ಬಂಟ್ವಾಳ, ಜನವರಿ 07, 2022 (ಕರಾವಳಿ ಟೈಮ್ಸ್) : ಅಲ್ಪಸಂಖ್ಯಾತ ಘಟಕ ಕಾಂಗ್ರೆಸ್ ಪಕ್ಷದ ದೊಡ್ಡ ಶಕ್ತಿಯಾಗಿದೆ. ಯಾವುದೇ ಕಾರಣಕ್ಕೂ ಅಲ್ಪಸಂಖ್ಯಾತ ವಿಭಾಗ ಮತಗಳು ಸೋರಿಕೆಯಾಗದಂತೆ ವಿಭಾಗದ ಮುಖಂಡರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಸಂಜೆ (ಜ 7) ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶ ಹಾಗೂ ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷರುಗಳ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರಗಳು ವಿಫಲ ಸರಕಾರಗಳಾಗಲೀ ಮಾರ್ಪಾಡುಗೊಳ್ಳುತ್ತಾ ಇದ್ದು, ಬಿಜೆಪಿ ಆಡಳಿತದಿಂದ ಜನ ಭ್ರಮನಿರಶನಗೊಂಡಿದ್ದಾರೆ ಎಂದರು.
ಪಂಜಾಬಿನಲ್ಲಿ ರೈತರ ಆಕ್ರೋಶ ಸ್ಫೋಟಗೊಂಡ ಪರಿಣಾಮ ಅಲ್ಲಿನ ರೈತರು ಪ್ರಧಾನಿ ಮೋದಿ ಅವರನ್ನು ಹೆದ್ದಾರಿಯಲ್ಲಿ ತಡೆದು ನಿಲ್ಲಿಸಿದ್ದಾರೆ. ಇದರಲ್ಲಿ ಕೇಂದ್ರ ಸರಕಾರದ ಭದ್ರತಾ ಪಡೆಗಳ ವೈಫಲ್ಯ ಎದ್ದು ಕಾಣುತ್ತದೆ. ಇಲ್ಲಿನ ರಾಜ್ಯ ಸರಕಾರದ ಯಾವುದೇ ವೈಫಲ್ಯ ಇರುವುದಿಲ್ಲ. ದೇಶದ ಪ್ರಧಾನಿ ಪ್ರವಾಸ ಕೈಗೊಳ್ಳುವ ರಾಜ್ಯದ ಪೊಲೀಸ್ ಇಲಾಖೆ ಹಾಗೂ ಭದ್ರತೆಯ ಸಂಪೂರ್ಣ ಜವಾಭ್ದಾರಿಯನ್ನು ಕೇಂದ್ರ ಸರಕಾರದ ಭದ್ರತಾ ಪಡೆ ಕಮಾಂಡೋಗಳು ವಹಿಸಿಕೊಳ್ಳುವುದು ಸಾಮಾನ್ಯವಾಗಿದ್ದು, ಪ್ರಧಾನಿ ಭೇಟಿಗೂ ವಾರದ ಅಂತರದಲ್ಲಿ ಕೇಂದ್ರ ಭದ್ರತಾ ಪಡೆಗಳು ಆ ರಾಜ್ಯದಲ್ಲಿ ಬೀಡು ಬಿಟ್ಟು ಭದ್ರತಾ ಪರಿಶೀಲನೆ ನಡೆಸುತ್ತದೆ. ಹೀಗಿರುತ್ತಾ ಪ್ರಧಾನಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದಾಗ ಅದೇಗೆ ರಾಜ್ಯ ಸರಕಾರ ಹೊಣೆಯಾಗುತ್ತದೆ ಎಂದು ಪ್ರಶ್ನಿಸಿದ ಹರೀಶ್ ಕುಮಾರ್ ದೇಶದ ಓರ್ವ ಪ್ರಧಾನಿಯಾಗಿದ್ದವರು ಮಾತನಾಡುವಾಗ ಕನಿಷ್ಠ ಪ್ರಬುದ್ದತೆ ಬೇಡವೇ ಎಂದು ಲೇವಡಿ ಮಾಡಿದರು. ಈ ಎಲ್ಲ ನಾಟಕಗಳನ್ನು ಇಂದು ಪ್ರಜ್ಞಾವಂತ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮುಂದಿನ ಚುನಾವಣೆಗಳಲ್ಲಿ ಇದಕ್ಕೆಲ್ಲ ಉತ್ತರ ದೊರೆಯಲಿದೆ ಎಂದರು.
ಈಗಾಗಲೇ ನಡೆದ ಎಲ್ಲ ಚುನಾವಣೆಗಳಲ್ಲೂ ಅಧಿಕಾರ, ಹಣಬಲ, ತೋಳ್ಬಲ ಮೊದಲಾದ ಎಲ್ಲಾ ರೀತಿಯ ಪ್ರಭಾವಗಳ ನಡುವೆಯೂ ಬಿಜೆಪಿ ಗಣನೀಯ ಪ್ರಮಾಣದ ಸೋಲು ಕಾಣುತ್ತಿದ್ದು, ಇದರಿಂದಲೇ ಸರಕಾರದ ವೈಫಲ್ಯ ಸಾಬೀತಾಗುತ್ತಿದೆ ಎಂದ ಅವರು ಕೋವಿಡ್ ಪಾಸಿಟಿವಿಟಿ ದರ ಕೇವಲ ಶೇ 2 ಇದ್ದು ಲಾಕ್ ಡೌನ್, ನಿಷೇಧಾಜ್ಞೆ ವಿಧಿಸುವ ಯಾವುದೇ ಜರೂರತ್ತು ಇಲ್ಲದಿದ್ದರೂ ರಾಜ್ಯ ಸರಕಾರ ಕೇವಲ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಗಮನದಲ್ಲಿಟ್ಟುಕೊಂಡು ನಿಷೇಧಾಜ್ಞೆ ವಿಧಿಸುತ್ತಿದೆ. ಆದರೆ ಸರಕಾರದ ನಿರ್ಧಾರದ ಹೊರತಾಗಿಯೂ ನಮ್ಮ ನಾಯಕರು ಪಾದಯಾತ್ರೆ ನಡೆಸಿಯೇ ಸಿದ್ದ ಎಂದು ಸಾರಿದ್ದು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಕೂಡಾ ಇದಕ್ಕೆ ಬದ್ದರಾಗಿದ್ದಾರೆ ಎಂದು ಘೋಷಿಸಿದರು.
0 comments:
Post a Comment