ಬೆಂಗಳೂರು, ಡಿಸೆಂಬರ್ 23, 2022 (ಕರಾವಳಿ ಟೈಮ್ಸ್) : ಚೀನಾ ದೇಶದಲ್ಲಿ ಕೊರೋನಾ ಆರ್ಭಟ ಸುದ್ದಿ ಹರಡುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಕಟ್ಟೆಚ್ಚರ ಘೋಷಿಸಿದ ಬೆನ್ನಲ್ಲೇ ರಾಜ್ಯ ಸರಕಾರ ಕೂಡಾ ಕೋವಿಡ್ ಮಾರ್ಗಸೂಚಿಗಳನ್ನು ಪ್ರಕಟಿಸಿ ನಿಯಂತ್ರಣಾ ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಹೊಸದಾಗಿ ಕೋವಿಡ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪಬ್, ಬಾರ್, ರೆಸ್ಟೋರೆಂಟ್, ಸಿನಿಮಾ ಹಾಲ್‍ಗಳು, ಶಾಪಿಂಗ್ ಮಾಲ್, ಕಚೇರಿಗಳು ಸೇರಿದಂತೆ ಬಸ್, ರೈಲು, ಮೆಟ್ರೋ, ವಿಮಾನ ಪ್ರಯಾಣದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಅರ್ಹರೆಲ್ಲರೂ ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ಶೀಘ್ರವಾಗಿ ಪಡೆದುಕೊಳ್ಳಬೇಕು. ಉಸಿರಾಟದ ಸಮಸ್ಯೆ ಹಾಗೂ ಕೋವಿಡ್-19 ಸೋಂಕಿನ ಲಕ್ಷಣಗಳನ್ನು ಹೊಂದಿರುವವರು, ಸ್ವಯಂ ಪ್ರತ್ಯೇಕವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಒಳಾಂಗಣ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದ್ದು, ದೈಹಿಕ ಅಂತರವನ್ನು ಪಾಲಿಸುವುದು ಅಗತ್ಯವಾಗಿದೆ. ಹೆಚ್ಚಿನ ಜನರು ಗುಂಪುಗೂಡುವಿಕೆಯನ್ನು, ವಿಶೇಷವಾಗಿ ಒಳಾಂಗಣಗಳಲ್ಲಿ ಗುಂಪುಗೂಡುವಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂದು ಮಾರ್ಗಸೂಚಿ ಹೇಳಿದೆ.
ಐಎಲ್ ಐ/ಸಾರಿ ಪ್ರಕರಣಗಳಿಗೆ ಕೊವಿಡ್ ಟೆಸ್ಟ್ ಮಾಡಿಸುವುದು ಕಡ್ಡಾಯ. ಸೋಂಕಿನ ಲಕ್ಷಣ ಹೊಂದಿರುವವರು, ಖಚಿತ ಪ್ರಕರಣಗಳ ಸಂಪರ್ಕಿತರು ಮುಂದಿನ ದಿನಗಳಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡುವುದು ಕಡ್ಡಾಯ ಮಾಡಲಾಗಿದೆ.
0 comments:
Post a Comment