ಗುಡ್ಡೆಅಂಗಡಿ ಉದಯಾಸ್ತಮಾನ ಉರೂಸ್ ಇಂದು (ಮೇ 15) ಸಮಾರೋಪ
ಬಂಟ್ವಾಳ, ಮೇ 15, 2022 (ಕರಾವಳಿ ಟೈಮ್ಸ್) : ಸಮುದಾಯದಲ್ಲಿ ಸಮಸ್ಯೆಗಳು ಉದ್ಭವಿಸುವ ಸಂದರ್ಭ ದಾರ್ಮಿಕ ಪಂಡಿತರ, ನಾಡಿನ ಹಿರಿಯರ, ಮೊಹಲ್ಲಾ-ಜಮಾಅತ್ ಪ್ರಮುಖರ ಜೊತೆ ಚರ್ಚಿಸಿ ಶಾಂತಿಯುತ-ಸಹಬಾಳ್ವೆಯ ಪರಿಹಾರ ಕಂಡುಕೊಳ್ಳಬೇಕು ಹೊರತು ವಿನಾ ಕಾರಣ ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ತೇಜೋವಧೆ, ಕೆಸರೆರಚಾಟ ಅಥವಾ ಪರದೂಷಣೆಗಳ ಮೂಲಕ ಸಮಯ ಕಳೆಯದಿರಿ ಎಂದು ರಾಜ್ಯ ವಕ್ಫ್ ಇಲಾಖಾ ಚೆಯರ್ ಮೆನ್ ಮೌಲಾನಾ ಶಾಫಿ ಸ-ಅದಿ ಸಮುದಾಯದ ಯುವಕರಿಗೆ ಕರೆ ನೀಡಿದರು.
ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ಮೌಲವಿ (ಖ.ಸಿ) ಅವರ 42ನೇ ವರ್ಷದ ಉದಯಾಸ್ತಮಾನ ಉರೂಸ್ ಕಾರ್ಯಕ್ರಮದ ಧಾರ್ಮಿಕ ಉಪನ್ಯಾಸ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮುದಾಯದ ಯುವ ಸಮೂಹ ಲೌಕಿಕವಾಗಿ ಉನ್ನತ ವಿದ್ಯಾಭ್ಯಾಸ ಪಡೆದು ಸುಶಿಕ್ಷಿತರಾದಾಗ ಧಾರ್ಮಿಕ ಮೌಲ್ಯಯುತ ಜೀವನದಿಂದ ವಿಮುಖಗೊಂಡು ಹಾದಿ ತಪ್ಪುವುದರಿಂದ ಜಾಗರೂಕರಾಗಬೇಕಿದೆ ಎಂದು ತಾಕೀತು ಮಾಡಿದರು.
ಸಮುದಾಯದ ಸಮಸ್ಯೆಗಳಿಗೆ ಧಾರ್ಮಿಕ ಪಂಡಿತರ ಸಮಕ್ಷಮದಲ್ಲಿ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಸಂದರ್ಭ ಸ್ವಯಂಘೋಷಿತರಾಗಿ ವೈಯುಕ್ತಿಕ ಅಭಿಪ್ರಾಯಗಳನ್ನು ಸರ್ವಜ್ಞರಂತೆ ಸಾರ್ವಜನಿಕವಾಗಿ ವ್ಯಕ್ತಪಡಿಸುವ ಮೂಲಕ ಶಾಂತಿ-ಸೌಹಾರ್ದತೆಗೆ ಹುಳಿ ಹಿಂಡುವ, ವಿಷ ಬೀಜ ಬಿತ್ತುವ ಕೆಲಸ ಯಾರಿಂದಲೂ ಉಂಟಾಗಕೂಡದು ಎಂದ ಶಾಫಿ ಸ-ಅದಿ ತಮ್ಮ ತಮ್ಮ ಧರ್ಮ ಸಿದ್ದಾಂತಗಳನ್ನು ಬಹಳವಾಗಿ ನೆಚ್ವಿಕೊಳ್ಳುವ ಜೊತೆಗೆ ಸಹೋದರ ಧರ್ಮೀಯರನ್ನು ಗೌರವಿಸುವ ಮೂಲಕ ಮತೀಯ ಸೌಹಾರ್ದತೆ ಎತ್ತಿ ಹಿಡಿಯುವ ಅನಿವಾರ್ಯತೆ ನಮ್ಮ ದೇಶದಲ್ಲಿ ಪ್ರಸ್ತುತ ಅತೀ ಹೆಚ್ಚಾಗಿದೆ ಎಂದರು.
ದುವಾಶೀರ್ವಚನಗೈದ ಸಯ್ಯಿದ್ ಎನ್ ಪಿ ಎಂ ಶರಫುದ್ದೀನ್ ತಂಙಳ್ ಹಾದೀ ದಾರಿಮಿ ರಬ್ಬಾನಿ ಕುನ್ನುಂಗೈ ಅವರು ಮಾತನಾಡಿ ಭಗವಂತನ ಇಷ್ಟದಾಸರನ್ನು ಅವರ ವ್ಯಕ್ತಿ ಮಹಿಮೆಗಳನ್ನು ನಿರ್ಲಕ್ಷಿಸದೆ ಗೌರವಿಸುವ ಮೂಲಕ ಇಹ-ಪರ ಜಂಜಾಟಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.
ಮಸೀದಿ ಅಧ್ಯಕ್ಷ ಹಾಜಿ ಎಸ್ ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಕೆ ಪಿ ಮುಹಮ್ಮದ್ ಹಸ್ವೀಫ್ ದಾರಿಮಿ ಕಾಜಿನಡ್ಕ ಉದ್ಘಾಟಿಸಿದರು.
ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್, ಎ ಎ ಇಬ್ರಾಹಿಂ ಮುಸ್ಲಿಯಾರ್ ಬೋಗೋಡಿ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಮಸೀದಿ ಉಪಾಧ್ಯಕ್ಷ ಪಿ ಬಿ ಹಾಮದ್ ಹಾಜಿ, ಕಾರ್ಯದರ್ಶಿ ಅಬೂಬಕ್ಕರ್ ಮೆಲ್ಕಾರ್, ಮದ್ರಸ ಅಧ್ಯಾಪಕರಾದ ರಶೀದ್ ಹನೀಫಿ, ಉಸ್ಮಾನ್ ಮುಸ್ಲಿಯಾರ್, ಮುಹಮ್ಮದ್ ಇಸ್ಮಾಯಿಲ್ ಮುಸ್ಲಿಯಾರ್, ಅಬ್ದುಲ್ ರಝಾಕ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ವಕ್ಫ್ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಆಗಮಿಸಿದ ಮೌಲಾನಾ ಶಾಫಿ ಸ-ಅದಿ ಅವರನ್ನು ಜಮಾಅತ್ ಪರವಾಗಿ ಸನ್ಮಾನಿಸಲಾಯಿತು. ಮಸೀದಿ ಆವರಣ ಗೋಡೆ ನಿರ್ಮಾಣಕ್ಕಾಗಿ ಬೇಕಾಗುವ 45 ಲಕ್ಷ ರೂಪಾಯಿ ಮೊತ್ತವನ್ನು ವಕ್ಪ್ ಇಲಾಖೆಯಿಂದ ಅನುದಾನವಾಗಿ ಒದಗಿಸಿಕೊಡುವಂತೆ ಮನವಿ ಸಲ್ಲಿಸಲಾಯಿತು. ಮ
ಮಸೀದಿ ಗೌರವಾಧ್ಯಕ್ಷ ಹಾಜಿ ಬಿ ಎ ಮುಹಮ್ಮದ್ ನೀಮಾ ಸ್ವಾಗತಿಸಿ, ಉಪಾಧ್ಯಕ್ಷ ಉಮ್ಮರ್ ಫಾರೂಕ್ ವಂದಿಸಿದರು.
ಇಂದು (ಮೇ 15) ಉರೂಸ್ ಹಾಗೂ ಅನ್ನದಾನ
ಮೇ 15 ಭಾನುವಾರ (ಇಂದು) ಉದಯಾಸ್ತಮಾನ ಉರೂಸ್ ಹಾಗೂ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಲಿದೆ. ಸುಬುಹಿ ನಮಾಝ್ ಬಳಿಕ ಎ ಎ ಇಬ್ರಾಹಿಂ ಮುಸ್ಲಿಯಾರ್ ನೇತೃತ್ವದಲ್ಲಿ ಖತಮುಲ್ ಕುರ್ ಆನ್, ಲುಹ್ರ್ ನಮಾಝ್ ಬಳಿಕ ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ಬಳಿಕ ಅನ್ನದಾನ ನಡೆಯಲಿದೆ.
0 comments:
Post a Comment