ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಶಾಲೆಗಳಿಗೆ ಡೆಸ್ಕ್-ಬೆಂಚ್‍ಗಳ ವಿತರಣೆ : ಸಾಗಾಟ ವಾಹನಕ್ಕೆ ಹಸಿರು ನಿಶಾನೆ ತೋರಿದ ಶಿಕ್ಷಣ ಸಚಿವ ನಾಗೇಶ್ - Karavali Times ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಶಾಲೆಗಳಿಗೆ ಡೆಸ್ಕ್-ಬೆಂಚ್‍ಗಳ ವಿತರಣೆ : ಸಾಗಾಟ ವಾಹನಕ್ಕೆ ಹಸಿರು ನಿಶಾನೆ ತೋರಿದ ಶಿಕ್ಷಣ ಸಚಿವ ನಾಗೇಶ್ - Karavali Times

728x90

3 November 2021

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಶಾಲೆಗಳಿಗೆ ಡೆಸ್ಕ್-ಬೆಂಚ್‍ಗಳ ವಿತರಣೆ : ಸಾಗಾಟ ವಾಹನಕ್ಕೆ ಹಸಿರು ನಿಶಾನೆ ತೋರಿದ ಶಿಕ್ಷಣ ಸಚಿವ ನಾಗೇಶ್

ಧರ್ಮಸ್ಥಳ, ನವೆಂಬರ್ 03, 2021 (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ವತಿಯಿಂದ ಬೆಳಗಾವಿ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಯ 311  ಶಾಲೆಗಳಿಗೆ ಡೆಸ್ಕ್-ಬೆಂಚ್ ಒದಗಣೆಯ ಸಾಗಾಟ ವಾಹನಕ್ಕೆ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಧರ್ಮಸ್ಥಳದಲ್ಲಿ ಹಸಿರು ನಿಶಾನೆ ತೋರಿದರು. 

ಈ ಸಂದರ್ಭ ಮಾತನಾಡಿದ ಅವರು ಹೆಗ್ಗಡೆಯವರು ಸಾಮಾಜಿಕ ಕಳಕಳಿಯಿಂದ ಸರಕಾರದ ಜೊತೆ ಕೈ ಜೋಡಿಸಿ ಅನೇಕ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುತ್ತಾರೆ. ಸಮಾಜದ ಅಭಿವೃದ್ಧಿಯಲ್ಲಿ ಎಲ್ಲೆಲ್ಲಿ ಕೊರತೆಯಿದೆಯೋ ಅಲ್ಲಲ್ಲಿ ಸಹಾಯಹಸ್ತ ಚಾಚುತ್ತಾ ಸರಕಾರವೂ ಮಾಡಲಾಗದ ಕೆಲಸಗಳನ್ನು ಮಾಡಿ ಮಾದರಿಯಾಗಿರುತ್ತಾರೆ. ಇದರಂತೆ ಇದೀಗ ಬೆಳಗಾವಿ, ಹಾವೇರಿ ಮತ್ತು ಉತ್ತರಕನ್ನಡ ಜಿಲ್ಲೆಯ 311 ಶಾಲೆಗಳಿಗೆ 2370 ಜೊತೆ ಡೆಸ್ಕ್-ಬೆಂಚ್‍ಗಳನ್ನು ಒದಗಿಸಿ ಶಿಕ್ಷಣ ಇಲಾಖೆಗೆ ಬಹುದೊಡ್ಡ ಕೊಡುಗೆಯನ್ನು ನೀಡಿರುತ್ತಾರೆ. ಇದಕ್ಕಾಗಿ ಇಲಾಖೆ ವತಿಯಿಂದ ಅಭಿನಂದನೆ ಸಲ್ಲಿಸಬಯಸುತ್ತೇನೆ ಎಂದರು. 

ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಮಾತನಾಡಿ, ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದ ಮೂಲಕ   ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಳೆದ ಹಲವಾರು ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶಿಕ್ಷಕರ ಕೊರತೆಯಿರುವ ಸರಕಾರಿ ಹಾಗೂ ಆಯ್ದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಸ್ವಯಂಸೇವಕ ಶಿಕ್ಷಕ/ಶಿಕ್ಷಕಿಯರನ್ನು ಒದಗಿಸಿ, ಸಂಸ್ಥೆಯ ವತಿಯಿಂದ ನೆರವು ನೀಡಲಾಗುತ್ತಿದೆ. ಇದರಂತೆ ಈ ವರ್ಷವೂ ಸುಮಾರು 600 ಗೌರವ ಶಿಕ್ಷಕರ ನಿಯೋಜನೆ ಮಾಡಲಾಗುತ್ತಿದೆ. ಇದಲ್ಲದೆ ಶಾಲಾ ಕಟ್ಟಡ ರಚನೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಶಾಲಾ ಶೌಚಾಲಯಗಳ ರಚನೆ, ಶಾಲಾ ಕಟ್ಟಡ ದುರಸ್ತಿ, ಶಾಲಾ ಆವರಣ ನಿರ್ಮಾಣ, ಶಾಲಾ ಆಟದ ಮೈದಾನ ರಚನೆ ಮೊದಲಾದವುಗಳಿಗಾಗಿ ಪೂರಕ ಅನುದಾನ ನೀಡಲಾಗುತ್ತಿದೆ. ಇದಕ್ಕಾಗಿಯೇ ಈವರೆಗೆ ಒಟ್ಟು 20.70 ಕೋಟಿ ರೂಪಾಯಿ ಪೂರಕ ಅನುದಾನವನ್ನು ನೀಡಲಾಗಿದೆ ಎಂದರು.

ಗ್ರಾಮೀಣ ಶಾಲೆಗಳಲ್ಲಿ ಪೀಠೋಪಕರಣಗಳ ಕೊರತೆಯಿಂದ ಮಕ್ಕಳು ನೆಲದ ಮೇಲೆ ಕುಳಿತುಕೊಳ್ಳುವ ಪರಿಸ್ಥಿತಿಯನ್ನು ಗಮನಿಸಿ ಪೀಠೋಪಕರಣಗಳ ಕೊರತೆಯಿರುವ ಸರಕಾರಿ ಶಾಲೆಗಳಿಗೆ ಡೆಸ್ಕ್-ಬೆಂಚ್‍ಗಳನ್ನು ನೀಡಲಾಗುತ್ತಿದೆ. ಪ್ರಸ್ತುತ ಫೈಬರ್ ಮಾದರಿಯ ಡೆಸ್ಕ್-ಬೆಂಚ್‍ಗಳನ್ನು ಪೂರೈಕೆ ಮಾಡುತ್ತಿದ್ದು, ಅಧಿಕ ಬಾಳಿಕೆ ಹಾಗೂ ಕಡಿಮೆ ಭಾರವನ್ನು ಹೊಂದಿರುತ್ತದೆ. ಅನೇಕ ಗ್ರಾಮೀಣ ಶಾಲೆಗಳಲ್ಲಿ ಡೆಸ್ಕ್-ಬೆಂಚುಗಳ ಕೊರತೆಯನ್ನು ಗಮನಿಸಿ ಶ್ರೀ ಕ್ಷೇತ್ರದಿಂದ ಈ ವಿಶೇಷ ಕೊಡುಗೆಯನ್ನು ನೀಡಲಾಗುತ್ತಿದೆ. ಇದರಂತೆ ಶಾಲೆಗಳಿಗೆ 8 ರಿಂದ ಗರಿಷ್ಟ 10 ಜೊತೆ ಡೆಸ್ಕ್-ಬೆಂಚುಗಳನ್ನು ಒದಗಿಸಲಾಗುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದಲೇ ಶಾಲೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. 

ಪ್ರಸ್ತುತ ವರ್ಷ ರಾಜ್ಯದ ಹಾವೇರಿ, ಬೆಳಗಾಂ, ಮತ್ತು ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ 311 ಶಾಲೆಗಳಿಗೆ 2370 ಜೊತೆ ಡೆಸ್ಕ್-ಬೆಂಚ್‍ಗಳನ್ನು ವಿತರಣೆ ಮಾಡಲಾಗುತ್ತಿದ್ದು ಇದರಿಂದ ಸುಮಾರು 9,500 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದುವರೆಗೆ ಶ್ರೀ ಕ್ಷೇತ್ರದಿಂದ ಒಟ್ಟು 30 ಜಿಲ್ಲೆಗಳ 9,776 ಶಾಲೆಗಳಿಗೆ 63,553 ಜೊತೆ ಡೆಸ್ಕ್-ಬೆಂಚನ್ನು ಪೂರೈಕೆ ಮಾಡಿದ್ದು, ಒಟ್ಟು 20.17 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ಇದರಿಂದಾಗಿ ಸುಮಾರು 2,54,212 ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಒದಗಿಸಿದಂತಾಗಿದೆ ಎಂದ ಹೆಗ್ಗಡೆ ಅವರು ಪ್ರಸ್ತುತ ಶೈಕ್ಷಣಿಕ ವರ್ಷ ಯಾವುದೇ ಅಡೆತಡೆಗಳಿಲ್ಲದೇ ಪೂರೈಸಲಿ ಹಾಗೂ ಎಲ್ಲಾ ಮಕ್ಕಳಿಗೂ ಶುಭವಾಗಲಿ ಎಂದು ಹಾರೈಸಿದರು.

     ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶ ಡಾ ಎಲ್ ಎಚ್ ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್ ಎಸ್, ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಸಮುದಾಯ ಅಭಿವೃದ್ಧಿ ವಿಭಾಗದ ಯೋಜನಾಧಿಕಾರಿ ಪುಷ್ಪರಾಜ್, ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಶಾಲೆಗಳಿಗೆ ಡೆಸ್ಕ್-ಬೆಂಚ್‍ಗಳ ವಿತರಣೆ : ಸಾಗಾಟ ವಾಹನಕ್ಕೆ ಹಸಿರು ನಿಶಾನೆ ತೋರಿದ ಶಿಕ್ಷಣ ಸಚಿವ ನಾಗೇಶ್ Rating: 5 Reviewed By: karavali Times
Scroll to Top