ಬಂಟ್ವಾಳ, ಸೆಪ್ಟಂಬರ್ 18, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಣೋಲಿಬೈಲು ನಿವಾಸಿ ಶ್ರೀಮತಿ ವತ್ಸಲಾ (53) ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಚಿನ್ನದ ಕರಿಮಣಿ ಎಗರಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಪೊಲೀಸರು ಇಬ್ಬರು ಆರೋಪಿಗಳಾದ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ವಲತ್ತಡ್ಕ ನಿವಾಸಿ ದಿವಂಗತ ಶೇಖರ ಕುಲಾಲ್ ಅವರ ಪುತ್ರ ರೋಹಿತ್ (22) ಹಾಗೂ ಕುಂಜಿರ್ ಪಂಜ-ದೇವಸ್ಯ ನಿವಾಸಿ ರಾಮಣ್ಣ ನಾಯ್ಕ ಅವರ ಪುತ್ರ ಲೋಹಿತ್ ಪಿ ಆರ್ ಅಲಿಯಾಸ್ ಸಚಿನ್ ಅಲಿಯಾಸ್ ಸಚ್ಚು (20) ಎಂಬವರನ್ನು ಬಂಧಿಸಿ ಕಳವಾದ ಚಿನ್ನದ ಸರವನ್ನು ವಶಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ವತ್ಸಲಾ ಅವರು ಸೆ 9 ರಂದು ಮಧ್ಯಾಹ್ನದ ವೇಳೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಪಣೋಲಿಬೈಲು ಬಳಿ ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸಮಯ ಸಾಧಿಸಿದ ಆರೋಪಿಗಳು ಬೈಕಿನಲ್ಲಿ ಬಂದು ಅವರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ಬಲವಂತವಾಗಿ ಕಿತ್ತು ಸುಲಿಗೆ ಮಾಡಿ ಪರಾರಿಯಾಗಿದ್ದರು.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿ’ಸೋಜ ನೇತೃತ್ವದ ಪೊಲೀಸ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಚಿನ್ನದ ಸರ ಹಾಗೂ ಕಳವಿಗೆ ಬಳಸಿದ್ದ ಅಪಾಚಿ ಬೈಕ್ ಸಹಿತವಾಗಿ ದಸ್ತಗಿರಿ ಮಾಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 1,35,000/- ರೂಪಾಯಿ ಎಂದು ಅಂದಾಜಿಸಲಾಗಿದೆ.
ಜಿಲ್ಲಾ ಎಸ್ಪಿ ಋಷಿಕೇಷ್ ಭಗವಾನ್ ಸೋನಾವಣೆ ಅವರ ನಿರ್ದೇಶನದಂತೆ ಜಿಲ್ಲಾ ಎಡಿಶನಲ್ ಎಸ್ಪಿ ಡಾ ಶಿವಕುಮಾರ್ ಗುಣಾರೆ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಡಿವೈಎಸ್ಪಿ ವೆಲೈಂಟೈನ್ ಡಿಸೋಜಾ ಅವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಇನ್ಸ್‍ಪೆಕ್ಟರ್ ಟಿ ಡಿ ನಾಗರಾಜ್, ಬಂಟ್ವಾಳ ನಗರ ಠಾಣಾ ಪಿಎಸ್ಸೈ ಅವಿನಾಶ್ ಗೌಡ, ಕ್ರೈಂ ಎಸ್ಸೈ ಕಲೈಮಾರ್, ಬಂಟ್ವಾಳ ಡಿವೈಎಸ್ಪಿ ತಂಡದ ಉದಯ ರೈ, ಪ್ರವೀಣ್ ಎಂ, ಪ್ರಶಾಂತ್, ಇರ್ಷಾದ್, ಕುಮಾರ್ ಎಚ್ ಕೆ, ಬಂಟ್ವಾಳ ನಗರ ಠಾಣಾ ಸಿಬ್ಬಂದಿಗಳಾದ ಜಗನ್ನಾಥ ಶೆಟ್ಟಿ, ಕೃಷ್ಣ ಕುಲಾಲ್, ಗೃಹರಕ್ಷಕ ಸಿಬ್ಬಂದಿ ಜಯಗಣೇಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಪ್ರಕರಣ ಬೇಧಿಸಿದ್ದಾರೆ.
0 comments:
Post a Comment