ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹಾಜರಾಗುವ ವ್ಯವಸ್ಥೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ ಪ್ರಜ್ಞಾ ಅಮ್ಮೆಂಬಳ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಕಿಶೋರ್ ಕೆ, ಕಾಲೇಜು ಶಿಕ್ಷಣ ವಿಶೇಷಾಧಿಕಾರಿ ಜಯಕರ ಭಂಡಾರಿ, ನಿಟ್ಟೆ ವಿಶ್ವವಿದ್ಯಾನಿಲಯದ ನೋಡಲ್ ಅಧಿಕಾರಿ ಡಾ ದಾನೇಶ್ ಸಹಿತ ಇತರ ಅಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment