ಸ್ವಪ್ರತಿಷ್ಠೆಗಾಗಿ ವಾಹನಗಳ ಸಂಖ್ಯಾ ಫಲಕ ಬಳಸಿಕೊಳ್ಳುವವರಿಗೆ ಸಾರಿಗೆ ಇಲಾಖೆಯಿಂದ ಬಿಗ್ ಶಾಕ್
ಬೆಂಗಳೂರು, ಮೇ 26, 2022 (ಕರಾವಳಿ ಟೈಮ್ಸ್) : ವಾಹನಗಳ ನಂಬರ್ ಪ್ಲೇಟ್ ಮೇಲೆ ಹೆಸರು ಹಾಕಿ ಪುಕ್ಕಟೆ ಶೈನಿಂಗ್ ಆಗುವವರ ಚಾಳಿಯನ್ನು ನಿಯಂತ್ರಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ವಾಹನಗಳ ಗುರುತಿಗಾಗಿ ನಂಬರ್ ಪ್ಲೇಟ್ ನೀಡಲಾಗುತ್ತದೆಯೇ ಹೊರತು ತಮ್ಮ ಸ್ಟೇಟಸ್, ಪ್ರತಿಷ್ಠೆ, ಪ್ರಚಾರ್ ಗೀಳಿಗಾಗಿ ಅಲ್ಲ ಎಂಬ ಸಂದೇಶ ಸಾರಲು ಸಜ್ಜಾಗಿದ್ದು, ಇದನ್ನು ಮೀರಿ ವರ್ತಿಸುವ ವಾಹನ ಮಾಲಕ-ಚಾಲಕರಿಗೆ ಮುಂದಿನ ದಿನಗಳಲ್ಲಿ ದುಬಾರಿ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ವಾಹನಗಳ ನಂಬರ್ ಪ್ಲೇಟ್ ಮೇಲಿರುವ ಹೆಸರು, ಚಿಹ್ನೆ ಮೊದಲಾದ ಎಕ್ಸ್ಟ್ರಾ ಕ್ರಿಯೇಟಿವಿಟಿಗಳನ್ನು ತೆರವುಗೊಳಿಸಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಈಗಾಗಲೇ ಆದೇಶ ಹೊರಡಿಸಿದ್ದಾರೆ. ಆದರೂ ಇನ್ನು ಕೂಡಾ ಬಹುತೇಕ ವಾಹನಗಳ ನಂಬರ್ ಪ್ಲೇಟ್ ಮೇಲೆ ಇರುವ ಹೆಸರು, ಚಿಹ್ನೆ, ಲಾಂಛನಗಳು ತೆರವುಗೊಂಡಿಲ್ಲ. ಹೀಗಾಗಿ ನಗರದಲ್ಲೆಡೆ ಸಾರಿಗೆ ಇಲಾಖೆ ಅಧಿಕಾರಿಗಳು ರಸ್ತೆಗೆ ಇಳಿದಿದ್ದು, ಇಂತಹ ವಾಹನಗಳನ್ನು ಗುರುತಿಸಿ 500 ರೂಪಾಯಿ ದಂಡ ವಿಧಿಸಲು ರೆಡಿಯಾಗಿದ್ದಾರೆ.
ನೋಂದಣಿ ಫಲಕದ ಮೇಲೆ ಅನಧಿಕೃತವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗ ಇತ್ಯಾದಿ ಲಾಂಛನಗಳನ್ನ ಹಾಕೋದು ಸಂಚಾರಿ ನಿಯಮದ ಉಲ್ಲಂಘನೆಯಾಗಲಿದೆ. ಆದರೂ ಕೂಡಾ ಸಾರ್ವಜನಿಕರು ಬೇಕಾಬಿಟ್ಟಿ ಶೋಕಿಗೆ ನಂಬರ್ ಪ್ಲೇಟ್‍ಗಳನ್ನು ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಇದಕ್ಕಾಗಿ ಸರಕಾರದ ಸೂಚನೆಯಂತೆ ಸಾರಿಗೆ ಇಲಾಖೆ ಕಾರ್ಯಾಚರಣೆಗೆ ಮುಂದಾಗಿದೆ.
ಹಲವು ಮಂದಿ ವಾಹನ ಮಾಲಕರು ತಮ್ಮ ಸ್ವಪ್ರತಿಷ್ಟೆಗಾಗಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಇಂತಹ ಮೊದಲಾದ ಪದನಾಮಗಳನ್ನು ಬರೆಸಿಕೊಂಡು ಪುಕ್ಕಟೆ ಪ್ರಚಾರಕ್ಕಾಗಿ ವಾಹನಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇಂತಹವರಿಗೆ ಶಾಕ್ ಕೊಡಲು ಸಾರಿಗೆ ಇಲಾಖಾಧಿಕಾರಿಗಳು ಸಜ್ಜಾಗಿದ್ದು, ಕಾರ್ಯಾಚರಣೆ ಬಿರುಸುಗೊಳ್ಳು ಸಾಧ್ಯತೆ ಇದೆ.
ಆದೇಶ ಪಾಲನೆಯ ಗಡುವಿನ ಬಳಿಕ ನಾಮಫಲಕ ತೆರವುಗೊಳಿಸದಿದ್ದಲ್ಲಿ ಅಂತಹ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಯಾವುದೇ ಖಾಸಗಿ ವಾಹನಗಳ ಮಾಲೀಕರುಗಳು ತಮ್ಮ ವಾಹನಗಳ ಮೇಲೆ ಸರಕಾರಿ ಲಾಂಛನ ಅಥವಾ ಹೆಸರುಗಳನ್ನು ಅಳವಡಿಸಬೇಕಾದಲ್ಲಿ ಸರಕಾರದಿಂದ ಅನುಮತಿ ಪಡೆದುಕೊಳ್ಳಲೇಬೇಕು.
0 comments:
Post a Comment