ಬಂಟ್ವಾಳ, ಮೇ 10, 2022 (ಕರಾವಳಿ ಟೈಮ್ಸ್) : 60 ವರ್ಷ ವಯೋಮಾನ ನೆಪವೊಡ್ಡಿ 19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಅಮಾನವೀಯವಾಗಿ ಬಿಡುಗಡೆ ಮಾಡಿರುವ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಬಂಟ್ವಾಳ ಶಾಸಕರ ಮೂಲಕ ಬೇಡಿಕೆಯ ಮನವಿಯನ್ನು ಮಂಗಳವಾರ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
60 ವರ್ಷದ ಬಿಸಿಯೂಟ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸುವಾಗ ನಿವೃತ್ತಿ ವೇತನ ಅಥವಾ ಇಡಿಗಂಟು ನೀಡಿ ಬಿಡುಗಡೆ ಮಾಡಬೇಕು, ಮಾರ್ಚ್ 31, 2022ಕ್ಕೆ ಬಿಸಿಯೂಟ ನೌಕರರನ್ನು ಬಿಡುಗಡೆಗೊಳಿಸಲು ಹೊರಡಿಸಿರುವ ಸುತ್ತೋಲೆಯನ್ನು ಬದಲಾಯಿಸಿ ಮರು ಆದೇಶ ನೀಡಬೇಕು, ಬಜೆಟಿನಲ್ಲಿ ಬಿಸಿಯೂಟ ನೌಕರರಿಗೆ ಹೆಚ್ಚಳ ಮಾಡಿದ 1000 ರೂಪಾಯಿ ವೇತನವನ್ನು ಜನವರಿ 2022ರಿಂದ ಅನ್ವಯಿಸಿ ಜಾರಿ ಮಾಡಬೇಕು, ಬಿಸಿಯೂಟ ಯೋಜನೆಯನ್ನು ಖಾಯಂ ಮಾಡಬೇಕು, ಖಾಯಂ ಮಾಡುವ ತನಕ 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಇವರನ್ನು ಕಾರ್ಮಿಕರೆಂದು ಗುರುತಿಸಬೇಕು, ಕೇಂದ್ರೀಕೃತ ಅಡುಗೆ ಕೇಂದ್ರ ಮಾದರಿ ಬೇಡ ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು, ನಮ್ಮ ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಶಿಫಾರಸ್ಸಿನಂತೆ 6000 ರೂಪಾಯಿ ಮತ್ತು 5000 ರೂಪಾಯಿ ಹೆಚ್ಚಳ ಮಾಡಬೇಕು, ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ಕಟ್ಟಿಕೊಡಬೇಕು, ಎಲ್ಲರಿಗೂ ಅನ್ವಯವಾಗದೇ ಇರುವ ಮನ್-ಧನ್ ಯೋಜನೆ ಮಾಡಿಸಲು ಇಲಾಖೆಯಿಂದ ಒತ್ತಾಯಿಸಬಾರದು, ಶಾಲಾವಧಿಯ ನಂತರ ನರೇಗಾ ಯೋಜನೆಯಡಿ ಶಾಲಾ ಕೈತೋಟದ ಕೆಲಸ ಇವರಿಗೆ ನೀಡಿ ಈ ಯೋಜನೆಯಿಂದ ವೇತನ ನೀಡಬೇಕು, ಬಿಸಿಯೂಟ ನೌಕರರಿಗೆ ಖಾಯಂ ಶಾಸನಾತ್ಮಕ ಸವಲತ್ತುಗಳನ್ನು ಜಾರಿ ಮಾಡಬೇಕು, ಬಿಸಿಯೂಟ ನೌಕರರಿಗೆ ಪ್ರತಿ ತಿಂಗಳು 5ನೇ ತಾರೀಕಿನ ಒಳಗೆ ವೇತನ ಪಾವತಿಯಾಗಬೇಕು, ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು, ಪ್ರತಿ ಶಾಲೆಯಲ್ಲಿ ಕನಿಷ್ಠ 2 ಜನ ಅಡುಗೆಯವರು ಇರಲೇಬೇಕು ಎಂಬ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ನೀಡಲಾಯಿತು.
ನಿಯೋಗದಲ್ಲಿ ಅಕ್ಷರ ದಾಸೋಹ ಸಂಘದ ಅಧ್ಯಕ್ಷೆ ವಿನಯ ನಡುಮೊಗರು, ಸಿಐಟಿಯು ಕಾರ್ಯದರ್ಶಿ ರಾಮಣ್ಣ ವಿಟ್ಲ, ಅಕ್ಷರ ದಾಸೋಹ ನೌಕರರಾದ ಸೀತಾ ಭವಾನಿ ಸುಶೀಲ ಮಾಲತಿ, ನಳಿನಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment