ಬಂಟ್ವಾಳ ತಾಲೂಕಾಡಳಿತ ಸೌಧದ ನೀರಿನ ಫಿಲ್ಟರ್ ಸೋರಿಕೆ : ವಾರ ಕಳೆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಜಾರಿ ಬೀಳುತ್ತಿರುವ ಸಾರ್ವಜನಿಕರು - Karavali Times ಬಂಟ್ವಾಳ ತಾಲೂಕಾಡಳಿತ ಸೌಧದ ನೀರಿನ ಫಿಲ್ಟರ್ ಸೋರಿಕೆ : ವಾರ ಕಳೆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಜಾರಿ ಬೀಳುತ್ತಿರುವ ಸಾರ್ವಜನಿಕರು - Karavali Times

728x90

16 September 2022

ಬಂಟ್ವಾಳ ತಾಲೂಕಾಡಳಿತ ಸೌಧದ ನೀರಿನ ಫಿಲ್ಟರ್ ಸೋರಿಕೆ : ವಾರ ಕಳೆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಜಾರಿ ಬೀಳುತ್ತಿರುವ ಸಾರ್ವಜನಿಕರು

ಬಂಟ್ವಾಳ, ಸೆಪ್ಟೆಂಬರ್ 15, 2022 (ಕರಾವಳಿ ಟೈಮ್ಸ್) : ತಾಲೂಕಿನ ಮಿನಿ ವಿಧಾನಸೌಧದ ಕುಡಿಯುವ ನೀರಿನ ಫಿಲ್ಟರ್ ನೀರು ಸೋರಿಕೆಯಾಗಲು ಪ್ರಾರಂಭವಾಗಿ ವಾರ ಕಳೆದರೂ ಸ್ವಚ್ಛಗೊಳಿಸುವವರೂ ಇಲ್ಲ, ರಿಪೇರಿ ಮಾಡುವವರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕಚೇರಿಗೆ ನಿತ್ಯ ಭೇಟಿ ನೀಡುವ ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾ ಹಿಡಿಶಾಪ ಹಾಕುತ್ತಿದ್ದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. 

ಮಿನಿ ವಿಧಾನಸೌಧದ ನೆಲ ಮಹಡಿಯ ಮಧ್ಯಭಾಗದಲ್ಲಿ ಸಾರ್ವಜನಿಕರ ಅನುಕೂಲತೆಗಾಗಿ ಕುಡಿಯುವ ನೀರಿನ ಫಿಲ್ಟರ್ ಅಳವಡಿಸಲಾಗಿದೆ. ತಣ್ಣೀರು, ಬಿಸಿ ನೀರು ಎಲ್ಲ ರೀತಿಯ ಕುಡಿಯುವ ನೀರಿನ ವ್ಯವಸ್ಥೆ ಇದರಲ್ಲಿದ್ದು ಸಾರ್ವಜನಿಕರ ಬಾಯಾರಿಕೆಗೆ ಅನುಕೂಲವಾಗುತ್ತಿದೆ. ಈ ನೀರಿನ ಫಿಲ್ಟರ್ ಸೋರಿಕೆಯಾಗಿ ನೀರು ಕಚೇರಿಯ ಒಳಗಡೆ ಹರಿದು ಕೆಸರುಮಯಗೊಳ್ಳಲು ಆರಂಭವಾಗಿ ವಾರ ಕಳೆಯುತ್ತಾ ಬಂದಿದೆ. ಇದರಿಂದ ಸೋರಿಕೆಯಾಗುವ ನೀರಿನಿಂದಾಗಿ ಮಿನಿ ವಿಧಾನಸೌಧದ ನೆಲ ಸಂಪೂರ್ಣವಾಗಿ ಕೆಸರುಮಯವಾಗುತ್ತಿದ್ದು, ಜನ ಅದನ್ನೇ ತುಳಿದುಕೊಂಡು ಸಂಚಾರ ನಡೆಸುವ ದುಸ್ಥಿತಿ ಇದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸಹಿತ ಜನಪ್ರತಿನಿಧಿಗಳೂ ನಿತ್ಯ ಇದನ್ನೇ ತುಳಿದಕೊಂಡು ಸಂಚರಿಸುತ್ತಾ ಇರುತ್ತಿದ್ದರೂ ಇದುವರೆಗೆ ಇದಕ್ಕೆ ಕಾಯಕಲ್ಪ ಒದಗಿಸುವ ಮನಸ್ಸು ಮಾಡಿಲ್ಲ. ಕನಿಷ್ಠ ಸೋರಿಕೆಯಾಗುವ ನೀರನ್ನು ಸ್ವಚ್ಛಗೊಳಿಸುವ ಕಾರ್ಯವನ್ನೂ ಮಾಡುತ್ತಿಲ್ಲ. ಫಿಲ್ಟರ್ ರಿಪೇರಿ ಮಾಡುವ ಬಗ್ಗೆ ಯಾವುದೇ ಸೂಚನೆಯೂ ಕಂಡು ಬರುತ್ತಿಲ್ಲ. ಇಲ್ಲಿನ ಫಿಲ್ಟರ್ ನೀರು ಸೋರಿಕೆ ಪರಿಣಾಮ ಕಚೇರಿಗೆ ಬರುವ ಸಾರ್ವಜನಿಕರು ನೀರಿನ ತೇವದಿಂದ ಜಾರಿ ಬೀಳುತ್ತಿರುವ ದೃಶ್ಯಗಳೂ ನಿತ್ಯ ಕಂಡು ಬರುತ್ತಿದೆ. 

ತಾಲೂಕಿನ ಆಡಳಿತ ಸೌಧವೇ ಸ್ವಚ್ಛ ಭಾರತ ಪರಿಕಲ್ಪನೆಗೆ ಸವಾಲಾಗಿದ್ದು ಕಂಡು ಬರುತ್ತಿದ್ದು, ಜನ ಸರಕಾರಿ ಕಚೇರಿಯಲ್ಲೇ ಸ್ವಚ್ಛತೆ ಇಲ್ಲದ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಇಲ್ಲಿನ ತಾಲೂಕು ಕಚೇರಿಯಲ್ಲಿ ನಿತ್ಯ ಒಂದಿಲ್ಲೊಂದು ಸಮಸ್ಯೆ ತಾಂಡವವಾಡುತ್ತಲೇ ಇರುತ್ತಿದ್ದು, ಒಮ್ಮೆ ಲಿಫ್ಟ್ ಕೈಕೊಟ್ಟರೆ, ಇನ್ನೊಮ್ಮೆ ಜನರೇಟರ್ ಕೈಕೊಡುತ್ತಿದೆ, ಮತ್ತೊಮ್ಮೆ ಶೌಚಾಲಯ ಸಮಸ್ಯೆ ತಲೆದೋರುತ್ತದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದರೂ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಯಾವುದೇ ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ತಾಲೂಕಾಡಳಿತ ಸೌಧದ ನೀರಿನ ಫಿಲ್ಟರ್ ಸೋರಿಕೆ : ವಾರ ಕಳೆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಜಾರಿ ಬೀಳುತ್ತಿರುವ ಸಾರ್ವಜನಿಕರು Rating: 5 Reviewed By: karavali Times
Scroll to Top