ಧರ್ಮ ಸಾಮ್ರಾಜ್ಯದ ಕನಸು ಕಾಣುವವರು ಸ್ವಯಂಕೃತಾಪರಾಧದಿಂದ ಸರ್ವ ನಾಶ ಹೊಂದುವರು : ಬಸವಲಿಂಗ ಸ್ವಾಮೀಜಿ ಆಕ್ರೋಶ - Karavali Times ಧರ್ಮ ಸಾಮ್ರಾಜ್ಯದ ಕನಸು ಕಾಣುವವರು ಸ್ವಯಂಕೃತಾಪರಾಧದಿಂದ ಸರ್ವ ನಾಶ ಹೊಂದುವರು : ಬಸವಲಿಂಗ ಸ್ವಾಮೀಜಿ ಆಕ್ರೋಶ - Karavali Times

728x90

26 April 2022

ಧರ್ಮ ಸಾಮ್ರಾಜ್ಯದ ಕನಸು ಕಾಣುವವರು ಸ್ವಯಂಕೃತಾಪರಾಧದಿಂದ ಸರ್ವ ನಾಶ ಹೊಂದುವರು : ಬಸವಲಿಂಗ ಸ್ವಾಮೀಜಿ ಆಕ್ರೋಶ

ಮೈಸೂರು, ಎಪ್ರಿಲ್ 26, 2022 (ಕರಾವಳಿ ಟೈಮ್ಸ್) : ರಾಜ್ಯ-ದೇಶದಲ್ಲಿ ಧರ್ಮದ ಹೆಸರಿನಲ್ಲಿ ಗೊಂದಲ-ಸಂಘರ್ಷ ಸೃಷ್ಟಿಸುವವರಿಗೆ ಒಂದಲ್ಲ ಒಂದು ದಿನ ಪ್ರಕೃತಿಯೇ ಶಿಕ್ಷೆ ನೀಡಲಿದೆ ಎಂದು ಮೈಸೂರು-ಟಿಪ್ಪುಟೌನ್ ಇಲ್ಲಿನ ಬಸವಜ್ಞಾನ ಮಂದಿರದ ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ ಹೇಳಿದರು.

ಅತಾಯೇ ರಸೂಲ್ ಮೈಸೂರು ಇದರ ಆಶ್ರಯದಲ್ಲಿ ಮೈಸೂರು-ಗೌಸಿಯಾ ನಗರದ ಆಸ್ತಾನೆ ಖ್ವಾಜಾ ಸಭಾಂಗಣದಲ್ಲಿ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಅವರ ನೇತೃತ್ವದಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ಧರ್ಮದ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸುವ ಮಂದಿಗಳು ಯಾರೂ ಕೂಡಾ ಧರ್ಮದ ಬಗ್ಗೆ ಕಿಂಚಿತ್ತೂ ಅರಿವು ಹೊಂದಿದವರಲ್ಲ. ಅವರೆಲ್ಲ ಬಾವಿಯೊಳಗಿನ ಕಪ್ಪೆಯಾಗಿದ್ದಾರೆ. ತಾವಿರುವುದೇ ಸಾಮ್ಯಾಜ್ಯ ಎಂದುಕೊಂಡು ಇಂತಹ ಕೃತ್ಯಗಳನ್ನು ಎಸಗುತ್ತಾರೆಯೇ ಹೊರತು ಇವರಲ್ಲಿ ಯಾವುದೇ ಸದುದ್ದೇಶ ಇರುವುದಿಲ್ಲ ಎಂದರು.

ದೇಶದ ಸೌಹಾರ್ದತೆಯನ್ನು ಹಾಳುಮಾಡುವ ಉದ್ದೇಶದಿಂದ ಇವರು ತಮ್ಮ ಸಾಮ್ರಾಜ್ಯ ಸೃಷ್ಟಿ ಮಾಡಲು ಹೊರಟಿದ್ದಾರೆ. ಇವರಂತಹ ಅದೆಷ್ಟೋ ಫ್ಯಾಶಿಷ್ಟ್ ಸಂತತಿಗಳು ಹುಟ್ಟಿ ಮಣ್ಣು ಪಾಲಾಗಿವೆ. ಇವರದ್ದೂ ಕೂಡಾ ಅದೇ ರೀತಿ ಒಂದು ಹಂತದವರೆಗೆ ಇವರೆಲ್ಲಾ ಮೆರೆದಾಟ ನಡೆಸುತ್ತಾರೆ. ಇವರ ಸಂತತಿ ಸ್ವಯಂಕೃತಾಪರಾಧದಿಂದಾಗಿ ಸರ್ವನಾಶವಾಗಲಿದ್ದು, ಮುಂದಿನ ದಿನಗಳಲ್ಲಿ ಉತ್ತಮ ದಿನಗಳು ದೇಶದ ಪಾಲಿಗೆ ಬರಲಿದ್ದು, ದೇಶದ ಹಿಂದು-ಮುಸ್ಲಿಂ ಸಹಿತ ಎಲ್ಲಾ ಜಾತಿ-ಧರ್ಮಗಳು ಒಗ್ಗಟ್ಟಾಗಿ ಇಂತಹ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು ಎಂದು ಕರೆ ನೀಡಿದರು. 

ಧರ್ಮದ ಬಗ್ಗೆ ಅರಿವು-ಜ್ಞಾನ ಇದ್ದವರು ಯಾರೂ ಕೂಡಾ ಧರ್ಮದ ಹೆಸರಿನಲ್ಲಿ ಅಶಾಂತಿ-ಗೊಂದಲ, ಸಂಘರ್ಷ ಉಂಟು ಮಾಡಲಾರರು. ಇಸ್ಲಾಮಿನ ಶ್ರೇಷ್ಠ ತತ್ವಜ್ಞಾನಿ ಹಝ್ರತ್ ಅಲಿ ಅವರು ಹಣ-ಸಂಪತ್ತು ಒಟ್ಟುಗೂಡಿಸುವ ಬದಲು ಜ್ಞಾನವನ್ನು ಬೇಕಾದಷ್ಟು ಸಂಪಾದಿಸಲು ಕರೆ ನೀಡಿದ್ದಾರೆ. ಸಂಪತ್ತನ್ನು ರಾಶಿ ಹಾಕಿದರೆ ಅದನ್ನು ಕಳ್ಳರು ದೋಚಿಕೊಂಡು ಹೋಗುತ್ತಾರೆ, ಆದರೆ ಸಂಪಾದಿಸಿದ ಜ್ಞಾನವನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಹಝ್ರತ್ ಅಲೀ ಹೇಳಿದ ಹಾಗೆ ಜ್ಞಾನ ಸಂಪಾದಿಸಿದವರು ಸಮಾಜದಲ್ಲಿ ಸೌಹಾರ್ದತೆ, ಬಡವರಿಗೆ ಸಹಾಯ ಮಾಡಿಕೊಂಡು ಜೀವಿಸಲು ಸಾಧ್ಯವಾಗುತ್ತದೆ ಎಂದರು. 

ಮುಸ್ಲಿಮರು ಪವಿತ್ರ ರಂಝಾನ್ ತಿಂಗಳಲ್ಲಿ ಪರಸ್ಪರ ಸಹಾಯ-ಸಂಪತ್ತಿನ ಹಂಚಿಕೆಯ ಮೂಲಕ ಜಗತ್ತಿನಾದ್ಯಂತ ಸಂತೋಷದಿಂದ ಉಪವಾಸ ವೃತಾಚರಣೆ ನಡೆಸುತ್ತಾರೆ. ಜಗತ್ತಿನ ಎಲ್ಲಾ ಭಾಗದ ಮುಸ್ಲಿಮರೂ ಕೂಡಾ ಈ ಒಂದು ಪವಿತ್ರ ತಿಂಗಳನ್ನು ಭಕ್ತಿ-ಆರಾಧನೆಗಳಿಂದ ಧನ್ಯಗೊಳಿಸುತ್ತಾರೆ. ಇದು ಅವರ ದೈವಭಕ್ತಿ ಹಾಗೂ ಸೌಹಾರ್ದತೆಗೆ ಸಾಕ್ಷಿ ಎಂದು ಶ್ಪಾಘಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅತಾಯೆ ರಸೂಲ್ ಮೂವ್‍ಮೆಂಟ್ ಅಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಮಾತನಾಡಿ, ಪವಿತ್ರ ಇಸ್ಲಾಂ ಧರ್ಮ ಯಾವತ್ತೂ ಶಾಂತಿ-ಸೌಹಾರ್ದತೆಯ ಇತಿಹಾಸವನ್ನೇ ಹೊಂದಿದ್ದು, ಇಸ್ಲಾಮಿನ ಪೂರ್ವಿಕ ಮಹಾ ವ್ಯಕ್ತಿಗಳು ತಮ್ಮನ್ನು ಕೊಲ್ಲಲು ಬಂದ ಶತ್ರುಗಳಿಗೂ ಕೂಡಾ ಕ್ಷಮೆಯನ್ನು ನೀಡಿ ಉದಾರತೆ ಮೆರೆದ ಇತಿಹಾಸಗಳು ಮಾತ್ರ ಕಾಣಸಿಗುತ್ತದೆ ಎಂದರು. 

ಈ ಸಂದರ್ಭ ಸಯ್ಯಿದ್ ಬುರ್‍ಹಾನ್ ಶಾ ಖಾದ್ರಿ, ಸಯ್ಯದ್ ನವೀದ್ ಶಾ ಖಾದ್ರಿ, ನಸ್ರುಲ್ಲಾ ಶಾ ಖಾದ್ರಿ, ನಾಸಿರ್ ಶಾ ಖಾದ್ರಿ, ಮಹಬೂಬ್ ಷಾ ಚಿಶ್ತಿ, ಮೌಲಾನಾ ಮುಜಾಹಿದುಲ್ಲಾ, ಹಕೀಂ ರೋಶನ್ ಜಲಾಲ್ ಶಾ ಖಾದ್ರಿ, ಖ್ವಾಜಾ ಮೊಯಿನ್ ಅಲಿ ಶಾ ಚಿಶ್ತಿ, ಖ್ವಾಜಾ ಝುಬೈರ್ ಷಾ ಚಿಶ್ತಿ, ಖ್ವಾಜಾ ಯೂಸುಫ್ ಅಲಿ ಶಾ ಚಿಶ್ತಿ ಮೊದಲಾದವರು ಭಾಗವಹಿಸಿದ್ದರು. 


  • Blogger Comments
  • Facebook Comments

0 comments:

Post a Comment

Item Reviewed: ಧರ್ಮ ಸಾಮ್ರಾಜ್ಯದ ಕನಸು ಕಾಣುವವರು ಸ್ವಯಂಕೃತಾಪರಾಧದಿಂದ ಸರ್ವ ನಾಶ ಹೊಂದುವರು : ಬಸವಲಿಂಗ ಸ್ವಾಮೀಜಿ ಆಕ್ರೋಶ Rating: 5 Reviewed By: karavali Times
Scroll to Top