ಮಂಗಳೂರು, ಅಕ್ಟೋಬರ್ 01, 2022 (ಕರಾವಳಿ ಟೈಮ್ಸ್) : ತಾಲೂಕಿನ ಕಾವೂರು ನಿವಾಸಿಯೊಬ್ಬರು ತಮ್ಮ ಜಾಗ ಮಾರಾಟ ಮಾಡಲು ಎನ್ ಒ ಸಿ ಪಡೆಯುವ ಬಗ್ಗೆ ಮಂಗಳೂರು ತಾಲೂಕು ಕಚೇರಿ ಪ್ರಥಮ ದರ್ಜೆ ಸಹಾಯಕ ಶಿವಾನಂದ ನಾಟೆಕಾರ್ ಅವರು ತಹಶೀಲ್ದಾರರ ಪರವಾಗಿ ಲಂಚಕ್ಕೆ ಬೇಡಿಕೆ ಇಟ್ಟು ಶುಕ್ರವಾರ 4,700/- ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದು, ಈ ಹಿನ್ನಲೆಯಲ್ಲಿ ಶಿವಾನಂದ ನಾಟೆಕಾರ್ ಲಂಚದ ಹಣಕ್ಕೆ ಬೇಡಿಕೆ ಇರಿಸಿದ ಆರೋಪದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ ಸಹಿತ ಇಬ್ಬರನ್ನು ಬಂಧಿಸಿರುವ ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ ಹಿನ್ನಲೆಯಲ್ಲಿ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಮಂಗಳೂರು ಸಮೀಪದ ಕಾವೂರು ನಿವಾಸಿಯೊಬ್ಬರು ಜಾಗ ಮಾರಾಟಕ್ಕೆ ಸಂಬಂಧಿಸಿ ಎನ್ ಒ ಸಿ ನೀಡಲು 3 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಮಂಗಳೂರು ತಾಲೂಕು ಕಚೇರಿ ಪ್ರಥಮ ದರ್ಜೆ ಸಹಾಯಕ ಅಧಿಕಾರಿ ಶಿವಾನಂದ ನಾಟೆಕಾರ್ ಅವರು ತನಗೆ ಹಾಗೂ ತಹಶೀಲ್ದಾರ್ ಪರವಾಗಿ 5,700/- ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇರಿಸಿದ್ದಾರೆ. ಈ ಬಗ್ಗೆ ದೂರು ಪಡೆದ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ (ಸೆ 30) ಲಂಚದ ಹಣದ ಪೈಕಿ 4,700/- ರೂಪಾಯಿ ಪಡೆಯುತ್ತಿದ್ದ ವೇಳೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡು ಲಂಚದ ಹಣ ಸಹಿತ ಪ್ರಥಮ ದರ್ಜೆ ಸಹಾಯಕ ಅಧಿಕಾರಿ, ಮೂಲತಃ ವಿಜಯಪುರ ಜಿಲ್ಲೆಯ ಗುಣಕಿ ಗ್ರಾಮ ಮತ್ತು ಅಂಚೆ ವ್ಯಾಪ್ತಿಯ ನಿವಾಸಿ, ಪ್ರಸ್ತುತ ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ವಿಘ್ನೇಶ್ವರ ರೆಸಿಡೆನ್ಸಿ, ಫ್ಲ್ಯಾಟ್ ನಂಬ್ರ ಬಿ, ಮನೆ ನಂಬ್ರ 101/2 ರಲ್ಲಿ ವಾಸ್ತವ್ಯ ಇರುವ ಶಿವಾನಂದ ನಾಟೆಕಾರ್ ಹಾಗೂ ಮಂಗಳೂರು ಯುನಿಟಿ ಆಸ್ಪತ್ರೆಯ ಎದುರುಗಡೆಯ ಮದರ್ ಥೆರೆಸಾ ರಸ್ತೆಯ ಐಲ್ಯಾಂಡ್ ಸಿಕಾನ್ ರೆಸಿಡೆನ್ಸಿಯ ಫ್ಲ್ಯಾಟ್ ನಂಬ್ರ 104, ಮನೆ ನಂಬ್ರ 17/21, 1489/4 ರಲ್ಲಿ ವಾಸ್ತವ್ಯ ಇರುವ ತಹಶೀಲ್ದಾರ್ ಪುರಂದರ ಹೆಗ್ಡೆ ಅವರನ್ನು ಬಂಧಿಸಿದ್ದಾರೆ.
0 comments:
Post a Comment