ಬಂಟ್ವಾಳ, ಆಗಸ್ಟ್ 15, 2022 (ಕರಾವಳಿ ಟೈಮ್ಸ್) : ವಿದ್ಯಾರ್ಥಿ ಸಮುದಾಯ ಈ ದೇಶದ ಭವಿಷ್ಯದ ದಿಕ್ಸೂಚಿಗಳಾಗಿದ್ದು, ಇದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಂಡು ಉತ್ತಮ ಭವಿಷ್ಯವನ್ನ ರೂಪಿಸಿಕೊಂಡು ಈ ದೇಶದ ಅಭಿವೃದ್ದಿ, ಸೌಹಾರ್ದತೆ, ಸಾರ್ವಭೌಮತೆಗೆ ಗರಿಷ್ಠ ಮಟ್ಟದಲ್ಲಿ ಸೇವೆ ಸಲ್ಲಿಸಬೇಕು ಎಂದು ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಕರೆ ನೀಡಿದರು.
ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆಯಲ್ಲಿರುವ ಶ್ರೀ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಸೋಮವಾರ ನಡೆದ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಸರಕಾರಗಳು ವಿದ್ಯಾರ್ಥಿನಿಯರಿಗೆ ಸಾಕಷ್ಟು ಉಚಿತ ಹಾಗೂ ರಿಯಾಯಿತಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಇವುಗಳ ಪ್ರಯೋಜನ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ಸಮಾಜಕ್ಕೂ ಅದರ ಋಣ ಸಂದಾಯ ಮಾಡಬೇಕು ಎಂದು ಸಲಹೆ ನೀಡಿದರು.
ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಶ್ರೀಮತಿ ಬಿಂದಿಯಾ ನಾಯಕ ಮಾತನಾಡಿ, ಸಮಾಜಕ್ಕಾಗಿ, ದೇಶಕ್ಕಾಗಿ ಉತ್ತಮ ಕಾರ್ಯಗಳು ರೂಪುಗೊಳ್ಳುವಾಗ ವಿದ್ಯಾರ್ಥಿಗಳು ಅದರಲ್ಲಿ ಕೈಜೋಡಿಸಬೇಕು. ಜಾತಿ-ಧರ್ಮ-ಮತ, ಭಾಷೆಗಳ ಬೇಧ ಭಾವ ನೋಡದೆ ಉತ್ತಮ ಕೆಲಸಗಳಲ್ಲಿ ಭಾಗಿಯಾಗಬೇಕು. ಅದೇ ರೀತಿ ಸಮಾಜ ಬಾಹಿರ ಕೃತ್ಯಗಳು, ಸಮಾಜಕ್ಕೆ ಅಹಿತಕರವೆನಿಸುವ ಕಾರ್ಯಗಳನ್ನು ಕಂಡರೆ ಅಲ್ಲಿಯೂ ಜಾತಿ-ಧರ್ಮಗಳ ಬೇಧ ನೋಡದೆ ಹಿಂದೆ ಸರಿದು ನಿಲ್ಲಬೇಕು ಎಂದು ಹಿತವಚನಗೈದರು.
ಈ ಸಂದರ್ಭ ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು, ಸ್ಥಳೀಯರಾದ ಅಹ್ಮದ್ ಬಾವಾ ಯು, ಅಬ್ದುಲ್ ಮಜೀದ್ ಬೋಗೋಡಿ, ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆಯಲ್ಲಿರುವ ಶ್ರೀ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ನಿಲಯದ ವಿದ್ಯಾರ್ಥಿನಿಯರು ರಾಷ್ಟ್ರ ಗೀತೆ ಹಾಗೂ ಧ್ವಜ ವಂದನಾ ಗೀತೆ ಹಾಡಿದರು. ಬಳಿಕ ಸಿಹಿ ತಿಂಡಿ ವಿತರಿಸಲಾಯಿತು.
0 comments:
Post a Comment