ಬಂಟ್ವಾಳ, ಡಿಸೆಂಬರ್ 27, 2022 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ಪರಿಸರ ಇನ್ನೂ ಕೂಡಾ ಸ್ವಚ್ಛ ಭಾರತ ಪರಿಕಲ್ಪನೆಗೆ ಸವಾಲಾಗಿಯೇ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪುರವಾಸಿಗಳು ತೀವ್ರ ಆಕ್ರೋಶಿತರಾಗಿದ್ದಾರೆ.
ಬಂಟ್ವಾಳ ಶಾಸಕರ ಸುಂದರ ಬಿ ಸಿ ರೋಡು ಪರಿಕಲ್ಪನೆಗೂ ಬಂಟ್ವಾಳ ಪುರಸಭಾಧಿಕಾರಿಗಳು ಸ್ಪಂದಿಸುತ್ತಿಲ್ಲ. ಪುರಸಭಾ ವ್ಯಾಪ್ತಿಯ ಹೃದಯ ಪಟ್ಟಣವಾಗಿರುವ ಬಿ ಸಿ ರೋಡು ಪೇಟೆಯೇ ಈ ಎಲ್ಲಾ ಸ್ವಚ್ಛ-ಸುಂದರ ಪರಿಕಲ್ಪನೆಗೆ ಸವಾಲಾಗಿ ಪರಿಣಮಿಸಿದೆ.
ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಗೂಡಿನಬಳಿ ರಸ್ತೆಯ ಬದಿಯಲ್ಲಿ ಎಲ್ಲೆಂದಲ್ಲಿನ ಸಾರ್ವಜನಿಕರು ಮಣ್ಣು, ಕಸ, ತ್ಯಾಜ್ಯಗಳನ್ನು ತಂದು ಬೇಕಾಬಿಟ್ಟಿ ಎಸೆಯುತ್ತಿರುವ ದೃಶ್ಯ ನಿತ್ಯವೂ ಕಂಡು ಬರುತ್ತಿದೆ. ಎಲ್ಲೆಲ್ಲೋ ಮನೆ-ಶೌಚಾಲಯ ಮೊದಲಾದ ಹಳೆ ಕಟ್ಟಡಗಳನ್ನು ಕೆಡವಿದ ಮಣ್ಣು-ಕಲ್ಲುಗಳನ್ನು ಕೂಡಾ ಲಾರಿಯಲ್ಲಿ ತುಂಬಿಸಿ ತಂದು ಇಲ್ಲಿನ ರಸ್ತೆ ಬದಿಯಲ್ಲೆ ಸುರಿದು ಹೋಗುತ್ತಿರುವ ದೃಶ್ಯಗಳೂ ನಿತ್ಯ ಕಂಡು ಬರುತ್ತಿದೆ. ಅದೇ ರೀತಿ ಪುರಸಭಾ ವ್ಯಾಪ್ತಿ ಹಾಗೂ ಹೊರಗಿನಿಂದಲೂ ಸಾರ್ವಜನಿಕರು ಬೇಕಾಬಿಟ್ಟಿ ಕಸ-ತ್ಯಾಜ್ಯಗಳನ್ನೂ ತಂದು ಎಸೆಯುತ್ತಿದ್ದಾರೆ. ಸ್ವಚ್ಛ ಬಂಟ್ವಾಳ ಪರಿಕಲ್ಪನೆಯ ಸಾಕಾರಕ್ಕಾಗಿ ಅಲ್ಲೇ ಸಮೀಪದಲ್ಲಿ ಎರಡೆರಡು ಸೀಸಿ ಕ್ಯಾಮೆರಾ ಅಳವಡಿಸಲಾಗಿದ್ದರೂ ಅದು ಚಲಾವಣೆಯಲ್ಲಿ ಇಲ್ಲದೆ, ಕೇವಲ ಕಾಗದದ ಹುಲಿ ಎಂಬಂತೆ ಇರುವ ಪರಿಣಾಮ ಸಾರ್ವಜನಿಕರಿಗೆ ಯಾವುದೇ ಕಾನೂನು ಕ್ರಮದ ಭಯ ಇಲ್ಲದೆ ಬಿ ಸಿ ರೋಡು ನಗರವನ್ನು ಪಾಳುಕೊಂಪೆಯಾಗಿ ಮಾರ್ಪಡಿಸುತ್ತಿದ್ದಾರೆ.
ಮೊನ್ನೆ ಇಲ್ಲಿನ ರಸ್ತೆ ಬದಿಯಲ್ಲಿ ಲಾರಿಯಲ್ಲಿ ತಂದು ಮಣ್ಣು ರಾಶಿ ಹಾಕುವ ಸಂದರ್ಭ ಅಲ್ಲೇ ಸ್ಥಳದಲ್ಲಿದ್ದ ಪುರಸಭಾ ವಾರ್ಡ್ ಸಂಖ್ಯೆ 1ರ ಕೌನ್ಸಿಲರ್ ವಾಸು ಪೂಜಾರಿ ಅವರು ಲಾರಿ ಚಾಲಕನನ್ನು ತೀವ್ರ ತರಾಟೆಗೆ ತೆಗೆದುಕೊಂಡು ತಕ್ಷಣ ಸ್ವಚ್ಛಗೊಳಿಸುವಂತೆ ತಾಕೀತು ಮಾಡಿದ್ದಾರೆ. ಕೌನ್ಸಿಲರ್ ವಾಸು ಪೂಜಾರಿ ಅವರ ತರಾಟೆಗೆ ಬಗ್ಗಿದ ಲಾರಿ ಚಾಲಕ ಜೆಸಿಬಿ ತಂದು ಸರಿಪಡಿಸುವುದಾಗಿ ಹೇಳಿ ತೆರಳಿದವ ಮತ್ತೆ ಇತ್ತ ಕಡೆ ತಲೆ ಹಾಕಿಯೂ ನೋಡಿಲ್ಲ.
ಅಲ್ಲದೆ ಬಿ ಸಿ ರೋಡು ಪೇಟೆಯಿಡೀ ರಾಜಕೀಯ ಹಾಗೂ ರಾಜಕೀಯೇತರ ಬ್ಯಾನರ್, ಫ್ಲೆಕ್ಸ್ ಗಳು ರಾರಾಜಿಸುವ ಮೂಲಕ ಪೇಟೆಯ ಅಂದ ಕೆಡಿಸುತ್ತಿದೆ. ಈ ಬಗ್ಗೆಯೂ ಪುರಸಭೆ ಕ್ರಮ ಕೈಗೊಳ್ಳುವ ನಿರ್ಣಯ ಮಾತ್ರ ಕೈಗೊಳ್ಳತ್ತದೆಯೇ ವಿನಃ ಯಾವುದೇ ಕ್ರಮ ಕೈಗೊಳ್ಳುವ ಧಮ್ಮು ಅಧಿಕಾರಿಗಳಿಗೆ ಉಳಿದಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕೇಳಿ ಬರುತ್ತಿದೆ.
0 comments:
Post a Comment