ನವದೆಹಲಿ, ಅಕ್ಟೋಬರ್ 19, 2022 (ಕರಾವಳಿ ಟೈಮ್ಸ್) : ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ (ಎಐಸಿಸಿ) ನೂತನ ಅಧ್ಯಕ್ಷರಾಗಿ ಕರುನಾಡ ಹಿರಿಯ ರಾಜಕಾರಣಿ, ಪಕ್ಷ ನಿಷ್ಠ ವ್ಯಕ್ತಿತ್ವದ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ನಿರಾಯಾಸವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಹುದ್ದೆಗೆ ಶಶಿ ತರೂರು ನಾಮಪತ್ರ ಸಲ್ಲಿಕೆಯಿಂದ ಚುನಾವಣೆ ನಡೆದಿತ್ತಾದರೂ ಅದಾಗಲೇ ಬಹುತೇಕ ಕಾಂಗ್ರೆಸ್ಸಿಗರ ಒಲವು ಗಳಿಸಿಕೊಂಡಿದ್ದ ಖರ್ಗೆ ಅಧ್ಯಕ್ಷರಾಗುವುದು ಖಚಿತವಾಗಿತ್ತು. ಆದರೆ ಚುನಾವಣೆ ನಡೆದುದರಿಂದ ಮತ ಎಣಿಕೆ ಪ್ರಕ್ರಿಯೆವರೆಗೂ ಕಾಯುವುದು ಅನಿವಾರ್ಯವಾಗಿತ್ತು. ಬುಧವಾರ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಚಲಾವಣೆಯಾದ ಒಟ್ಟು 9.385 ಮತಗಳಲ್ಲಿ ಮಲ್ಲಿಕಾರ್ಜುನ ಖರ್ಗೆ 7,897 ಮತಗಳನ್ನು ಪಡೆದು ಅರ್ಹವಾಗಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಸಂಸದ ಶಶಿ ತರೂರ್ ಪರವಾಗಿ ಕೇವಲ 1,072 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ. ಸುಮಾರು 400ಕ್ಕೂ ಹೆಚ್ಚು ಮತಗಳು ಅಸಿಂಧುಗೊಂಡಿದೆ.
ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು, 24 ವರ್ಷಗಳ ಬಳಿಕ ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಖರ್ಗೆ ಅವರನ್ನು ಪರಾಜಿತ ಅಭ್ಯರ್ಥಿ ಶಶಿ ತರೂರ್ ಅಭಿನಂದಿಸಿದ್ದಾರೆ. ಪಕ್ಷದ ಪುನರುಜ್ಜೀವನ ಆರಂಭವಾಗಿದೆ ಎಂದು ನಾನು ನಂಬುತ್ತೇನೆ ಎಂದು ಹೇಳಿಕೆಯಲ್ಲಿ ಶಶಿ ತರೂರ್ ಹೇಳಿದ್ದಾರೆ. ಮತದಾನದ ದಿನವೂ ಶಶಿ ತರೂರ್ ಈ ಮಾತನ್ನೇ ಹೇಳಿದ್ದರು.
2017 ಮತ್ತು 2019 ರ ನಡುವಿನ ಎರಡು ವರ್ಷಗಳನ್ನು ಹೊರತುಪಡಿಸಿ ರಾಹುಲ್ ಗಾಂಧಿಯವರು ಅಧಿಕಾರ ವಹಿಸಿಕೊಂಡ ನಂತರ 1998 ರಿಂದ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿಯವರ ಸ್ಥಾನವನ್ನು ಖರ್ಗೆ ಇನ್ನು ಅಲಂಕರಿಸಲಿದ್ದಾರೆ.
ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಿಸ್ತ್ರಿ ಪಕ್ಷದ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ಇದು “ಮುಕ್ತ, ನ್ಯಾಯಯುತ ಮತ್ತು ಪಾರದರ್ಶಕ” ಎಂದು ಹೇಳಿದ್ದರು. ಇದು ರಹಸ್ಯ ಮತದಾನವಾಗಿದ್ದು, ಯಾರು ಯಾರಿಗೆ ಮತ ಹಾಕಿದರು ಎಂಬುದು ಯಾರಿಗೂ ತಿಳಿಯುವುದಿಲ್ಲ ಎಂದು ಹೇಳಿದ್ದರು.
ಗುಪ್ತ ಮತದಾನದಲ್ಲಿ ಪಕ್ಷದ ಮುಖ್ಯಸ್ಥರನ್ನು ಆಯ್ಕೆ ಮಾಡಲು ಎಲೆಕ್ಟೊರಲ್ ಕಾಲೇಜು ರಚಿಸಿದ ಒಟ್ಟು 9,915 ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಪ್ರತಿನಿಧಿಗಳಲ್ಲಿ 9,500ಕ್ಕೂ ಹೆಚ್ಚು ಜನರು ಪಿಸಿಸಿ ಕಚೇರಿಗಳು ಮತ್ತು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮತ ಚಲಾಯಿಸಿದ್ದಾರೆ. ಚುನಾವಣೆಗೂ ಮುನ್ನ, ಖರ್ಗೆ ಅವರು ಪಕ್ಷದ ಅಧ್ಯಕ್ಷರಾದರೆ, ಪಕ್ಷದ ವ್ಯವಹಾರಗಳನ್ನು ನಡೆಸುವಲ್ಲಿ ಗಾಂಧಿ ಕುಟುಂಬದ ಸಲಹೆ ಮತ್ತು ಬೆಂಬಲವನ್ನು ಪಡೆಯುತ್ತೇನೆ ಎಂದು ಹೇಳಿಕೆ ನೀಡಿದ್ದರು.
ಕರ್ನಾಟಕ ರಾಜ್ಯದ ಹಿರಿಯ ಕಾಂಗ್ರೆಸಿಗ ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವಿಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಬೆಂಬಲಿಗರು ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.
ಎಐಸಿಸಿಗೆ 6ನೇ ಬಾರಿಗೆ ಚುನಾವಣೆ
137 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ, ಸ್ವಾತಂತ್ರ್ಯ ನಂತರ ಅಧ್ಯಕ್ಷರ ಆಯ್ಕೆಗೆ 6ನೇ ಬಾರಿ ಚುನಾವಣೆಯ ಮೂಲಕ ಅಧ್ಯಕ್ಷರ ಆಯ್ಕೆಯನ್ನು ಮಾಡಿಕೊಂಡಿದೆ. 1939, 1950, 1977, 1997, 2000 ಮತ್ತು 2022 ರ ಈ ಅವಧಿಗಳಲ್ಲಿ ಚುನಾವಣೆ ನಡೆಸಲಾಗಿದೆ. ಉಳಿದಂತೆ ಬಹುತೇಕ ಸಂದರ್ಭ ಗಾಂಧಿ ಕುಟುಂಬದ ವ್ಯಕ್ತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 2000 ನೇ ಇಸವಿಯಲ್ಲಿ ನಡೆದಿದ್ದ ಅಧ್ಯಕ್ಷರ ಚುನಾವಣೆಯಲ್ಲಿ ಸೋನಿಯಾ ಗಾಂಧಿ, ಎದುರಾಳಿ ಅಭ್ಯರ್ಥಿ ಜಿತೇಂದ್ರ ಪ್ರಸಾದ್ ವಿರುದ್ಧ ಭಾರಿ ಅಂತರದಿಂದ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
0 comments:
Post a Comment