ಬೆಳ್ತಂಗಡಿ, ಜುಲೈ 24, 2022 (ಕರಾವಳಿ ಟೈಮ್ಸ್) : ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿ ಶನಿವಾರ (ಜುಲೈ 23) ರಂದು ಹಾಡುಹಗಲೇ ಮನೆಯಲ್ಲಿದ್ದ ವೃದ್ದೆ ಅಕ್ಕು (85) ಎಂಬವರನ್ನು ಹತ್ಯೆ ಮಾಡಿ ಚಿನ್ನಾಭರಣ ಸಹಿತ ಮನೆಯಲ್ಲಿದ್ದ ನಗದು ದೋಚಿದ ಆರೋಪಿಯನ್ನು ಭಾನುವಾರ (ಜುಲೈ 24) ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೃತರ ಪುತ್ರ ಡೀಕಯ್ಯ ಅಮ್ಮುಗೌಡ ನೀಡಿದ ದೂರಿನಂತೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕು, ಕಡಿರುದ್ಯಾವರ ಗ್ರಾಮದ ಕಾನರ್ಪ ನಿವಾಸಿ ಡೀಕಯ್ಯ ಗೌಡ ಎಂಬವರ ಪುತ್ರ ಅಶೋಕ (32) ಎಂದು ಗುರುತಿಸಲಾಗಿದೆ. ಈತ ಮೃತ ಅಜ್ಜಿಯ ಪುತ್ರ, ದೂರುದಾರ ಡೀಕಯ್ಯನ ಪತ್ನಿಯ ಅಕ್ಕನ ಮಗನಾಗಿದ್ದಾನೆ.
ಶನಿವಾರ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿ ಡೀಕಯ್ಯ ಅಮ್ಮು ಗೌಡ ಅವರು ಹೆಂಡತಿಯೊಂದಿಗೆ ಕೂಲಿ ಕೆಲಸಕ್ಕೆ, ಹಾಗೂ ಮೊಮ್ಮಗಳು ಮೌಲ್ಯ (12) ಶಾಲೆಗೆ ಹೋಗಿದ್ದು, ಮನೆಯಲ್ಲಿ ವಯಸ್ಸಾದ ತಾಯಿ ಅಕ್ಕು ಅವರು ಒಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿದ ಆರೋಪಿ ಚಿನ್ನಾಭರಣ ನಗದಿಗಾಗಿ ಈ ಕೃತ್ಯ ಎಸಗಿ ಪರಾರಿಯಾಗಿದ್ದ. ಮಧ್ಯಾಹ್ನ 2 ಗಂಟೆಯ ವೇಳೆಗೆ ಮೊಮ್ಮಗಳು ಮೌಲ್ಯ ಶಾಲೆಯಿಂದ ಮನೆಗೆ ಬಂದು ಅಜ್ಜಿಯನ್ನು ಕರೆದು ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಮನೆಯಲ್ಲಿ ಹುಡುಕಾಡಿ, ನಂತರ ಮನೆಯ ಹಿಂಬದಿಯ ಕೊಟ್ಟಿಗೆ ಗೊಬ್ಬರ ಹಾಕುವ ಜಾಗದಲ್ಲಿ ಅಜ್ಜಿ ಬಿದ್ದಿರುವುದನ್ನು ನೋಡಿ ಅಕ್ಕ ಪಕ್ಕದ ಮನೆಯವರಿಗೆ ಮಾಹಿತಿ ತಿಳಿಸಿದಂತೆ ಮನೆಯವರು ಬಂದು ನೋಡಿದಾಗ ಗಂಭೀರ ಹಲ್ಲೆಯಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತಾದರೂ ಅದಾಗಲೇ ಅವರು ಮರಣ ಹೊಂದಿದ್ದರು. ಡೀಕಯ್ಯ ಹಾಗೂ ಪತ್ನಿ ಕೆಲಸಕ್ಕೆ ಹಾಗೂ ಮೊಮ್ಮಗಳು ಶಾಲೆಗೆ ಹೋದ ಬಳಿಕ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 2 ಗಂಟೆಯ ಮಧ್ಯದ ಅವಧಿಯಲ್ಲಿ ಆರೋಪಿ ಈ ಕೃತ್ಯ ಎಸಗಿದ್ದ
ಈ ಬಗ್ಗೆ ಮೃತರ ಪುತ್ರ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 54/2022 ಕಲಂ 392,302 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಜಿಲ್ಲಾ ಎಸ್ಪಿ ನೇತೃತ್ವದ ಧರ್ಮಸ್ಥಳ ಹಾಗೂ ಬೆಳ್ತಂಗಡಿ ಪೊಲೀಸರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
0 comments:
Post a Comment