ಕತಾರಿನಲ್ಲಿ ಅಪಘಾತ : ಸಜಿಪ-ಕಂಚಿನಡ್ಕಪದವು ನಿವಾಸಿ 24 ವರ್ಷದ ಯುವಕ ಫಹದ್ ದಾರುಣ ಮೃತ್ಯು - Karavali Times ಕತಾರಿನಲ್ಲಿ ಅಪಘಾತ : ಸಜಿಪ-ಕಂಚಿನಡ್ಕಪದವು ನಿವಾಸಿ 24 ವರ್ಷದ ಯುವಕ ಫಹದ್ ದಾರುಣ ಮೃತ್ಯು - Karavali Times

728x90

7 December 2022

ಕತಾರಿನಲ್ಲಿ ಅಪಘಾತ : ಸಜಿಪ-ಕಂಚಿನಡ್ಕಪದವು ನಿವಾಸಿ 24 ವರ್ಷದ ಯುವಕ ಫಹದ್ ದಾರುಣ ಮೃತ್ಯು

ಬಂಟ್ವಾಳ, ಡಿಸೆಂಬರ್ 07, 2022 (ಕರಾವಳಿ ಟೈಮ್ಸ್) :  ಕತಾರ್ ದೇಶದಲ್ಲಿ ಉದ್ಯೋಗ ನಿಮಿತ್ತ ತೆರಳಿದ್ದ ಸಜಿಪ ಸಮೀಪದ ಕಂಚಿನಡ್ಕಪದವು-ಚಟ್ಟೆಕ್ಕಲ್ ನಿವಾಸಿ ಅಬ್ದುಲ್ ರಹಿಮಾನ್-ಹಲೀಮಮ್ಮ ದಂಪತಿಯ ಹಿರಿಪುತ್ರ, ಅವಿವಾಹಿತ ಯುವಕ ಫಹದ್ (24) ಮಂಗಳವಾರ (ಡಿ 6) ರಾತ್ರಿ ನಡೆದ ಕಾರು ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಫಹದ್ ತನ್ನ ಕಾರಿನಲ್ಲಿ ಮಾಲಕ ಪುತ್ರನನ್ನು ರೆಸಾರ್ಟ್‍ಗೆ ಬಿಟ್ಟು ವಾಪಾಸು ಬರುತ್ತಿದ್ದ ವೇಳೆ ರಸ್ತೆಯಲ್ಲಿ ಕಾರು ಉರುಳಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಫಹದ್ ಕಳೆದ ಐದು ತಿಂಗಳ ಹಿಂದೆಯಷ್ಟೆ ಡ್ರೈವರ್ ವೀಸಾದಲ್ಲಿ ಕತಾರಿಗೆ ತೆರಳಿದ್ದ. 

ಈ ಹಿಂದೆ ಒಂದು ವರ್ಷ ಸೌದಿ ಅರೇಬಿಯಾದಲ್ಲಿ ಡ್ರೈವರ್ ಆಗಿ ಕೆಲಸ ನಿರ್ವಹಿಸಿದ್ದ ಫಹದ್ ಕೊರೋನಾ ಕಾರಣದಿಂದ ಊರಿಗೆ ಬಂದು ಒಂದು ವರ್ಷ ಕಾಲ ಊರಿನಲ್ಲೇ ಚಾಲಕ ವೃತ್ತಿ ಮಾಡುತ್ತಿದ್ದ. ಬಳಿಕ ಕಳೆದ ಐದು ತಿಂಗಳ ಹಿಂದೆ ಕತಾರಿಗೆ ತೆರಳಿದ್ದ. ಮಂಗಳವಾರ ರಾತ್ರಿ ಅಪಘಾತ ನಡೆಯುವ ಸ್ವಲ್ಪ ಮುಂಚೆಯಷ್ಟೆ ದೂರವಾಣಿ ಕರೆ ಮಾಡಿ ಮನೆ ಮಂದಿ ಜೊತೆ ಮಾತನಾಡಿ ಸುಖ-ದುಃಖ ಹಂಚಿಕೊಂಡಿದ್ದ. ಆ ಬಳಿಕ ಅಪಘಾತದ ಸುದ್ದಿ ಕೇಳಿ ಮನೆ ಮಂದಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಅಬ್ದುಲ್ ರಹಿಮಾನ್ ಅವರ ಇಬ್ಬರು ಪುತ್ರರ ಪೈಕಿ ಫಹದ್ ಹಿರಿಯವನಾಗಿದ್ದು, ಕಿರಿಯ ಪುತ್ರ ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಫಹದ್ ಅವರ ತಾಯಿ ಹಲೀಮಮ್ಮ ಮೂಲತಃ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ನಿವಾಸಿಯಾಗಿದ್ದರೆ, ತಂದೆ ಅಬ್ದುಲ್ ರಹಿಮಾನ್ ಮೂಲತಃ ಸಜಿಪ ನಿವಾಸಿಯಾಗಿದ್ದು, ಪ್ರಸ್ತುತ ಕಂಚಿನಡ್ಕಪದವಿನ ಚಟ್ಟೆಕ್ಕಲ್ಲಿನಲ್ಲಿ ವಾಸ್ತವ್ಯ ಹೊಂದಿರುತ್ತಾರೆ. 

ಮೃತ ಫಹದ್ ಮೃತದೇಹವನ್ನು ಊರಿಗೆ ತರುವ ನಿಟ್ಟಿನಲ್ಲಿ ಎಲ್ಲಾ ಕೆಲಸ-ಕಾರ್ಯಗಳು ನಡೆಯುತ್ತಿದ್ದು, ಇಂದು ರಾತ್ರಿ ಅಥವಾ ಗುರುವಾರ ಊರಿಗೆ ತಲುಪುವ ನಿರೀಕ್ಷೆ ಇದೆ. ಬಳಿಕ ಸಜಿಪ ಕೇಂದ್ರ ಜುಮಾ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯ ಕ್ರಿಯೆ ನಡೆಸಲಾಗುವುದು ಎಂದು ಕುಟುಂಬಿಕರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕತಾರಿನಲ್ಲಿ ಅಪಘಾತ : ಸಜಿಪ-ಕಂಚಿನಡ್ಕಪದವು ನಿವಾಸಿ 24 ವರ್ಷದ ಯುವಕ ಫಹದ್ ದಾರುಣ ಮೃತ್ಯು Rating: 5 Reviewed By: karavali Times
Scroll to Top