ಬೆಳ್ತಂಗಡಿ, ನವೆಂಬರ್ 22, 2022 (ಕರಾವಳಿ ಟೈಮ್ಸ್) : ತಾಲೂಕಿನ ಪುದುವೆಟ್ಟು ಗ್ರಾಮದ ಕೇರಿಮಾರು ಎಂಬಲ್ಲಿ ಕಾಡಿನ ವಿಷಪೂರಿತ ಅಣಬೆಯನ್ನು ಪದಾರ್ಥ ಮಾಡಿ ತಿಂದ ಪರಿಣಾಮ ತಂದೆ-ಮಗ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಸ್ಥಳೀಯ ನಿವಾಸಿ ಗುರುವ ಮೇರ (80) ಹಾಗೂ ಅವರ ಪುತ್ರ ಓಡಿಯಪ್ಪ (41) ಎಂಬವರೇ ಮೃತ ದುರ್ದೈವಿಗಳು.
ಈ ಬಗ್ಗೆ ಗುರುವ ಮೇರ ಅವರ ಇನ್ನೋರ್ವ ಪುತ್ರ ಕರ್ತ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸೋಮವಾರ (ನ 21) ಅಪರಾಹ್ನ 3 ಗಂಟೆ ವೇಳೆಗೆ ಮನೆಯಲ್ಲಿದ್ದ ಕರ್ತ ಅವರು ಪುದುವೆಟ್ಟು ಪೇಟೆಗೆಂದು ಹೊರಟಿದ್ದು, ಈ ವೇಳೆ ಸಹೋದರ ಓಡಿಯಪ್ಪ ಕಾಡಿನಿಂದ ಅಣಬೆಯನ್ನು ತಂದು ಪದಾರ್ಥಕ್ಕೆಂದು ಶುಚಿ ಮಾಡುತ್ತಿದ್ದು, ತಂದೆ ಮನೆಯಲ್ಲಿಯೇ ಮಲಗಿಕೊಂಡಿದ್ದರು. ಬಳಿಕ ಕರ್ತ ಪುದುವೆಟ್ಟು ಪೇಟೆಗೆಂದು ಹೋದವರು ತನ್ನ ಸಂಬಂಧಿಕರ ಮನೆಯಲ್ಲಿ ಉಳಕೊಂಡು ಮಂಗಳವಾರ (ನ 22) ಬೆಳಿಗ್ಗೆ ಸುಮಾರು 6.30ರವೇಳೆಗೆ ಮನೆಗೆ ಬಂದಾಗ ತಂದೆ ಗುರುವ ಮತ್ತು ತಮ್ಮ ಓಡಿಯಪ್ಪ ಅಂಗಳದಲ್ಲಿ ಬಿದ್ದುಕೊಂಡಿದ್ದರು. ಅವರಿಬ್ಬರನ್ನು ಆರೈಕೆ ಮಾಡಿ ನೋಡಿದಾಗ ಅವರಿಬ್ಬರೂ ಮೇಲೆ ಏಳದೇ ಇದ್ದಾಗ ಸಂಬಂಧಿಕರಿಗೆ ಹಾಗೂ ನೆರೆಕರೆಯವರಿಗೆ ವಿಷಯ ತಿಳಿಸಿ ಅವರೆಲ್ಲ ಬಂದು ನೋಡಿದಾಗ ತಂದೆ-ಮಗ ಇಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ.
ಮನೆಯ ಒಳಗೆ ಹೋಗಿ ನೋಡಿದಾಗ ಮೃತರಿಬ್ಬರೂ ವಿಷಕಾರಿ ಅಣಬೆಯನ್ನು ಪದಾರ್ಥ ಮಾಡಿ ತಿಂದು ಮೃತಪಟ್ಟಂತೆ ಕಂಡು ಬಂದಿದೆ. ಇದರಿಂದಲೇ ತಂದೆ-ಮಗನ ಸಾವು ಸಂಭವಿಸಿದೆ ಎಂದು ಕರ್ತ ಅವರು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment