ಸುಳ್ಯ, ಮಾರ್ಚ್ 21, 2022 (ಕರಾವಳಿ ಟೈಮ್ಸ್) : ತಾಲೂಕಿನ ಸಂಪಾಜೆ ಗ್ರಾಮದ ಚಟ್ಟೆಕಲ್ಲು-ಅಂಬಾಶ್ರಮ ನಿವಾಸಿ ಆಶಾ ಎಸ್ ಹೆಗಡೆ ಅವರ ಮನೆಗೆ ಭಾನುವಾರ ರಾತ್ರಿ ನುಗ್ಗಿದ 6 ಮಂದಿ ಅಪರಿಚಿತ ದರೋಡೆಕೋರರ ತಂಡ ಮಾರಕಾಸ್ತ್ರ ತೋರಿ ಬೆದರಿಸಿ ಸುಮಾರು ಐದೂವರೆ ಲಕ್ಷ ರೂಪಾಯಿ ಮೌಲ್ಯದ ನಗ-ನಗದು ದೋಚಿ ಪರಾರಿಯಾಗಿದ್ದಾರೆ.
ಆಶಾ ಎಸ್ ಹೆಗಡೆ ಅವರು ಒಂದೂವರೆ ತಿಂಗಳಿನಿಂದ ಗಂಡ ಮತ್ತು ಮಕ್ಕಳೊಂದಿಗೆ ಗಂಡನ ಮನೆಯಾದ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಅಂಬಾಶ್ರಮ ಎಂಬಲ್ಲಿ ಮಾವ ಅಂಬರೀಶ್ ಭಟ್, ಅತ್ತೆ ಪುಷ್ಪಾ, ಅಜ್ಜ ಗೋವಿಂದ ಭಟ್, ಅಜ್ಜಿ ಸರಸ್ವತಿ ಭಟ್ ಅವರ ಜೊತೆ ವಾಸವಾಗಿದ್ದು, ಮಾ 20 ರಂದು ಮಧ್ಯಾಹ್ನ 3.45 ಗಂಟೆಗೆ ಮಾವ ಅಂಬರೀಶ್ ಭಟ್ ಮತ್ತು ಗಂಡ ಶ್ರೀವತ್ಸ ಅವರು ಮಡಿಕೇರಿಗೆ ಪೂಜಾ ಕಾರ್ಯಕ್ರಮಕ್ಕೆ ತೆರಳಿದ್ದು, ಮನೆಯಲ್ಲಿ ಅತ್ತೆ, ಮಾವ, ಅಜ್ಜ, ಅಜ್ಜಿ ಮತ್ತು ಮಕ್ಕಳು ಇದ್ದರು. ರಾತ್ರಿ ಸುಮಾರು 8.30 ಗಂಟೆ ಸಮಯಕ್ಕೆ ನಾಯಿ ಬೊಗಳಿದ ಶಬ್ದ ಕೇಳಿ ಆಶಾ ಅವರು ಮನೆಯ ಮದ್ಯದ ಕೋಣೆಗೆ ಬರುವಷ್ಟರಲ್ಲಿ 3 ಜನ 20 ರಿಂದ 30 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿದ್ದು, ಇಬ್ಬರ ಕೈಯಲ್ಲಿ ಮಾರಾಕಾಸ್ತ್ರಗಳಿದ್ದು ಒಬ್ಬನ ಕೈಯಲ್ಲಿ ದೊಡ್ಡ ಕತ್ತಿ ಹಾಗೂ ಇನ್ನೊಬ್ಬನ ಕೈಯಲ್ಲಿ ದೊಡ್ಡ ಚೂರಿ ಇದ್ದು ನೇರವಾಗಿ ಬಂದು ಪಿರ್ಯಾದಿದಾರರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾರೆ. ಅಲ್ಲದೇ ಬಾಯಿಗೆ ಪ್ಲಾಸ್ಟರ್ ಹಾಕಿದಾಗ ಅಂಟದೆ ಕೆಳಗೆ ಬಿದ್ದಿದ್ದು, ಅವರೆಲ್ಲರೂ ತಮಿಳಿನಲ್ಲಿ ಮಾತನಾಡಿಕೊಂಡಿದ್ದರು. ನಂತರ ಒಳಗೆ ಬಂದು ಪಕ್ಕದ ಚಾವಡಿಯಲ್ಲಿದ್ದ ಅಜ್ಜ ಗೋವಿಂದ ಭಟ್ ಅವರನ್ನು ಕರೆ ತಂದು, ಅಜ್ಜಿ ಸರಸ್ವತಿ ಭಟ್ ಹೊರಗೆ ಬಂದಾಗ ಅವರ ಪೈಕಿ ಒಬ್ಬಾತ ಅಜ್ಜಿಯನ್ನು ಎಳೆದು ಬೀಳಿಸಿದನು. ನಂತರ ಕತ್ತಿಯನ್ನು ಅಜ್ಜಿಯ ಕುತ್ತಿಗೆಗೆ ಹಿಡಿದು ಹಣ ಎಲ್ಲಿ ಎಂದು ಕೇಳಿದ್ದಲ್ಲದೇ ಅಜ್ಜನ ಬಾಯಿಗೆ ಪ್ಲಾಸ್ಟರ್ ಹಾಕಿ ನಂತರ ಅತ್ತೆ, ಅಜ್ಜ, ಅಜ್ಜಿಯನ್ನು ಊಟದ ಕೋಣೆಯಲ್ಲಿ ಕೂರಿಸಿ, ಆಶಾ ಅವರನ್ನು ಕೋಣೆಗೆ ಕೂಡಿ ಹಾಕಿ ತಮಿಳಿನಲ್ಲಿ ಮತ್ತು ಕೈ ಸನ್ನೆಯಲ್ಲಿ ಗೋದ್ರೇಜಿನ ಕೀಯನ್ನು ಕೇಳಿದ್ದಾರೆ. ಈ ಸಂದರ್ಭ ಆಶಾ ಅವರು ಅತ್ತೆಯ ಬಳಿ ಇದೆ ಎಂದು ಹೇಳಿದಾಗ ಅತ್ತೆಯನ್ನು ಕರೆದುಕೊಂಡು ಬಂದು ಕೀ ತರಿಸಿ ಬಲಾತ್ಕಾರವಾಗಿ ಅವರ ಕೈಯಿಂದಲೇ ಬಾಗಿಲು ತೆಗೆಸಿ ಕಪಾಟಿನಲ್ಲಿದ್ದ ಚಿನ್ನವನ್ನು ತೆಗೆದಿದ್ದಲ್ಲದೇ ಮೇಜಿನ ಮೇಲಿದ್ದ ಆಶಾ ಅವರ ಗಂಡನ ಪರ್ಸ್‍ನಿಂದ ಎರಡೂವರೆ ಸಾವಿರ ರೂಪಾಯಿ ಹಣ, ಮಾವನ ಸಾಮ್‍ಸಾಂಗ್ ಮೊಬೈಲ್ ತೆಗೆದಿದ್ದು, ದೇವರ ಕೋಣೆಯಲ್ಲಿರುವ ಕಪಾಟಿನಿಂದ 2 ಹುಂಡಿ ಮತ್ತು 2 ಬ್ಯಾಗಿನಲ್ಲಿದ್ದ ಒಂದೂವರೆ ಲಕ್ಷ ರೂಪಾಯಿ ಹಣವನ್ನು ಎಗರಿಸಿ ಬಿಳಿ ವಸ್ತ್ರದಲ್ಲಿ ಸುತ್ತಿ ಹೊರಗೆ ಇನ್ನೊಬ್ಬನ ಕೈಗೆ ಹಸ್ತಾಂತರಿಸಿದರು. ನಂತರ ಟೇರೆಸಿಗೆ ಹೋಗಿ ಹಣಕ್ಕೆ ಹುಡುಕಾಡಿ ಏನೂ ಸಿಗದೇ ಇದ್ದಾಗ ವಾಪಾಸು ಬಂದು ಹೋಗುವಾಗ ಯಾರಿಗೂ ಹೇಳಿದಂತೆ ಬೆದರಿಕೆ ಹಾಕಿ ಹೋಗಿರುತ್ತಾರೆ.
ದರೋಡೆಕೋರರು ಅಂದಾಜು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ 30 ಗ್ರಾಂ ತೂಕದ ತಾಳಿ ಚೈನ್, ಅಂದಾಜು 1.60 ಲಕ್ಷ ರೂಪಾಯಿ ಮೌಲ್ಯದ 37 ಗ್ರಾಂ ತೂಕದ ಚಿನ್ನದ ರೋಪ್ ಚೈನ್, 20 ಸಾವಿರ ರೂಪಾಯಿ ಮೌಲ್ಯದ 4 ಗ್ರಾಂ ತೂಕದ ಚಿನ್ನದ ಉಂಗುರ, 60 ಸಾವಿರ ರೂಪಾಯಿ ಮೌಲ್ಯದ 12 ಗ್ರಾಂ ತೂಕದ 2 ಜತೆ ಕಿವಿಯ ಓಲೆ, ಒಂದೂವರೆ ಲಕ್ಷ ರೂಪಾಯಿ ನಗದು, ಏಳೂವರೆ ಸಾವಿರ ರೂಪಾಯಿ ಮೌಲ್ಯದ ಸ್ಯಾಮ್‍ಸಾಂಗ್ ಮೊಬೈಲ್, ಪರ್ಸಿನಲ್ಲಿದ್ದ ಎರಡೂವರೆ ಸಾವಿರ ರೂಪಾಯಿ ನಗದು ಸಹಿತ ಒಟ್ಟು 5.50 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಎಗರಿಸಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2022 ಕಲಂ 395 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ದರೋಡೆಕೋರರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
0 comments:
Post a Comment