ಮುಸ್ಲಿಮರು ತಮ್ಮ‌ ಜೀವಕ್ಕೆ ಬೆಲೆ ನೀಡರು, ಆದರೆ ಪ್ರವಾದಿ ನಿಂದನೆ ಸಹಿಸಲಾರೆವು : ತೌಸೀಫ್ ದಾರಿಮಿ - Karavali Times ಮುಸ್ಲಿಮರು ತಮ್ಮ‌ ಜೀವಕ್ಕೆ ಬೆಲೆ ನೀಡರು, ಆದರೆ ಪ್ರವಾದಿ ನಿಂದನೆ ಸಹಿಸಲಾರೆವು : ತೌಸೀಫ್ ದಾರಿಮಿ - Karavali Times

728x90

17 June 2022

ಮುಸ್ಲಿಮರು ತಮ್ಮ‌ ಜೀವಕ್ಕೆ ಬೆಲೆ ನೀಡರು, ಆದರೆ ಪ್ರವಾದಿ ನಿಂದನೆ ಸಹಿಸಲಾರೆವು : ತೌಸೀಫ್ ದಾರಿಮಿ

  ಗುಡ್ಡೆಅಂಗಡಿ ಜಮಾಅತ್ ವತಿಯಿಂದ ಪ್ರವಾದಿ ನಿಂದನೆ ವಿರುದ್ದ ಪ್ರತಿಭಟನೆ  ಬಂಟ್ವಾಳ, ಜೂನ್ 18, 2022 (ಕರಾವಳಿ ಟೈಮ್ಸ್) : ಪವಿತ್ರ ಇಸ್ಲಾಮಿನ ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ತನ್ನ ಜೀವಕ್ಕಿಂತ‌, ಬಂಧು-ಬಳಗಕ್ಕಿಂತ ಹಾಗೂ ಈ ಲೌಕಿಕದ ಸರ್ವ ವಸ್ತುಗಳಿಗಿಂತಲೂ ಮಿಗಿಲಾಗಿ ಪ್ರೀತಿಸುವವರಾಗಿದ್ದು, ಇದಕ್ಕೆ ಹೊರತಾಗಿ ಆತನ ವಿಶ್ವಾಸ ಪೂರ್ಣವಾಗದು ಎಂಬ ನಿಟ್ಟಿನಲ್ಲಿ ಜೀವ ಹೋದರೂ‌ ಸರಿಯೇ, ಪ್ರವಾದಿಗಳ ನಿಂದನೆಯನ್ನು ಸಹಿಸಲಾರೆವು ಎಂದು ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಖತೀಬ್ ತೌಸೀಫ್ ದಾರಿಮಿ ಪ್ರವಾದಿ ನಿಂದನೆ ವಿರುದ್ದ ಕಟುವಾಗಿ ಪ್ರತಿಕ್ರಯಿಸಿದರು.  

ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಹಾಗೂ ಜಮಾಅತಿಗರ ವತಿಯಿಂದ ಶುಕ್ರವಾರ ಜುಮಾ ನಮಾಝ್ ಬಳಿಕ ಮಸೀದಿ ವಠಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರವಾದಿ ನಿಂದನೆ ವಿರುದ್ದ ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಸ್ಲಾಂ ಧರ್ಮ ಹಾಗೂ ಪ್ರವಾದಿಗಳ ವಿರುದ್ದ ನಿಂದನಾತ್ಮಕವಾಗಿ ಹಾಗೂ‌ ಬಾಯಿಗೆ ಬಂದುದನ್ನು ಮಾತನಾಡುವ ಮಂದಿಗಳು ಮೊದಲು ಇಸ್ಲಾಂ ಧರ್ಮದ ತತ್ವ ಸಿದ್ದಾಂತಗಳ‌ ಬಗ್ಗೆ, ಪ್ರವಾದಿಗಳು ಈ ಲೋಕಕ್ಕೆ ಸಾರಿದ ಸಾರ್ವಕಾಲಿಕ ಸಿದ್ದಾಂತಗಳ‌ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕು ಎಂದವರು ತಾಕೀತು ಮಾಡಿದರು. 

 ಇಸ್ಲಾಮಿನ ಪ್ರವಾದಿಗಳು ಸಹೋದರ ಧರ್ಮೀಯರ ಮೃತದೇಹ ಹೊತ್ತುಕೊಂಡು ಹೋಗುತ್ತಿದ್ದ ಸಂದರ್ಭದಲ್ಲೂ ಎದ್ದು ನಿಂತು ಮೃತ ಶರೀರಕ್ಕೆ ಗೌರವ ಕೊಡುತ್ತಿದ್ದರು. ಇದಾಗಿದೆ ಪ್ರವಾದಿಗಳ ಮಾನವೀಯ ಮುಖ. ಹಸಿದಿರುವ ನೆರೆಯವನು ಯಾವ ಜಾತಿಯವನು ಎಂಬ ಉಲ್ಲೇಖ ನೀಡದ ಪ್ರವಾದಿಗಳು ಅವರ ಹೊಟ್ಟೆ ಹಸಿವು ತಣಿಸದೆ ನೀನು ಮಾತ್ರ ಉಂಡು ತೇಗಿದರೆ ನೀನು ನೈಜ ಮುಸಲ್ಮಾನನಲ್ಲ ಎಂದು ಮಾನವೀಯ ಪಾಠವನ್ನು ಜಗತ್ತಿಗೆ ಸಾರಿದ ಪ್ರವಾದಿಗಳ ಆ ಉದಾತ್ತ ಸಂದೇಶವನ್ನು ಜಗತ್ತಿನ ಮುಸಲ್ಮಾನರು ಲಾಕ್ ಡೌನ್ ಸಂದರ್ಭದಲ್ಲಿ ಜಾತಿ-ಧರ್ಮ, ಪಂಗಡಗಳ ಬೇಧ ಭಾವ ನೋಡದೆ ತಮ್ಮಲ್ಲಿರುವುದನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಪ್ರಚಾರ ಬಯಸದೆ ಇತರರಿಗೂ ಹಂಚುವ ಮೂಲಕ ಸಾರಿದ್ದಾರೆ ಎಂದ ತೌಸೀಫ್ ದಾರಿಮಿ ಸಹೋದರ ಧರ್ಮೀಯರ, ಅವರ ಧಾರ್ಮಿಕ ನೇತಾರರ ಬಗ್ಗೆ ತಿಳಿಯದೆ ಯಾವುದೋ ಸ್ವಾರ್ಥ ಉದ್ದೇಶ ಇಟ್ಟುಕೊಂಡು ಸಮಾಜದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸುವ ಏಕಮಾತ್ರ ಉದ್ದೇಶದಿಂದ ಹೀನಾಯ ಮಾತುಗಳಲ್ಲಿ ನಿಂದಿಸುವವರನ್ನು ಅವರು ಪ್ರತಿನಿಧಿಸುವ ಧರ್ಮದ ಉನ್ನತ ನಾಯಕರು ಮೊದಲು ಬಹಿಷ್ಕರಿಸುವ ಮೂಲಕ ಅವರಿಗೆ ಸನಾತನ ಹಿಂದೂ ಧರ್ಮದ ಪರಧರ್ಮ ಸಹಿಷ್ಣುತೆಯನ್ನು ಬೋಧಿಸುವ ಮೂಲಕ ಹಿಂದೂ ಧರ್ಮದ ಗೌರವ-ಹಿರಿಮೆಯನ್ನು ಕಾಪಾಡುವ ತುರ್ತು ಅನಿವಾರ್ಯತೆ ಇದೆ ಎಂದು ಸಲಹೆ ನೀಡಿದರು. ಯಾ

ಯಾವುದೋ ನಾಲಗೆ ಚಪಲಕ್ಕೆ ಯಾರೋ ಒಬ್ಬರು ಒಂದು ಧರ್ಮವನ್ನು ಹೀನವಾಗಿ ನಿಂದಿಸುವ ಮೂಲಕ ಜಾಗತಿಕವಾಗಿ ನಮ್ಮ ದೇಶದ ಮಾನವನ್ನು ಹರಾಜು ಹಾಕುವ ಸಂದರ್ಭ ಹಿಂದೂ ಧರ್ಮದ ಉದಾತ್ತ ಸಂಸ್ಕೃತಿಗಳೂ ಜಾಗತಿಕವಾಗಿ ವಿಮರ್ಶಿಸಲ್ಪಡುತ್ತದೆ. ಇದನ್ನು ಭಾರತೀಯ ಮುಸಲ್ಮಾನರು ಎಂದಿಗೂ ಸಹಿಸಲಾರೆವು. 

ಭಾರತೀಯ ಮುಸ್ಲಿಮರು ತಮ್ಮ ಧರ್ಮದ ತತ್ವ-ಸಂದೇಶಗಳನ್ನು ಪಾಲಿಸುವುದರ ಜೊತೆಗೆ ನಮ್ಮ ದೇಶದ ಇತರ ಸಮುದಾಯಕ್ಕೂ ಅಷ್ಟೇ ದೊಡ್ಡ ಮಟ್ಟದಲ್ಲಿ ಗೌರವ ಸಲ್ಲಿಸುವವರಾಗಿದ್ದೇವೆ. ಈ ನಿಟ್ಟಿನಲ್ಲಿ ಹಿಂದೂ ಧರ್ಮದ ಗೌರವಾನ್ವಿತ ಧರ್ಮ ಪಂಡಿತರು, ಗೌರವಾನ್ವಿತ ಸ್ವಾಮೀಜಿಗಳು ಧರ್ಮದೊಂದಿಗೆ ರಾಜಕೀಯ ಬೆರೆಸಿ ಲಾಭ ಗಳಿಸಿ ಆ ಮೂಲಕ ಸಮಾಜದ ಮತ ಸೌಹಾರ್ದತೆ ಹಾಳುವ ಮಾಡುವ ಯಾರೇ ಆದರೂ ಅವರ ವಿರುದ್ದ ಬಹಿರಂಗ ಸಮರಕ್ಕಿಳಿಯಬೇಕಾಗಿದೆ ಎಂದವರು ಕೋರಿದರು. 

 ಸ್ಥಳೀಯ ಪುರಸಭಾ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್, ಮಸೀದಿ ಗೌರವಾಧ್ಯಕ್ಷ ಮುಹಮ್ಮದ್ ಹಾಜಿ ನೀಮಾ, ಅಧ್ಯಕ್ಷ ಹಾಜಿ ಎಸ್ ಮುಹಮ್ಮದ್, ಕಾರ್ಯದರ್ಶಿ ಅಬೂಬಕ್ಕರ್ ಮೆಲ್ಕಾರ್, ಪ್ರಮುಖರಾದ ಇರ್ಶಾದ್ ಗುಡ್ಡೆಅಂಗಡಿ, ಹನೀಫ್ ಬೋಗೋಡಿ, ಅಬ್ದುಲ್ ಹಮೀದ್ ಗುಡ್ಡೆಅಂಗಡಿ, ಮಜೀದ್ ಬೋಗೋಡಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಮುಸ್ಲಿಮರು ತಮ್ಮ‌ ಜೀವಕ್ಕೆ ಬೆಲೆ ನೀಡರು, ಆದರೆ ಪ್ರವಾದಿ ನಿಂದನೆ ಸಹಿಸಲಾರೆವು : ತೌಸೀಫ್ ದಾರಿಮಿ Rating: 5 Reviewed By: karavali Times
Scroll to Top