ಮಂಗಳೂರು, ನವೆಂಬರ್ 02, 2022 (ಕರಾವಳಿ ಟೈಮ್ಸ್) : ಸ್ಪೀಡ್ ಪೋಸ್ಟ್ ಮೂಲಕ ವೋಟರ್ ಐಡಿ (ಎಪಿಕ್ ಕಾರ್ಡ್) ಕಾರ್ಡ್‍ಗಳನ್ನು ಮತದಾರರಿಗೆ ತಲುಪಿಸಲು ಅಂಚೆ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆಯನ್ನು ಆರಂಭಿಸಿದೆ.
ಪಾಸ್ ಪೋರ್ಟ್, ಆಧಾರ್, ಪಾನ್ ಕಾರ್ಡ್, ಎಟಿಎಂ ಕಾರ್ಡ್, ಚೆಕ್ ಪುಸ್ತಕಗಳು, ಘಟಿಕೋತ್ಸವ ಪ್ರಮಾಣ ಪತ್ರಗಳು, ಕಾಲೇಜು ಮಾರ್ಕ್ಸ್ ಕಾರ್ಡ್ ಗಳು ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳ ಪ್ರಮುಖ ಮತ್ತು ಗೌಪ್ಯ ದಾಖಲೆಗಳನ್ನು ಸ್ಪೀಡ್ ಪೋಸ್ಟ್ ಸೇವೆಯ ಮೂಲಕ ಭಾರತೀಯ ಅಂಚೆ ಇಲಾಖೆಯು ಮನೆ ಬಾಗಿಲಿಗೆ ತಲುಪಿಸುತ್ತಿದ್ದು, ಈಗ ಭಾರತೀಯ ಅಂಚೆ ಇಲಾಖೆಯು ಮತದಾರರ ಗುರುತಿನ ಚೀಟಿಯನ್ನು (ಎಪಿಕ್ ಕಾರ್ಡ್) ಸ್ಪೀಡ್ ಪೋಸ್ಟ್ ಮೂಲಕ ಮತದಾರರ ಮನೆಬಾಗಿಲಿಗೆ ತಲುಪಿಸಲು ಮುಂದಾಗಿದೆ.
ಮತದಾರರ ಗುರುತಿನ ಚೀಟಿಯನ್ನು ಸ್ಪೀಡ್ ಪೋಸ್ಟ್ ಮೂಲಕ ಮನೆಬಾಗಿಲಿಗೆ ಬಟವಾಡೆಮಾಡಲು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್, ಕರ್ನಾಟಕ ವೃತ್ತ ಅವರು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಮೂಲಕ ರಾಜ್ಯದಾದ್ಯಂತ ಅಸಂಖ್ಯಾತ ಜನರು ಈ ಸೇವೆಯ ಲಾಭವನ್ನು ಪಡೆಯಲಿದ್ದಾರೆ. ಇದರ ಅಂಗವಾಗಿ, ದಕ್ಷಿಣ ಕನ್ನಡದ ನಾಗರಿಕರು ನವೆಂಬರ್, 2022 ರಿಂದ ಎಪಿಕ್ (ಚುನಾವಣಾ ಪೋಟೋ ಗುರುತಿನ ಚೀಟಿ/ ಮತದಾರರ ಗುರುತಿನ ಚೀಟಿ/ ವೋಟರ್ ಐಡಿ) ಅನ್ನು ತಮ್ಮ ಮನೆ ಬಾಗಿಲಿನಲ್ಲಿ ಪಡೆಯಬಹುದು.
ಈ ಹಿಂದೆ, ಮತದಾರರ ಗುರುತಿನ ಚೀಟಿಯನ್ನು ಜನರೆಟ್ ಆದ ನಂತರ, ಜಿಲ್ಲಾಧಿಕಾರಿ ಕಛೇರಿಗೆ ತಲುಪಿಸಿ, ಅಲ್ಲಿಂದ ತಾಲೂಕು ಕಛೇರಿಗೆ ರವಾನೆಯಾಗಿ ತದನಂತರ ಈ ಕಾರ್ಡ್‍ಗಳನ್ನು ಅರ್ಜಿದಾರರಿಗೆ ವಿತರಿಸಲು ಸಂಬಂಧಿಸಿದ ಗ್ರಾಮ ಮಟ್ಟದ ಗ್ರಾಮ ಕರಣಿಕರ ಕಚೇರಿಗೆ ಹಸ್ತಾಂತರಿಸಲಾಗುತ್ತಿತ್ತು. ಇದಕ್ಕಾಗಿ ಅರ್ಜಿದಾರರು ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಮತದಾರರ ಗುರುತಿನ ಚೀಟಿಯನ್ನು ಪಡೆಯಬೇಕಾಗಿತ್ತು. ಈ ಪ್ರಕ್ರಿಯೆಯಿಂದಾಗಿ ಮತದಾರರು ವೋಟರ್ ಐಡಿ ಕಾರ್ಡ್‍ಗಳನ್ನು ಪಡೆಯಲು ವಿಳಂಬವಾಗುತ್ತಿತ್ತು. ಆದರೆ ಇದೀಗ ಸಾರ್ವಜನಿಕರು ಮತದಾರರ ಗುರುತಿನ ಚೀಟಿಯನ್ನು ಪಡೆಯಲು ಸಂಬಂಧಪಟ್ಟ ಬೂತ್ ಅಧಿಕಾರಿಯನ್ನು ಸಂಪರ್ಕಿಸುವ ಅಗತ್ಯವಿಲ್ಲ. ಈ ಕಾರ್ಡ್ ಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಮನೆಬಾಗಿಲಿಗೆ ವಿತರಿಸಲಾಗುವುದು. ಅಕ್ಟೋಬರ್ 31 ರಂದು ಮಂಗಳೂರು ಪ್ರಧಾನ ಅಂಚೆ ಕಛೇರಿಯಲ್ಲಿ ಮೊದಲ ಹಂತದಲ್ಲಿ 746 ಮತದಾರರ ಗುರುತಿನ ಚೀಟಿಯನ್ನು ಸ್ಪೀಡ್ ಪೋಸ್ಟ್ ಸೇವೆಯ ಮೂಲಕ ವಿಳಾಸದಾರರಿಗೆ ರವಾನಿಸುವುದರೊಂದಿಗೆ ಈ ಸೇವೆಯನ್ನು ಆರಂಭಿಸಲಾಗಿದೆ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment