ಮಂಗಳೂರು, ನವೆಂಬರ್ 04, 2021 (ಕರಾವಳಿ ಟೈಮ್ಸ್) : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2021-22ನೇ ಸಾಲಿಗೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಗೂಗಲ್ ಫಾರ್ಮ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆ ದಿನಾಂಕವಾಗಿದೆ.
ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಭೌಧ್ದ ಮತ್ತು ಪಾರ್ಸಿ ವರ್ಗಕ್ಕೆ ಸೇರಿದ ಮೆಟ್ರಿಕ್ ನಂತರದ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸರಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ದೊರಕದೆ ಇರುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರಿಸಲು ಅನುಕೂಲವಾಗುವಂತೆ ಊಟ ಮತ್ತು ವಸತಿ ಸೌಲಭ್ಯಕ್ಕೆ ಸಹಾಯಧನ ಒದಗಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದು, ಮನೆಯಿಂದ ವ್ಯಾಸಂಗ ಮಾಡುವ ಕಾಲೇಜಿನಿಂದ ಕನಿಷ್ಠ 5 ಕಿಲೋ ಮೀಟರ್ ದೂರದಲ್ಲಿರಬೇಕು. ಒಂದೇ ನಗರದ ವ್ಯಾಪ್ತಿಯಲ್ಲಿ ಇರುವವರು ಅರ್ಹರಿರುವುದಿಲ್ಲ. ಅರ್ಜಿಯನ್ನು ಗೂಗಲ್ ಪಾರ್ಮ್ ಮೂಲಕವೇ ಭರ್ತಿಮಾಡಿ ಅರ್ಜಿಯ ಜೊತೆ ದೃಢೀಕೃತ ದಾಖಲಾತಿಗಳನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯವರ ಕಛೇರಿ ಮೌಲಾನಾ ಆಝಾದ್ ಭವನ, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು ಇಲ್ಲಿಗೆ ಸಲ್ಲಿಸಬೇಕು ಎಂದು ಅಲ್ಪಸಂಖ್ಯಾತ ಇಲಾಖೆಯ ಜಿಲ್ಲಾ ಕಲ್ಯಾಣಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment