ಭಾರತ್ ಜೋಡೋ ಟೀಕಿಸುವ ಬದಲು ಧಂ ಇದ್ದರೆ ವಿಶ್ವಗುರು ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಿ : ಲಕ್ಷ್ಮಣ್ ಸವಾಲು - Karavali Times ಭಾರತ್ ಜೋಡೋ ಟೀಕಿಸುವ ಬದಲು ಧಂ ಇದ್ದರೆ ವಿಶ್ವಗುರು ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಿ : ಲಕ್ಷ್ಮಣ್ ಸವಾಲು - Karavali Times

728x90

7 October 2022

ಭಾರತ್ ಜೋಡೋ ಟೀಕಿಸುವ ಬದಲು ಧಂ ಇದ್ದರೆ ವಿಶ್ವಗುರು ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಿ : ಲಕ್ಷ್ಮಣ್ ಸವಾಲು

ಪರೇಶ್ ಮೇಸ್ತ ಸಾವಿನ ಸಂದರ್ಭ ಬೀದಿ ರಂಪಾಟ ಮಾಡಿದ್ದ ಶೋಭಾ, ಸುನಿಲ್ ರಾಜೀನಾಮೆ ನೀಡಬೇಕು

ಎಸ್.ಡಿ.ಪಿ.ಐ ಸಾಕುತ್ತಿರುವುದೇ ಬಿಜೆಪಿ, ಆರೆಸ್ಸೆಸ್, ಧರಂ ಸಿಂಗ್ ಕಾಲದಲ್ಲಿ ಅನುಮತಿ ನೀಡದ ಪಿ.ಎಫ್.ಐ ಗೆ ಯಡ್ಡಿ-ಕುಮ್ಮಿ ಸರಕಾರ ಅನುಮತಿ ನೀಡಿದೆ
ಮೈಸೂರು, ಅಕ್ಟೋಬರ್ 08, 2022 (ಕರಾವಳಿ ಟೈಮ್ಸ್) : ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯನ್ನು ಟೀಕಿಸುವ ಬಿಜೆಪಿಗರು ಧಮ್ ಇದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿಶ್ವಗುರು ಎನ್ನುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ ತೋರಿಸಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸವಾಲೆಸೆದಿದ್ದಾರೆ. 

ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 630 ಕಿ.ಮೀ ಪಾದಯಾತ್ರೆ ನಡೆಸಿರುವುದನ್ನೇ ಸಹಿಸದ ಬಿಜೆಪಿ ನಾಯಕರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಗುಜರಾತ್‍ನಲ್ಲಿ ಜನರು ಕಾದು ನಿಂತಿದ್ದರೂ ಅವರ್ಯಾರಿಗೂ ಮುಖಕೊಡದೆ ಕಾರನ್ನೇರಿ ಪ್ರಯಾಣ ಬೆಳೆಸಿದ್ದ ವಿಶ್ವಗುರು, ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಪಾದಯಾತ್ರೆ ಮಾಡಿಸಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧಮ್ ಇದ್ರೆ ಒಂದತ್ತು ಕಿ.ಮೀ ಪಾದಯಾತ್ರೆ ಮಾಡಲಿ ನೋಡೋಣ ಎಂದವರು ಸವಾಲು ಹಾಕಿದರು.

ಪಾದಯಾತ್ರೆಯನ್ನು ಬಿಜೆಪಿಗರು ರಾಜಕೀಯ ಲಾಭಕ್ಕೆ, ಚುನಾವಣೆ ಗಿಮಿಕ್ ಎನ್ನುತ್ತಿದ್ದಾರೆ. ಆದರೆ ಕೇರಳ, ತಮಿಳುನಾಡಿನಲ್ಲಿ ಚುನಾವಣೆ ನಡೆಯುತ್ತಿಲ್ಲ. ಗುಜರಾತ್‍ನಲ್ಲಿ ಈಗ ಚುನಾವಣೆ ನಡೆಯುವ ವರ್ಷವಾದ್ದರಿಂದ ಅಲ್ಲಿ ಮಾತ್ರವೇ ಮಾಡಬಹುದಿತ್ತು ಎಂದು ಪಾದಯಾತ್ರೆ ಜನರ ಹಿತಕ್ಕಾಗಿ ಎಂದು ಸಮರ್ಥಿಸಿಕೊಂಡರು.

ಪರೇಸ್ ಮೆಸ್ತಾ ಹತ್ಯ ಪ್ರಕರಣ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಸರಕಾರದ ವಿರುದ್ಧ ಅಪಪ್ರಚಾರ ಮಾಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಸಚಿವ ಸುನಿಲ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಪ್ರಕರಣ ಮುಂದಿಟ್ಟುಕೊಂಡು ಕೋಮುದ್ವೇಷ ಹರಡಿದ್ದಲ್ಲದೆ ಚುನಾವಣಾ ಲಾಭ ಪಡೆದಿದ್ದ ಇವರು ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಜನರ ಮುಂದೆ ಬರಬೇಕು ಎಂದು ಸವಾಲೆಸೆದರು. 

ಪರೇಸ್ ಮೆಸ್ತಾ ಸಹಜ ಸಾವನ್ನು ಕೊಲೆಯೆಂದು ಬಿಂಬಿಸಿ 150 ಕೋಟಿ ಆಸ್ತಿಪಾಸ್ತಿ ಹಾನಿಗೀಡಾಗಲು ಕಾರಣರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಸುನಿಲ್ ಕುಮಾರ್, ಅರವಿಂದ ಲಿಂಬಾವಳಿ, ಸಿ.ಟಿ. ರವಿ ಅವರುಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ 23 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಬಿಜೆಪಿ ಆರೋಪಿಸಿದರೆ ಒಂದೇ ಒಂದು ಪ್ರಕರಣದಲ್ಲೂ ಸತ್ಯಾಂಶ ಸಾಬೀತಾಗಿಲ್ಲ ಎಂದು ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು. 

ಅಲ್ಪಸಂಖ್ಯಾತ ಮತಗಳು ಬಿಜೆಪಿ ಬಿಟ್ಟು ಚದುರದಂತೆ ನೋಡಿಕೊಳ್ಳಲು ಎಸ್‍ಡಿಪಿಐಗೆ ಬಿಜೆಪಿ ಆರ್ಥಿಕ ನೆರವು ನೀಡುತ್ತಿದೆ ಎಂದು ಇದೇ ವೇಳೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು. 

ಎಸ್‍ಡಿಪಿಐ ಬಿಜೆಪಿ ಬೆನ್ನಿಗೆ ನಿಂತಿದೆ. ಆದ್ದರಿಂದಲೇ ಬಿಜೆಪಿ ಮತ್ತು ಆರ್‍ಎಸ್‍ಎಸ್ ಹಣಕಾಸಿನ ನೆರವು ನೀಡುತ್ತಿದೆ. ಒಂದು ವೇಳೆ ಇಲ್ಲ ಎಂದಾದರೆ ಪಿಎಫ್‍ಐ ನಿಷೇಧಿಸಿದಂತೆ ಎಸ್‍ಡಿಪಿಐಯನ್ನೂ ಕೂಡ ನಿಷೇಧಿಸಲಿ ನೋಡೋಣ ಎಂದವರು ಸವಾಲು ಹಾಕಿದರು.

ಧರ್ಮಸಿಂಗ್ ಅವರು ಮುಖ್ಯಮಂತ್ರಿ ಆಗಿದ್ದಾಗ ಪಿಎಫ್‍ಐಗೆ ಅನುಮತಿ ನೀಡಿರಲಿಲ್ಲ. ಆದರೆ, ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರಕಾರವು ಅನುಮತಿ ನೀಡಿತ್ತು. ಅಂದು ರಹಮತುಲ್ಲಾ ಅಸ್ರತ್ ಆಗಿದ್ದ ಆರ್. ಅಶೋಕ್ ಈಗ ಪಿಎಫ್‍ಐ ಭಾಗ್ಯ ಸಿದ್ದರಾಮಯ್ಯ ಅಂತ ಹೇಳಿತ್ತಿರುವುದು ನಾಚಿಕೆಗೇಡು ಎಂದು ಅವರು ಟೀಕಿಸಿದರು.

ಪಿಎಫ್‍ಐ ಪರವಾಗಿ ಸುಪ್ರೀಂಕೋರ್ಚ್‍ನಲ್ಲಿ ವಾದಿಸುತ್ತಿರುವ ವಕೀಲರು ಬಿಜೆಪಿಗೆ ಸೇರಿದವರು. ಕಾಂಗ್ರೆಸ್ ಪರವಾಗಿ ಮುಸ್ಲಿಮರು ನಿಲ್ಲಬಾರದು ಎಂದು ಎಸ್‍ಡಿಪಿಐ ಬೆಳೆಯಲು ಕಾರಣರಾಗಿದ್ದಾರೆ. ಈಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವಂತೆ ಮಾಡಿ, ಮುಂದೆ ಅವರನ್ನೇ ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿರುವುದಾಗಿ ಅವರು ಹೇಳಿದರು.

ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿಗೂ ಛಾಟಿ ಬೀಸಿದ ಲಕ್ಷ್ಮಣ, ಭಾರತ್ ಜೋಡೋ ಯಾತ್ರೆಯಿಂದ ಪ್ರಯೋಜನವಿಲ್ಲ. ಮಂಡ್ಯ ಬದಲಾವಣೆ ಆಗಲಿದೆಯೇ ಎಂದಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮೈ ಮೇಲೆ ಚೇಳು ಬಿಟ್ಟುಕೊಂಡಂತೆ ಮಾತನಾಡಿದ್ದಾರೆ. ಅವರಂತೆ ಮಂಡ್ಯವನ್ನು ನಾವು ಬರೆಸಿಕೊಂಡಿಲ್ಲ. ಒಕ್ಕಲಿಗರು ನಿಮ್ಮ ಜೇಬಿನಲ್ಲಿದ್ದರೆ ನಿಮ್ಮ ಪುತ್ರ ಚುನಾವಣೆಯಲ್ಲಿ ಸೋಲುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿ ಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಈಶ್ವರ್ ಚಕ್ಕಡಿ ಮತ್ತಿತರರು ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಭಾರತ್ ಜೋಡೋ ಟೀಕಿಸುವ ಬದಲು ಧಂ ಇದ್ದರೆ ವಿಶ್ವಗುರು ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಿ : ಲಕ್ಷ್ಮಣ್ ಸವಾಲು Rating: 5 Reviewed By: karavali Times
Scroll to Top