ಮಂಗಳೂರು, ಡಿಸೆಂಬರ್ 02, 2022 (ಕರಾವಳಿ ಟೈಮ್ಸ್) : ಮಂಗಳೂರಿನ ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲಿನ ಫಿಲಾಟೆಲಿಕ್ ಬ್ಯೂರೋ ಇದೀಗ ಪ್ರವಾಸಿಗರ ನೆಚ್ಚಿನ ತಾಣವಾಗುತ್ತಿದೆ. ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆಯೂ ಕೂಡ ಇದನ್ನು ಅಧಿಕೃತ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿಸುವ ಪ್ರಕ್ರಿಯೆ ನಡೆಸುತ್ತಿದೆ.
ವಿವಿಧ ರೀತಿಯ ಸಂಸ್ಮರಣಾ ಅಂಚೆ ಚೀಟಿಗಳು, ವಿಶೇಷ ಅಂಚೆ ಲಕೋಟೆಗಳು, ಸಚಿತ್ರ ಅಂಚೆ ಕಾರ್ಡುಗಳು ಇಲ್ಲಿ ಲಭ್ಯವಿದ್ದು, ಮಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರು ಫಿಲಾಟೆಲಿಕ್ ಬ್ಯೂರೋಗೆ ಭೇಟಿ ನೀಡಿ ಅಂಚೆ ಚೀಟಿ ಹಾಗೂ ಇತರ ಅಂಚೆ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದಾರೆ. ಇದೀಗ ನ್ಯೂಜಿಲ್ಯಾಂಡ್, ಕೆನಡಾ ಮುಂತಾದ ದೇಶದ ಪ್ರವಾಸಿಗರು ‘ಸೆವೆನ್ ಸೀಸ್ ಎಕ್ಸ್ ಪ್ಲೋರರ್’ ಹಡಗಿನಲ್ಲಿ ಮಂಗಳೂರು ತಲುಪಿದ್ದು, ಹಡಗಿನಲ್ಲಿದ್ದ ಅನೇಕ ಪ್ರವಾಸಿಗರು ಫಿಲಾಟೆಲಿ ಬ್ಯೂರೋಗೆ ಭೇಟಿ ನೀಡಿ ಇಲ್ಲಿ ಲಭ್ಯವಿರುವ ವಿವಿಧ ಅಂಚೆ ಚೀಟಿಗಳು, ಅಂಚೆ ಸಾಮಾಗ್ರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಅನೇಕ ವಸ್ತುಗಳನ್ನು ಖರೀದಿಸಿದ್ದಾರೆ.
ಈ ಸಂದರ್ಭ ಮಂಗಳೂರು ಪ್ರಧಾನ ಅಂಚೆ ಕಚೇರಿಯ ಹಿರಿಯ ಅಂಚೆ ಪಾಲಕ ಎಸ್ ಪಿ ರವಿ ಉಪಸ್ಥಿತರಿದ್ದರು. ಬ್ಯೂರೋ ಮೇಲ್ವಿಚಾರಕಿ ಶ್ರೀಮತಿ ದೀಪಾ ರಾವ್ ಅವರು ಅಂಚೆ ಚೀಟಿಗಳ ಬಗ್ಗೆ ಪ್ರವಾಸಿಗರಿಗೆ ವಿವರಿಸಿದರು.
ಪ್ರವಾಸಿ ಸಂಸ್ಥೆಗಳು ಮುಂಬರುವ ದಿನಗಳಲ್ಲಿ ಮಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಫಿಲಾಟೆಲಿಕ್ ಬ್ಯೂರೋಗೆ ಉಚಿತವಾಗಿ ಭೇಟಿ ಏರ್ಪಡಿಸಲು ಬಯಸಿದರೆ ಫಿಲಾಟೆಲಿಕ್ ಬ್ಯೂರೋವಿನ ಸಂಪರ್ಕ ಸಂಖ್ಯೆ 0824-2441447 ಅಥವಾ ಇಮೈಲ್ mangaloreho@indiapost.gov.in ನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment