ಅಫಘಾನ್ ವಿರುದ್ದ ದೊಡ್ಡ ಜಯದೊಂದಿಗೆ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದ ಕೊಹ್ಲಿ ಪಡೆ - Karavali Times ಅಫಘಾನ್ ವಿರುದ್ದ ದೊಡ್ಡ ಜಯದೊಂದಿಗೆ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದ ಕೊಹ್ಲಿ ಪಡೆ - Karavali Times

728x90

3 November 2021

ಅಫಘಾನ್ ವಿರುದ್ದ ದೊಡ್ಡ ಜಯದೊಂದಿಗೆ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದ ಕೊಹ್ಲಿ ಪಡೆ

ಅಬುಧಾಬಿ, ನವೆಂಬರ್ 04, 2021 (ಕರಾವಳಿ ಟೈಮ್ಸ್) : ಅಬುಧಾಬಿ ಮೈದಾನದಲ್ಲಿ ಬುಧವಾರ ನಡೆದ ಟಿ- 20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಅಪಘಾನಿಸ್ತಾನ ವಿರುದ್ದ 66 ರನ್ ಅಂತರದ ದೊಡ್ಡ ಜಯ ದಾಖಲಿಸಿದ ಟೀಂ ಇಂಡಿಯಾ ಟೂರ್ನಿಯಲ್ಲಿ ಮೊದಲ ಜಯದ ಸವಿಯುಂಡಿದೆ. 

ಪಾಕಿಸ್ತಾನ ಹಾಗೂ ನ್ಯೂಜಿಲ್ಯಾಂಡ್ ವಿರುದ್ದ ನಡೆದ ಮೊದಲೆರಡು ಪಂದ್ಯಗಳನ್ನು ಕೈಚೆಲ್ಲಿದ ಭಾರತದ ಜಯಕ್ಕಾಗಿ ಹಾತೊರೆಯುತ್ತಿತ್ತು. ಬುಧವಾರದ ಪಂದ್ಯದಲ್ಲಿ ಬ್ಯಾಟಿಂಗ್ ಅಬ್ಬರ ನಡೆಸಿದ ಕೊಹ್ಲಿ ಪಡೆ ಬೃಹತ್ ಮೊತ್ತ ಪೇರಿಸಿ ಅಫಘಾನ್ ತಂಡವನ್ನು ಸಾಧಾರಣ್ಪ ಮೊತ್ತಕ್ಕೆ ಕಟ್ಟಿ ಹಾಕಿ ದೊಡ್ಡ ಜಯ ಸಂಪಾದಿಸಿದೆ. 

ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 210 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕ ಆಟಗಾರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಶತಕದ ಜೊತೆಯಾಟ ನೀಡಿ ಬೃಹತ್ ಮೊತ್ತರಕ್ಕೆ ಕಾರಣರಾದರು. ಈ ಜೋಡಿ ಮೊದಲ ವಿಕೆಟ್ ಭಾಗೀದಾರಿಕೆಯಲ್ಲಿ 140 ರನ್ ಗಳ ಜೊತೆಯಾಟ ನಡೆಸಿತು. ರೋಹಿತ್ ಶರ್ಮಾ 47 ಎಸೆತಗಳಲ್ಲಿ 74 ರನ್ ಸಿಡಿಸಿದರು. ಕೆ ಎಲ್ ರಾಹುಲ್ 69 ರನ್ ಸಿಡಿಸಿದರು. ಕೊನೆಯಲ್ಲಿ ಕೊಹ್ಲಿ ಸ್ಥಾನದಲ್ಲಿ ಭಡ್ತಿ ಪಡೆದು ಆಟಕ್ಕಿಳಿದ ರಿಷಭ್ ಪಂಥ್ ಹಾಗೂ ಹಾರ್ದಿಕ್ ಪಾಂಡ್ಯ ಮತ್ತೆ ಸ್ಫೋಟಕ ಆಟ ಮುಂದುವರೆಸಿ ತಂಡದ ಮೊತ್ತವನ್ನು ದ್ವಿಶತಕದ ಗಡಿ ದಾಟಿಸಿದರು. 

ರಿಷಬ್ ಪಂಥ್ 3 ಸಿಕ್ಸರ್ ಹಾಗೂ ಏಕೈಕ ಬೌಂಡರಿ ಒಳಗೊಂಡಂತೆ 13 ಎಸೆತಗಳಲ್ಲಿ 27 ರನ್ ಸಿಡಿಸಿದರೆ, ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲೇ 35 ರನ್ ಸಿಡಿಸಿ ಅಬ್ಬರಿಸಿದರು. ಕಠಿಣ ಗುರಿ ಪಡೆದ ಅಫಘಾನ್ ತಂಡ ಆರ ಅಶ್ವಿನ್ ಅವರ ನಿಖರ ದಾಳಿಯ ಮಂಕಾಗಿ 144 ರನ್‍ಗಳಿಗೆ ಅಭಿಯಾನ ಮುಕ್ತಾಯಗೊಳಿಸಿತು. ಸ್ಪಿನ್ನರ್ ಅಶ್ವಿನ್ ಪ್ರಮುಖ ಎರಡು ವಿಕೆಟ್ ಕಬಳಿಸಿದರು. 22 ಎಸೆತದಲ್ಲಿ 44 ರನ್ ಗಳಿಸಿ ಕಿರಾಮ್ ಜನತ್ ಸ್ವಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ ಇತರ ಅಫಘಾನ್ ಆಟಗಾರರು ಅಬ್ಬರಿಸಲು ವಿಫಲರಾದರು. 

ಇದೀಗ ರನ್ ಧಾರಣೆ ಹೆಚ್ಚಿಸಿಕೊಂಡಿರುವ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದು, ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿಸಿರಿಕೊಂಡಿದೆಯಾದರೂ ಅಫ್ಘಾನಿಸ್ತಾನ-ನ್ಯೂಜಿಲೆಂಡ್ ನಡುವಿನ ಪಂದ್ಯದ ಫಲಿತಾಂಶವನ್ನು ಅವಲಂಬಿಸಬೇಕಾಗಿದೆ. 

ಟೂರ್ನಿಯಲ್ಲಿ ಗರಿಷ್ಠ ರನ್ ದಾಖಲೆ ನಿರ್ಮಿಸಿದ ಟೀಂ ಇಂಡಿಯಾ 

ಅಫಘಾನ್ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾ ಗಳಿಸಿದ 210 ರನ್ ಮೊತ್ತ ಪ್ರಸ್ತುತ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ದಾಖಲಾಗಿರುವ ಗರಿಷ್ಠ ಮೊತ್ತವಾಗಿದೆ. ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಆಫಘಾನ್ ತಂಡ ಸಿಡಿಸಿದ್ದ 190 ರನ್ ಗಳು ಇದುವರೆಗೆ ಟೂರ್ನಿಯ ಗರಿಷ್ಠ ಸ್ಕೋರ್ ಆಗಿ ದಾಖಲಾಗಿತ್ತು. 

ಇದೀಗ ಟೀಂ ಇಂಡಿಯಾ ಆ ದಾಖಲೆಯನ್ನು ಅಫಘಾನ್ ವಿರುದ್ದವೆ ಮುರಿದುಹಾಕಿದೆ. ಅಬುದಾಬಿಯಲ್ಲಿ ನಡೆದ ನಮೀಬಿಯಾ ವಿರುದ್ದ ಪಾಕಿಸ್ತಾನ ಸಿಡಿಸಿದ 189 ರನ್ ಇದ್ದರೆ, ನಂತರದ ಸ್ಥಾನದಲ್ಲಿ ಅಲ್-ಅಮೆರಾಟ್ ಮೈದಾನದಲ್ಲಿ ಪಪುವಾ ನ್ಯೂಗಿನಿ ವಿರುದ್ದ ಬಾಂಗ್ಲಾದೇಶ ಸಿಡಿಸಿದ 181 ರನ್ ಇದೆ. 

ಟೀಂ ಇಂಡಿಯಾ ಪರ ರೋಹಿತ್-ರಾಹುಲ್ ಗರಿಷ್ಠ ಟಿ-20 ಭಾಗೀದಾರಿಕೆ ದಾಖಲೆ 

ಅಫ್ಘಾನ್ ವಿರುದ್ದದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ-ಕೆಎಲ್ ರಾಹುಲ್ ಜೋಡಿ ವಿಶ್ವ ದಾಖಲೆ ನಿರ್ಮಿಸಿದೆ. ಮೊದಲ ವಿಕೆಟಿಗೆ 140 ರನ್ ಪೇರಿಸಿದ ಈ ಜೋಡಿ ಭಾರತದ ಪರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಜೊತೆಯಾಟದ ದಾಖಲೆ ನಿರ್ಮಿಸಿದೆ. 

ಈ ಹಿಂದೆ 2007ರಲ್ಲಿ ಡರ್ಬನ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾಗಿದ್ದ ವಿರೇಂದ್ರ ಸೆಹ್ವಾಗ್-ಗೌತಮ್ ಗಂಭೀರ್ ಜೋಡಿ 136ರನ್ ಕಲೆ ಹಾಕಿತ್ತು. ಇದು ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ದಾಖಲಾದ ಗರಿಷ್ಠ ಜೊತೆಯಾಟವಾಗಿತ್ತು. ಇದೀಗ ರೋಹಿತ್-ರಾಹುಲ್ ಜೋಡಿ 140ರನ್ ಕಲೆ ಹಾಕುವ ಮೂಲಕ ಈ ದಾಖಲೆಯನ್ನು ಮುರಿದು ಹಾಕಿ ಅಗ್ರ ಸ್ಥಾನಕ್ಕೇರಿದೆ. 

ಬಳಿಕದ ಸ್ಥಾನದಲ್ಲಿ 2014ರಲ್ಲಿ ಮೀರ್‍ಪುರ್ ಪಂದ್ಯದಲ್ಲಿ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜೋಡಿ ಕಲೆಹಾಕಿದ್ದ 106 ರನ್ ಜೊತೆಯಾಟ ಹಾಗೂ ಇದೇ ಜೋಡಿ ಇದೇ ಮೀರ್ ಪುರ್ ಮೈದಾನದಲ್ಲಿ ಬಾಂಗ್ಲಾದೇಶದ ವಿರುದ್ಧ ಕಲೆ ಹಾಕಿದ್ದ 100 ರನ್‍ಗಳ ಜೊತೆಯಾಟವಿದೆ. 

ಟ-20 ವಿಶ್ವಕಪ್ ಇತಿಹಾಸದಲ್ಲಿ ಭಾರತ 2ನೇ ಗರಿಷ್ಠ ಸ್ಕೋರ್ 

ಅಫಘಾನ್ ವಿರುದ್ದದ ಪಂದ್ಯದಲ್ಲಿ ಭಾರತ ಗಳಿಸಿದ 210 ರನ್ ಗಳಿಕೆ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ದಾಖಲಿಸಿದ 2ನೇ ಗರಿಷ್ಠ ಸ್ಕೋರ್ ಆಗಿದೆ. ಈ ಹಿಂದೆ 2007ರಲ್ಲಿ ಡರ್ಬನ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತ್ತು. ಇದು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗಳಿಸಿದ ಗರಿಷ್ಠ ಮೊತ್ತವಾಗಿ ಉಳಿದಿದೆ. 

2016 ರಲ್ಲಿ ಮುಂಬೈ ಮೈದಾನದಲ್ಲಿ ವಿಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 192 ರನ್ ಕಲೆ ಹಾಕಿದ್ದು 3ನೇ ಸ್ಥಾನದಲ್ಲಿದ್ದರೆ, ನಾಲ್ಕನೇ ಸ್ಥಾನದಲ್ಲಿ 2007ರಲ್ಲಿ ಡರ್ಬನ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಗಳಿಸಿದ 188 ರನ್ ಇದೆ.

  • Blogger Comments
  • Facebook Comments

0 comments:

Post a Comment

Item Reviewed: ಅಫಘಾನ್ ವಿರುದ್ದ ದೊಡ್ಡ ಜಯದೊಂದಿಗೆ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದ ಕೊಹ್ಲಿ ಪಡೆ Rating: 5 Reviewed By: karavali Times
Scroll to Top