ಮಂಗಳೂರು, ನವೆಂಬರ್ 02, 2022 (ಕರಾವಳಿ ಟೈಮ್ಸ್) : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಮಡಿಕೇರಿಯ ಪಿ.ಎಫ್.ಐ ಕಾರ್ಯಕರ್ತ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಕಾರ್ಯಕರ್ತರ ಸುಳಿವು ನೀಡಿದವರಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಒಟ್ಟು 14 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿ ಪ್ರಕಟಣೆ ಹೊರಡಿಸಿದೆ.
ಮಡಿಕೇರಿ ಮೂಲದ ತುಫೈಲ್ ಎಂ ಎಚ್ ಪ್ರಮುಖ ವ್ಯಕ್ತಿಯಾಗಿದ್ದು ಈತನ ಮಾಹಿತಿ ನೀಡಿದರೆ ಹಾಗೂ ಸುಳ್ಯದ ಬೆಳ್ಳಾರೆ ಗ್ರಾಮದ ಮೊಹಮ್ಮದ್ ಮುಸ್ತಫಾ ಎಸ್ ಎಂಬಾತನ ಪತ್ತೆಗೆ ತಲಾ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದು, ಇನ್ನಿಬ್ಬರು ಆರೋಪಿಗಳಾದ ಸುಳ್ಯದ ಉಮರ್ ಫಾರೂಕ್ ಎಂ ಆರ್ ಮತ್ತು ಅಬ್ಬುಬಕ್ಕರ್ ಸಿದ್ದೀಕ್ ಅವರ ಪತ್ತೆಗೆ ತಲಾ ಎರಡು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಎಲ್ಲಾ ನಾಲ್ವರು ಆರೋಪಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸದಸ್ಯರಾಗಿದ್ದಾರೆ ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ 31 ವರ್ಷದ ಪ್ರವೀಣ್ ಕುಮಾರ್ ನೆಟ್ಟಾರು ಅವರನ್ನು ಜುಲೈ 26 ರಂದು ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಮಾರಕಾಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಪ್ರವೀಣ್ ನೆಟ್ಟಾರು ಹತ್ಯೆಯಿಂದ ದಕ್ಷಿಣ ಕನ್ನಡ ಸಹಿತ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತನಿಖೆಯಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ. ಕಾರ್ಯಕರ್ತರ ಹಿತ ಕಾಯಲು ಬಿಜೆಪಿ ನಾಯಕರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಹಲವಾರು ಬಿಜೆಪಿ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಘಟನೆಯ ಬಳಿಕ ಸರಕಾರ ಹಾಗೂ ಬಿಜೆಪಿ ನಾಯಕರು ತೀವ್ರ ಇರಿಸು ಮುರಿಸು ಅನುಭವಿಸಿದ್ದರು. ಇದರಿಂದ ಎಚ್ಚೆತ್ತ ಸರಕಾರ ಘಟನೆಯನ್ನು ಎನ್.ಐ.ಎ. ತನಿಖೆಗೆ ಒಪ್ಪಿಸಿತ್ತು. ತನಿಖೆ ಆರಂಭಿಸಿದ್ದ ಎನ್‍ಐಎ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಸುಳ್ಯದ 32 ಕಡೆಗಳಲ್ಲಿ ದಾಳಿ ನಡೆಸಿತ್ತು. ಕೇರಳದ 7 ಕಡೆ ಆಶ್ರಯ ಪಡೆದ ಹಂತಕರು ಸೇರಿದಂತೆ 10ಕ್ಕೂ ಹೆಚ್ಚು ಮಂದಿಯನ್ನು ಎನ್‍ಐಎ ಬಂಧಿಸಿತ್ತು. ಇದೀಗ ಕೊಲೆ ಮಾಡಿರುವ ಪ್ರಮುಖ ಆರೋಪಿಗಳ ಪತ್ತೆಗಾಗಿ ಎನ್.ಐ.ಎ. ಬಲೆ ಬೀಸಿದ್ದು, ಆರೋಪಿಗಳ ಪತ್ತೆಗೆ ಮಾಹಿತಿ ನೀಡಿದವರೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.
0 comments:
Post a Comment