ಬಂಟ್ವಾಳ, ಅಕ್ಟೋಬರ್ 14, 2022 (ಕರಾವಳಿ ಟೈಮ್ಸ್) : ಗ್ರಾಮ ಪಂಚಾಯತ್ ಪ್ರತಿನಿಧಿಗಳ ಹಕ್ಕು ಮೊಟಕುಗೊಳಿಸಿ, ವಿಕೇಂದ್ರೀಕರಣ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಅಧಿಕಾರಿ ಕೇಂದ್ರೀಕರಣಕ್ಕೆ ರಾಜ್ಯ ಸರಕಾರ ಕೈ ಹಾಕಿದ್ದು, ಇದನ್ನು ಖಂಡಿಸಿ ಗ್ರಾ ಪಂ ಅಧ್ಯಕ್ಷರು-ಸದಸ್ಯರುಗಳ ಹಕ್ಕುಗಳನ್ನು ಮೊಟಕುಗೊಳಿಸುವ ತಿದ್ದುಪಡಿಯನ್ನು ತಕ್ಷಣದಿಂದ ವಾಪಾಸು ಪಡೆಯಬೇಕು ಎಂದು ಆಗ್ರಹಿಸಿ ಅ 18 ರಂದು ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ ಕಾಂಗ್ರೆಸ್ ವತಿಯಿಂದ ಬಿ ಸಿ ರೋಡಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು ತಿಳಿಸಿದರು.
ಶುಕ್ರವಾರ ಸಂಜೆ ಬಿ ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾ ಪಂ ಅಧ್ಯಕ್ಷರು ಆರ್ಥಿಕ ವ್ಯವಹಾರಗಳ ಚೆಕ್ಕಿಗೆ ಸಹಿ ಹಾಕುವ ಅಧಿಕಾರ ಹಾಗೂ ಸದಸ್ಯರುಗಳಿಗೆ ಸಾಮಾನ್ಯ ಸಭೆಯಲ್ಲಿ ಕಟ್ಟಡ, ವ್ಯಾಪಾರ, ಕೈಗಾರಿಕೆ, 9-11 ಮೊದಲಾದ ಪರವಾನಿಗೆ ನೀಡುವ ಅಧಿಕಾರ ಮೊಟಕುಗೊಳಿಸಿ ಪಿಡಿಒಗೆ ಮಾತ್ರ ಅಧಿಕಾರ ನೀಡಲಾಗಿದೆ.
15ನೇ ಹಣಕಾಸು ಯೋಜನೆಯಲ್ಲಿ ವಾರ್ಷಿಕ ಶೇ 30 ರಷ್ಟು ಹೆಚ್ಚಿಸಿ ನೀಡಬೇಕಾದ ನಿಯಮ ಕಡೆಗಣಿಸಿ 25% ಅನುದಾನ ಕಡಿತಗೊಳಿಸಿ ಇದಕ್ಕೆ ನಿರ್ಬಂಧಗಳನ್ನು ವಿಧಿಸುವ ಮೂಲಕ ಗ್ರಾ ಪಂ ಆಡಳಿತದ ಅಧಿಕಾರವನ್ನು ಹಾಗೂ ಸ್ವಾತಂತ್ರ್ಯಕ್ಕೆ ಕತ್ತರಿ ಹಾಕಲಾಗಿದೆ. ಗ್ರಾಮ ಪಂಚಾಯತಿಗಳ ಕಟ್ಟಡಗಳಿಗೆ ಸೋಲಾರ್ ಅಳವಡಿಸಲು 5 ಲಕ್ಷ ರೂಪಾಯಿ ಅನುದಾನವನ್ನು ಪಂಚಾಯತ್ ಅನುದಾನದಿಂದ ನೀಡಬೇಕೆಂದು ಆದೇಶಿಸಿ ಇದಕ್ಕೆ ಟೆಂಡರ್ ಕರೆಯುವ ಅವಕಾಶ ಪಂಚಾಯತಿಗೆ ಇದ್ದರೂ ರಾಜ್ಯ ಮಟ್ಟದಲ್ಲಿ ಗುತ್ತಿಗೆ ನೀಡಿ ಪಂಚಾಯತಿಗೆ ನೀಡಲು ಆದೇಶಿಸಲಾಗಿದೆ.
ಗ್ರಾ ಪಂ ಸಿಬ್ಬಂದಿ ನೇಮಕ ಅಧಿಕಾರವನ್ನು ಸ್ಥಳೀಯಾಡಳಿತದಿಂದ ವಾಪಾಸು ಪಡೆದು ಜಿಲ್ಲಾ ಪಂಚಾಯಿತಿಗೆ ವರ್ಗಾಯಿಸಲಾಗಿದೆ. 2019-20ನೇ ಸಾಲಿನಲ್ಲಿ ಗಾಂಧಿ ಪುರಸ್ಕಾರಕ್ಕೆ ಆಯ್ಕೆಯಾದ ಪಂಚಾಯತಿಗಳಿಗೆ ಕೋವಿಡ್ ನೆಪವೊಡ್ಡಿ ಪುರಸ್ಕಾರ ಮತ್ತು 5 ಲಕ್ಷ ರೂಪಾಯಿ ಅನುದಾನ ನೀಡದೆ ಅಗೌರವ ಮಾಡಲಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ 4 ವರ್ಷಗಳಲ್ಲಿ ಒಂದೇ ಒಂದು ಮನೆಗೂ ಅನುದಾನ ನೀಡಿರುವುದಿಲ್ಲ. ಗ್ರಾ ಪಂ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರುಗಳ ಅನರ್ಹಗೊಳಿಸುವ ಅಧಿಕಾರ ಚುನಾವಣಾ ಆಯೋಗದಿಂದ ಹಿಂಪಡೆದು ಸರಕಾರಕ್ಕೆ ಅಂದರೆ ಅಧಿಕಾರಿಗಳಿಗೆ ಅವಕಾಶ ನೀಡಲಾಗುತ್ತಿದೆ.
ಕಳೆದ 2 ವರ್ಷಗಳಿಂದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ತಾ ಪಂ, ಜಿ ಪಂ ಗಳಿಗೆ ಚುನಾವಣೆ ನಡೆಸದೆ ಪ್ರಜಾತಂತ್ರ ವ್ಯವಸ್ಥೆಗೆ ಅಪಚಾರ ಎಸಗಲಾಗಿದೆ. ಇದರ ಅನುದಾನವನ್ನು ಅಧಿಕಾರಿಗಳು ಯಾವುದೇ ಗ್ರಾಮ ಸಭೆ ಅಥವಾ ಪಂಚಾಯತಿಗಳ ಶಿಫಾರಸ್ಸಿಗೆ ಅವಕಾಶ ನೀಡದೆ ಕ್ರಿಯಾ ಯೋಜನೆ ಮಾಡಿರುವುದು ಕಾನೂನು ಬಾಹಿರ ಕ್ರಮವಾಗಿದೆ.
ಸ್ಥಳೀಯಾಡಳಿತದ ಅಧಿಕಾರವನ್ನು ಮೊಟಕುಗೊಳಿಸಿ ಜನರ ಕೈಗೆ ಸಿಗುವ ಸ್ಥಳೀಯ ಸರಕಾರದ ಅಧಿಕಾರಕ್ಕೆ ಕತ್ತರಿ ಹಾಕುವ ಸರಕಾರದ ಈ ಎಲ್ಲಾ ತಿದ್ದುಪಡಿ ನಿಯಮಗಳ ವಿರುದ್ದ ಈ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದವರು ವಿವರಿಸಿದರು.
ಸ್ಥಳೀಯಾಡಳಿತಗಳ ಅಧಿಕಾರ ಮೊಟಕುಗೊಳಿಸಿ ಅಧಿಕಾರಿಗಳಿಗೆ ಪೂರ್ಣ ಅಧಿಕಾರ ನೀಡಿ ಸರಕಾರ ಪರ್ಸೆಂಟೇಜ್ ಪಡೆಯುವ ಹುನ್ನಾರದಲ್ಲಿ ತೊಡಗಿಸಿಕೊಂಡಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ ಎಂದವರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ತಾ ಪಂ ಮಾಜಿ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಮುಖರಾದ ಜಗದೀಶ್ ಕೊಯಿಲ, ಸಂದೇಶ್ ಶೆಟ್ಟಿ ಮೊದಲಾದವರು ಜೊತೆಗಿದ್ದರು.
0 comments:
Post a Comment