ಬಂಟ್ವಾಳ, ಜುಲೈ 07, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಬುಧವಾರ ಸಂಜೆ ನಡೆದ ಭೀಕರ ಗುಡ್ಡ ಕುಸಿತ ದುರಂತದಲ್ಲಿ ಇನ್ನಿಬ್ಬರು ಗಾಯಾಳುಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಮೃತರ ಸಂಖ್ಯೆ 3ಕ್ಕೇರಿದೆ. ಮತ್ತೋರ್ವ ಕಾರ್ಮಿಕ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸ್ಥಳೀಯ ನಿವಾಸಿ ಹೆನ್ರಿ ಕಾರ್ಲೊ ಅವರ ಮನೆಯ ತೋಟದ ಕೆಲಸದ ಕೇರಳ ರಾಜ್ಯದ ನಿವಾಸಿಗಳು ವಾಸವಾಗಿದ್ದ ಪ್ರತ್ಯೇಕ ಶೆಡ್ ಮೇಲೆ ಗುಡ್ಡ ಕುಸಿತ ಉಂಟಾಗಿ ಈ ದಾರುಣ ಘಟನೆ ಸಂಭವಿಸಿತ್ತು. ಕೇರಳ ರಾಜ್ಯದ ಪಾಲಕ್ಕಾಡ್ ನಿವಾಸಿ ಬಿಜು (45), ಕೊಟ್ಟಾಯಂ ನಿವಾಸಿ ಬಾಬು (46) ಹಾಗೂ ಅಲಪ್ಪುಝ ನಿವಾಸಿ ಸಂತೋಷ್ (46) ಅವರು ಸಾವನ್ನಪ್ಪಿದ್ದು, ಕಣ್ಣೂರು ನಿವಾಸಿ ಜಾನಿ (44) ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಂಗಳವಾರವೇ ಇಲ್ಲಿನ ಮನೆ ಸಮೀಪದ ಗುಡ್ಡ ಕುಸಿತ ಆರಂಭವಾಗಿದ್ದು, ಅನಾಹುತದಿಂದಾಗಿ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅಡಿಕೆ ಒಣಗಿಸುವ ಸೋಲಾರ್ ಗೂಡು ಸಂಪೂರ್ಣ ಮಣ್ಣಿನಡಿ ಸಿಲುಕಿ ಮುಚ್ಚಿ ಹೋಗಿತ್ತು. ದನದ ಕೊಟ್ಟಿಗೆಗೆ ಹಾಕಲಾದ ಸಿಮೆಂಟ್ ಸೀಟುಗಳು ಮುರಿದುಬಿದ್ದಿದ್ದವು. ಈ ಬಗ್ಗೆ ಹೆನ್ರಿ ಕಾರ್ಲೊ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬುಧವಾರ ಮತ್ತೆ ಮನೆ ಸಮೀಪದಲ್ಲಿ ಕಾರ್ಮಿಕರು ವಾಸ್ತವ್ಯವಿದ್ದ ಶೆಡ್ ಮೇಲೆ ಗುಡ್ಡ ಕುಸಿದು ಬಿದ್ದು ಗಂಭೀರ ಅನಾಹುತ ಸಂಭವಿಸಿದೆ. ದುರಂತ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರಾದರೂ ಅದಾಗಲೇ ಮಣ್ಣಿನಡಿ ಸಿಲುಕಿದ್ದ ಪಾಲಕ್ಕಾಡ್ ನಿವಾಸಿ ಬಿಜು ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ಉಳಿದವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಬಾಬು ಹಾಗೂ ಸಂತೋಷ್ ಮೃತಪಟ್ಟಿದ್ದಾರೆ. ಜಾನಿ ಗಂಭೀರ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಿಂದ ಸುಮಾರು 50 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದ್ದು, ಮೂರು ಮಂದಿಯ ಪ್ರಾಣ ಹಾನಿಯೂ ಉಂಟಾಗಿದೆ. ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಅಲ್ಲದೆ ಮಾನವೀಯ ದೃಷ್ಟಿಯನ್ನೂ ಗಮನದಲ್ಲಿಟ್ಟುಕೊಂಡು ಸ್ಥಳೀಯ ಶಾಸಕರು ವಿಶೇಷ ಶಿಫಾರಸ್ಸು ಮಾಡಿ ಸರಕಾರದಿಂದ ಗರಿಷ್ಠ ಮಟ್ಟದ ಪರಿಹಾರ ಒದಗಿಸುವಂತೆ ಮನೆ ಮಂದಿ ಆಗ್ರಹಿಸಿದ್ದಾರೆ.
ದುರಂತ ಸಂಭವಿಸುವ ಸಂದರ್ಭ ಬೆಂಗಳೂರಿನಲ್ಲಿದ್ದ ಸ್ಥಳೀಯ ಶಾಸಕ ಯು ರಾಜೇಶ್ ನಾಯಕ್ ಅವರು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ, ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ಬಂಟ್ವಾಳ ತಹಶೀಲ್ದಾರ್ ಡಾ ಸ್ಮಿತಾ ರಾಮು ಸಹಿತ ಕಂದಾಯ ಅಧಿಕಾರಿಗಳು, ಪೆÇಲೀಸ್ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿದ್ದು ಸ್ಥಳೀಯರ ಸಹಕಾರದೊಂದಿಗೆ ಜೆಸಿಬಿ ಬಳಸಿ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ್ದರು.
0 comments:
Post a Comment