ಮಂಗಳೂರು, ಡಿಸೆಂಬರ್ 27, 2022 (ಕರಾವಳಿ ಟೈಮ್ಸ್) : ಜಲೀಲ್ ಕೃಷ್ಣಾಪುರ ಅವರನ್ನು ಸುರತ್ಕಲ್ಲಿನ ತನ್ನ ಫ್ಯಾನ್ಸಿ ಅಂಗಡಿಯಲ್ಲೇ ಶನಿವಾರ ಸಂಜೆ ವೇಳೆ ಇರಿದು ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಸುರತ್ಕಲ್ ಸಮೀಪದ ಕೃಷ್ಣಾಪುರ-ಕಾಟಿಪಳ್ಳ ನಿವಾಸಿ ಲಕ್ಷ್ಮೀಶ ದೇವಾಡಿಗ (28) ಎಂಬಾತನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದಂತಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳಾದ ಕೃಷ್ಣಾಪುರ-ನೈತಂಗಡಿ ನಿವಾಸಿ ಶೈಲೇಶ್ ಯಾನೆ ಶೈಲೇಶ್ ಪೂಜಾರಿ, ಹೆಜಮಾಡಿ-ಎಸ್ ಎಸ್ ರೋಡ್ ನಿವಾಸಿ ಸವಿನ್ ಕಾಂಚನ್ ಯಾನೆ ಮುನ್ನ ಹಾಗೂ ಕಾಟಿಪಳ್ಳ-ಮೂರನೇ ಬ್ಲಾಕ್ ನಿವಾಸಿ ಪವನ್ ಯಾನೆ ಪಚ್ಚು ಎಂಬವರನ್ನು ಕಾಪುವಿನ ಲಾಡ್ಜ್‍ನಲ್ಲಿ ಭಾನುವಾರ ರಾತ್ರಿಯೇ ಪೊಲೀಸರು ಬಂಧಿಸಿದ್ದರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಡಿಸೆಂಬರ್ 24ರಂದು ಶನಿವಾರ ಸಂಜೆ ಜಲೀಲ್ ತನ್ನ ಫ್ಯಾನ್ಸಿ ಅಂಗಡಿಯಲ್ಲಿದ್ದ ವೇಳೆಯೇ ಆರೋಪಿಗಳು ಚೂರಿಯಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು. ಘಟನೆ ಬಳಿಕ ಸ್ಥಳೀಯವಾಗಿ ಆತಂಕದ ಪರಿಸ್ಥಿತಿ ನಿರ್ಮಾಣಗೊಂಡ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸುರತ್ಕಲ್, ಕಾವೂರು, ಬಜಪೆ ಹಾಗೂ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸೆಕ್ಷನ್ 144 ರನ್ವಯ ನಿಷೇಧಾಜ್ಞೆ ವಿಧಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಇದೀಗ ನಿಷೇಧಾಜ್ಞೆಯನ್ನು ಡಿಸೆಂಬರ್ 29ರ ಬೆಳಗ್ಗೆ 6 ಗಂಟೆಯವರೆಗೆ ವಿಸ್ತರಿಸಿ ಮಂಗಳೂರು ಕಮಿಷನರ್ ಶಶಿಕುಮಾರ್ ಆದೇಶಿಸಿದ್ದಾರೆ.
0 comments:
Post a Comment