ಬಂಟ್ವಾಳ, ಡಿಸೆಂಬರ್ 23, 2022 (ಕರಾವಳಿ ಟೈಮ್ಸ್) : ಅಮಲು ಪದಾರ್ಥ ಸೇವಿಸಿದ್ದಲ್ಲದೆ ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸಿದ ಆರೋಪದ ಮೇರೆಗೆ ಬಂಟ್ವಾಳ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಗುರುವಾರ ಸಂಜೆ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಬಿ ಕಸ್ಬಾ ಗ್ರಾಮದ ಬಾರೆಕಾಡು ನಿವಾಸಿ ಅಬೂಬಕ್ಕರ್ ಅವರ ಪುತ್ರ ಇರ್ಷಾದ್ (23) ಹಾಗೂ ಕೇರಳ ರಾಜ್ಯದ, ಕಾಸರಗೋಡು ಜಿಲ್ಲೆಯ, ಮಂಜೇಶ್ವರ ತಾಲೂಕಿನ ಉದ್ಯಾವರ ಗುತ್ತು ಮನೆ ನಿವಾಸಿ ರಮೇಶ್ ಅಲಿಯಾಸ್ ರವಿಕುಮಾರ್ ಎಂಬವರ ಪುತ್ರ ದಿಕ್ಷಿತ್ ಅಲಿಯಾಸ್ ಅಪ್ಪೂಸ್ (19) ಎಂದು ಹೆಸರಿಸಲಾಗಿದೆ.
ಬಂಟ್ವಾಳ ನಗರ ಠಾಣಾ ಪಿಎಸ್ಸೈ ಅವಿನಾಶ್ ಗೌಡ ಅವರು ಸಿಬ್ಬಂದಿಗಳೊಂದಿಗೆ ಗುರುವಾರ ಗೂಡಿನಬಳಿ ರಸ್ತೆಯ ಗಣೇಶ ಬೀಡಿ ದಾಸ್ತಾನು ಮಳಿಗೆ ಬಳಿ ವಾಹನ ತಪಾಸಣೆ ನಡೆಸುವ ಸಂದರ್ಭ ಕೆಎ 19 ಎಬಿ 7505 ನೋಂದಣಿ ಸಂಖ್ಯೆಯ ಆಟೋ ರಿಕ್ಷಾವನ್ನು ನಿಲ್ಲಿಸಿ ತನಿಖೆ ಮಾಡಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಲಾದ 75 ಸಾವಿರ ರೂಪಾಯಿ ಮೌಲ್ಯದ ಅಟೋ ರಿಕ್ಷಾ ಸಹಿತ ಸುಮಾರು 20 ಸಾವಿರ ರೂಪಾಯಿ ಮೌಲ್ಯದ 9 ಗ್ರಾಂ ತೂಕದ ಅಮಲು ಪದಾರ್ಥವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 118/2022 ಕಲಂ 8(ಸಿ), 22(ಬಿ), 27(ಎ) ಎನ್ ಡಿ ಪಿ ಎಸ್ ಕಾಯ್ದೆ1985 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment