ಮಂಗಳೂರು, ಡಿಸೆಂಬರ್ 01, 2022 (ಕರಾವಳಿ ಟೈಮ್ಸ್) : ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮ ಡಿಸೆಂಬರ್ 2 (ನಾಳೆ) ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ.
ಕಂಪೆನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ಬಿ ಹೊಳ್ಳ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕøತಿ ಹಾಗೂ ಇಂಧನ ಇಲಾಖಾ ಸಚಿವ ವಿ ಸುನಿಲ್ ಕುಮಾರ್ ವಿದ್ಯಾರ್ಥಿ ನಿಧಿ ವಿತರಣೆ ಮಾಡುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಕುಟುಂಬ ಮತ್ತು ಸಮಾಜ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಯು ಟಿ ಖಾದರ್, ಡಾ ವೈ ಭರತ್ ಶೆಟ್ಟಿ, ಮಂಗಳೂರು ಮನಪಾ ಮೇಯರ್ ಜಯಾನಂದ ಅಂಚನ್, ಸಂಸ್ಥೆಯ ಝೋನಲ್ ಬಿಝಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಮಂಗಳೂರು ಎ ಆರ್ ಟಿ ಒ ವಿಶ್ವನಾಥ ನಾಯಕ್ ಎನ್, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಎಸ್ ಪ್ರದೀಪ್ ಕುಮಾರ್ ಕಲ್ಕೂರಾ, ಪ್ರಮುಖರಾದ ರಾಜಾರಾಮ್ ಭಟ್, ಸೇರಾಜೆ ಗಣಪತಿ ಭಟ್, ಚಂದ್ರಕುಮಾರ್ ನಾಯಕ್, ಸ್ವರಾಜ್ ಶೆಟ್ಟಿ, ಡಾ ಜಯಪ್ರಕಾಶ್ ನಾರಾಯಣ, ಎಸ್ ಎಂ ವರ್ಣೇಕರ್, ರಮೇಶ್ ಭಟ್ ಕದ್ರಿ, ಶ್ರೀಮತಿ ನಿಧಿ ಮಿಥುನ್, ನಂದಗೋಪಾಲ್, ಸತ್ಯನಾರಾಯಣ ಕೆ ವಿ, ನಾಗರಾಜ್ ಬಿ, ಉಲ್ಲಾಸ್ ನಾಯಕ್, ಸದಾಶಿವ, ಶ್ರೀನಿವಾಸ್ ತಂತ್ರಿ, ಉಮೇಶ್, ಮುಹಮ್ಮದ್ ರಫೀಕ್, ರಾಘವೇಂದ್ರ ಪ್ರಸಾದ್ ಮೊದಲಾದವರು ಭಾಗವಹಿಸಲಿದ್ದಾರೆ.
ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಶ್ರೀರಾಮ್ ಗ್ರೂಪಿನ ಅಂಗ ಸಂಸ್ಥೆಯಾಗಿದ್ದು, 1970ರಲ್ಲಿ ಸ್ಥಾಪನೆಗೊಂಡಿದೆ. ದೇಶದ ಖಾಸಗಿ ರಂಗದಲ್ಲಿ ಎಲ್ಲಾ ತರದ ಅತೀ ಹಳೆಯ ಹಾಗೂ ಅತೀ ದೊಡ್ಡ ವಾಣಿಜ್ಯ ಹಾಗೂ ಖಾಸಗಿ ವಾಹನಗಳಿಗೆ ಸಾಲ ಸೌಲಭ್ಯ ವಿತರಿಸುವ ಪ್ರಥಮ ಹಣಕಾಸು ಸಂಸ್ಥೆಯಾಗಿದೆ. ಸಂಸ್ಥೆಯು ದೇಶಾದ್ಯಂತ 1758 ಶಾಖೆಗಳನ್ನು ಹಾಗೂ 831 ಗ್ರಾಮೀಣ ಸೇವಾ ಕೇಂದ್ರಗಳನ್ನು ಹೊಂದಿದ್ದು, 27218 ಮಂದಿ ನೌಕರರು ಸಂಸ್ಥೆಯಲ್ಲಿದ್ದಾರೆ.
ಸಂಸ್ಥೆಯ ಸಾಮಾಜಿಕ ಸೇವೆಯ ಭಾಗವಾಗಿ 1993ರಿಂದ ಮಕ್ಕಳ ವಿದ್ಯಾಭ್ಯಾಸ, ಗ್ರಾಮೀಣ ಮಹಿಳೆಯ ಕೌಶಲ್ಯ ಅಭಿವೃದ್ದಿ, ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವುದು ಇನ್ನಿತರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇದರ ಭಾಗವಾಗಿ ಸಾರಿಗೆ ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಮಿಕರ ಮತ್ತು ಮಾಲಕರ 8ನೇ ತರಗತಿಯಿಂದ ಪಿಯುಸಿವರೆಗಿನ ಶೇ 60ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ ತಲಾ 3 ಸಾವಿರ ರೂಪಾಯಿಯಂತೆ ವಿದ್ಯಾರ್ಥಿ ವೇತನ ನೀಡುತ್ತಾ ಬರುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ 1940 ಮಂದಿ ವಿದ್ಯಾರ್ಥಿಗಳಿಗೆ ತಲಾ 3 ಸಾವಿರ ರೂಪಾಯಿಯಂತೆ ಸುಮಾರು 61,62,500/- ರೂಪಾಯಿ ವಿದ್ಯಾರ್ಥಿ ವೇತನ ನೀಡುತ್ತಿದೆ. ಈ ಪೈಕಿ 835 ಮಂದಿ ವಿದ್ಯಾರ್ಥಿಗಳಿಗೆ ಡಿಸೆಂಬರ್ 2 ರ ಶುಕ್ರವಾರ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 26,74,500/- ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಉಳಿದ 1105 ಮಂದಿ ವಿದ್ಯಾರ್ಥಿಗಳಿಗೆ ಡಿಸೆಂಬರ್ ಅಂತ್ಯದೊಳಗೆ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಲಾಗಿದೆ. ಅಲ್ಲದೆ ಸಂಸ್ಥೆಯು ಸ್ವಚ್ಛ ಭಾರತ ಅಭಿಯಾನದಲ್ಲಿ ಕೈಜೋಡಿಸಿದೆ. ಅದೇ ರೀತಿ ಸುರತ್ಕಲ್ಲಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಶರಶ್ಚಂದ್ರ ಭಟ್ ಕಾಕುಂಜೆ, ನಾಗರಾಜ್ ಬಿ, ಚೇತನ್ ಅರಸ್, ಚಂದ್ರಹಾಸ ಆಳ್ವ, ಪ್ರಮೋದ್ ಕುಮಾರ್, ಜೋಸೆಫ್ ಟಿ ಸಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
0 comments:
Post a Comment