ಅಲ್ಪ ಮೊತ್ತಕ್ಕೆ ಕುಸಿದ ನಮೀಬಿಯಾ : ಅಫ್ಘಾನಿಸ್ತಾನಕ್ಕೆ 62 ರನ್ ಗಳ ಭರ್ಜರಿ ಜಯ - Karavali Times ಅಲ್ಪ ಮೊತ್ತಕ್ಕೆ ಕುಸಿದ ನಮೀಬಿಯಾ : ಅಫ್ಘಾನಿಸ್ತಾನಕ್ಕೆ 62 ರನ್ ಗಳ ಭರ್ಜರಿ ಜಯ - Karavali Times

728x90

31 October 2021

ಅಲ್ಪ ಮೊತ್ತಕ್ಕೆ ಕುಸಿದ ನಮೀಬಿಯಾ : ಅಫ್ಘಾನಿಸ್ತಾನಕ್ಕೆ 62 ರನ್ ಗಳ ಭರ್ಜರಿ ಜಯ

  ಅಬುಧಾಬಿ,‌ ಅಕ್ಟೋಬರ್ 31, 2021 (ಕರಾವಳಿ ಟೈಮ್ಸ್) : ಅಬುಧಾಬಿಯಲ್ಲಿ ಭಾನುವಾರ ನಡೆದ ಟಿ-20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಅಘಪಾನಿಸ್ತಾನ ತಂಡವು ನಮೀಬಿಯಾ ವಿರುದ್ದ 62 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಗೆಲುವಿನೊಂದಿಗೆ ಆಫ್ಘಾನಿಸ್ತಾನ ತಂಡವು ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿದ್ದರೆ, ನಮೀಬಿಯಾ ತಂಡದ ಸೆಮೀಸ್ ರೇಸ್‌ ಬಹುತೇಕ ಅಂತ್ಯವಾಗಿದೆ. 

  ಆಫ್ಘಾನಿಸ್ತಾನ ನೀಡಿದ್ದ 161 ರನ್‌ಗಳ ಗುರಿ ಬೆನ್ನತ್ತಿದ ನಮೀಬಿಯಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೊದಲ ಓವರ್‌ನ 4ನೇ ಎಸೆತದಲ್ಲೇ ಕ್ರೆಗ್ ವಿಲಿಯಮ್ಸ್‌ ಕೇವಲ 1 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮಿಚೆಲ್‌ ವ್ಯಾನ್ ಲಿಂಗನ್‌ 11 ರನ್‌ ಬಾರಿಸಿ ನವೀನ್ ಉಲ್ ಹಕ್‌ಗೆ ಎರಡನೇ ಬಲಿಯಾದರು. ಇನ್ನು ಆಲ್ರೌಂಡರ್ ಲೋಫ್ಟಿ ಈಟನ್ 14 ರನ್‌ ಬಾರಿಸಿ ಗುಲ್ಬದ್ದೀನ್ ನೈಬ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಎರಾಸ್‌ಮಸ್‌ ಆಟ ಕೇವಲ 12 ರನ್‌ಗೆ ಸೀಮಿತವಾಯಿತು. ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಆಲ್ರೌಂಡರ್ ಡೇವಿಡ್ ವೀಸಾ 30 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 26 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಬಳಿಕ ನಿರಂತರ ವಿಕೆಟ್ ಕಳೆದುಕೊಂಡ ನಮೀಬಿಯಾ ತಂಡವು ಅಂತಿಮವಾಗಿ ನಮೀಬಿಯಾ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 98 ರನ್‌ ಗಳಿಸಲಷ್ಟೇ ಶಕ್ತವಾಯಿತು. 

 ಇದಕ್ಕೂ ಮೊದಲು ಟಾಸ್ ಗೆದ್ದ ಆಫ್ಘಾನಿಸ್ತಾನ ತಂಡವು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ನಾಯಕ ಮೊಹಮ್ಮದ್ ನಬಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟಿಂಗ್ ನಡೆಸಿದ ಆರಂಭಿಕ ಜೋಡಿಯಾದ ಹಜರತ್ತುಲ್ಲಾ ಝಝೈ ಹಾಗೂ ಮೊಹಮ್ಮದ್ ಶೆಹಜಾದ್ ಜೋಡಿ ಮೊದಲ ವಿಕೆಟ್‌ಗೆ 53 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಹಜರತ್ತುಲ್ಲಾ 33 ರನ್‌ ಬಾರಿಸಿದರೆ, ವಿಕೆಟ್ ಕೀಪರ್ ದಾಂಡಿಗ ಮೊಹಮ್ಮದ್ ಶೆಹಜಾದ್ 33 ಎಸೆತಗಳನ್ನು ಎದುರಿಸಿ 45 ರನ್‌ ಬಾರಿಸಿದರು.  

 ವಿದಾಯದ ಪಂದ್ಯವನ್ನಾಡಿದ ಮಾಜಿ ನಾಯಕ ಅಸ್ಗರ್ ಅಫ್ಘಾನ್ ಕೇವಲ 23 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಚುರುಕಿನ 31 ರನ್‌ ಗಳಿಸುವ ಮೂಲಕ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಕೊನೆಯಲ್ಲಿ ಮೊಹಮ್ಮದ್ ನಬಿ 17 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 32 ರನ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ತಲುಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಅಲ್ಪ ಮೊತ್ತಕ್ಕೆ ಕುಸಿದ ನಮೀಬಿಯಾ : ಅಫ್ಘಾನಿಸ್ತಾನಕ್ಕೆ 62 ರನ್ ಗಳ ಭರ್ಜರಿ ಜಯ Rating: 5 Reviewed By: karavali Times
Scroll to Top