ಬಂಟ್ವಾಳ, ಜುಲೈ 07, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದ ಗುಡ್ಡ ಕುಸಿತ ದುರಂತದಲ್ಲಿ ಶೆಡ್ ಒಳಗಿದ್ದ ಕಾರ್ಮಿಕರು ಮೃತಪಟ್ಟಿದ್ದು, ಇದಕ್ಕೆ ಮನೆ ಮಾಲಕಿ ಬೆನಡಿಕ್ಟ್ ಕಾರ್ಲೊ ಅವರ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯ ಗ್ರಾಮ ಕರಣಿಕ ಕುಮಾರ್ ಟಿ ಸಿ ಅವರು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.
ಜು 5 ರಂದು ಸಂಜೆ 5.45 ಗಂಟೆಗೆ ಪಂಜಿಕಲ್ಲು ಗ್ರಾಮದ ಮುಕುಡ ನಿವಾಸಿ ಬೆನಡಿಕ್ಟ ಕಾರ್ಲೋ ಅವರು ಕರೆ ಮಾಡಿ ಗುಡ್ಡ ಕುಸಿತದ ಬಗ್ಗೆ ತಿಳಿಸಿದಂತೆ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಯಂಗಳದ ಬದಿಯಲ್ಲಿರುವ ಸುಮಾರು 50-60 ಅಡಿ ಎತ್ತರದ ಧರೆ ಮಳೆಯಿಂದ ಕುಸಿತಗೊಂಡು ಅಂಗಳಕ್ಕೆ ಮಣ್ಣು ಜಾರಿರುವ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಗುಡ್ಡ ಇನ್ನೂ ಕುಸಿಯುತ್ತಲೇ ಇರುವುದರಿಂದ ಹಳೆ ಮನೆಯಲ್ಲಿ ವಾಸವಾಗಿರುವ ರಬ್ಬರ್ ಟ್ಯಾಪಿಂಗ್ ಕಾರ್ಮಿಕರನ್ನು ತೆರವುಗೊಳಿಸುವಂತೆ ಮೌಖಿಕ ಸೂಚನೆಂ ನೀಡಿರುತ್ತೇನೆ.
ಜುಲೈ 6 ರಂದು ಕೂಡಾ ಸಂಜೆ 5 ಗಂಟೆಗೆ ಮತ್ತೆ ಮನೆ ಮಾಲಿಕೆಗೆ ಕರೆ ಮಾಡಿ ವಿಪರೀತ ಮಳೆ ಇರುವುದರಿಂದ ಜಾಗ್ರತೆ ವಹಿಸಿ ಕಾರ್ಮಿಕರನ್ನು ತೆರವುಗೊಳಿಸಿ ಎಂದು ತಿಳಿಸಿದ್ದರೂ ಅವರು ಮುಂಜಾಗ್ರತೆ ವಹಿಸಿರಲಿಲ್ಲ. ಸಂಜೆ ಸುಮಾರು 6.45 ರ ವೇಳೆಗೆ ಮನೆ ಸಮೀಪದ ಗುಡ್ಡ ಕುಸಿದು ಹಳೆಯ ಹಂಚಿನ ಮನೆಯಲ್ಲಿ ವಾಸವಿದ್ದ 5 ಜನ ಕಾರ್ಮಿಕರು ಕಟ್ಟಡದ ಒಳಗೆ ಸಿಲುಕಿಕೊಳ್ಳುವಂತಾಗಿದೆ. ಕೂಡಲೇ ಸ್ಥಳಕ್ಕೆ ಪೆÇಲೀಸರು, ಅಗ್ನಿಶಾಮಕ ದಳ, ರಾಷ್ರೀಯ ವಿಪತ್ತು ನಿರ್ವಾಹಣಾ ದಳ, ರಾಜ್ಯ ವಿಪತ್ತು ನಿರ್ವಾಹಣಾ ದಳ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸ್ಥಳೀಯರು ಸೇರಿ ಕಟ್ಟಡದ ಒಳಗೆ ಸಿಲುಕಿಗೊಂಡ ಕಾರ್ಮಿಕರನ್ನು ಜೆಸಿಬಿ, ಹಿಟಾಚಿ ಯಂತ್ರಗಳನ್ನು ಬಳಸಿ ತೆರವು ಕಾರ್ಯಾಚರಣೆ ನಡೆಸಿ, ಸಂಜೆ ಸುಮಾರು 7.30 ಗಂಟೆಯಿಂದ ರಾತ್ರಿ 11.30 ಗಂಟೆಯ ತನಕ ಸರ್ಚ್ ಲೈಟ್, ಮನೆಯ ವಿದ್ಯುತ್ ಲೈಟ್ ಹಾಗೂ ವಿಪತ್ತು ನಿರ್ವಹಣಾ ದಳದವರಲ್ಲಿದ್ದ ಬೆಳಕಿನ ವ್ಯವಸ್ಥೆಯಿಂದ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದು ಆ ಸಂದರ್ಭ ಜೀವಂತವಿದ್ದ 3 ಜನರನ್ನು ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಓರ್ವ ಸ್ಥಳದಲ್ಲೇ ಮೃತ ಪಟ್ಟಿದ್ದು, ಆತನ ಮೃತ ದೇಹವನ್ನೂ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಘಟನೆಯಿಂದ ಒಂದು ಮಾರುತಿ 800 ಕಾರು, ಒಂದು ಬೈಕು ಮಣ್ಣು ಕುಸಿದ ರಭಸಕ್ಕೆ ಹಳೆಯ ಮನೆಯ ಗೋಡೆಗೆ ತಾಗಿ ಗೋಡೆ ಸಮೇತ ಜಖಂಗೊಂಡಿರುತ್ತದೆ. ಸುಮಾರು 3 ಲಕ್ಷ ರೂಪಾಯಿ 3,00,000/- ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರ ಪೈಕಿ ಮತ್ತೆ ಇಬ್ಬರು ಮೃತಪಟ್ಟು ಮೃತರ ಸಂಖ್ಯೆ 3ಕ್ಕೇರಿದೆ.
ಜುಲೈ 5 ರಂದೇ ಹಳೆ ಮನೆ ಕಟ್ಟಡದಲ್ಲಿ ವಾಸವಿದ್ದ ಕಾರ್ಮಿಕರನ್ನು ತೆರವುಗೊಳಿಸುವಂತೆ ಹಾಗೂ ಜಾಗರೂಕರಾಗಿರುವಂತೆ ಸೂಚನೆಗಳನ್ನು ನೀಡಿದ್ದರೂ ಮನೆ ಮಾಲಕಿ ಬೆನಡಿಕ್ಟ ಕಾರ್ಲೋ ಯಾವುದೇ ಮುಂಜಾಗ್ರತೆ ಕ್ರಮ ವಹಿಸದೆ ಬೇಜವಾಬ್ದಾರಿ ಮತ್ತು ನಿರ್ಲಕ್ಷ ತೋರಿದ್ದರಿಂದ ದುರಂತ ಸಂಭವಿಸಿ 3 ಜನರ ಸಾವಿಗೆ ಕಾರಣರಾಗಿರುತ್ತಾರೆ ಎಂದು ಗ್ರಾಮ ಕರಣಿಕ ಕುಮಾರ್ ಟಿ ಸಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 49-2022 ಕಲಂ 337, 304 (ಎ) ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment