ಬಂಟ್ವಾಳ, ಜನವರಿ 16, 2023 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ಹೃದಯ ಪಟ್ಟಣ ಬಿ ಸಿ ರೋಡಿನಲ್ಲಿ ಇದೀಗ ಸುಂದರ ಬಿ ಸಿ ರೋಡು ಪರಿಕಲ್ಪನೆಯಲ್ಲಿ ಇಲ್ಲಿನ ಫ್ಲೈ ಓವರ್ ಪಿಲ್ಲರ್ ಗಳಿಗೆ ಬಣ್ಣ ತುಂಬುವ ಹಾಗೂ ಚಿತ್ರ ಬಿಡಿಸುವ ಕೆಲಸ ಅಂತಿಮ ಹಂತದಲ್ಲಿ ಸಾಗುತ್ತಿದೆ. ಆದರೆ ಸುಂದರ ಬಿ ಸಿ ರೋಡು ಪರಿಕಲ್ಪನೆ ಬಣ್ಣ ಹಚ್ಚುವುದಕ್ಕೆ ಸೀಮಿತವೇ ಅಥವಾ ಪೇಟೆಯ ಇತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಾಧ್ಯವಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಫ್ಲೈ ಓವರ್ ಪಿಲ್ಲರ್‍ಗಳಿಗೆ ಬಣ್ಣ ತುಂಬುವ ಹಾಗೂ ಚಿತ್ರ ಬಿಡಿಸುವ ಪಿಲ್ಲರಿನ ಅಡಿಭಾಗದಲ್ಲೇ ಅರ್ಧದಲ್ಲಿ ನಿಂತಿರುವ ರಸ್ತೆ ಕಾಮಗಾರಿಯೇ ಇದನ್ನು ಪ್ರಶ್ನಿಸುತ್ತಿದೆ. ಮಂಗಳೂರು ಕಡೆ ತೆರಳುವ ಬಸ್ಸುಗಳು ನಿಲ್ಲುವ ಜಾಗದಲ್ಲಿ ಬಿ ಸಿ ರೋಡು ಖಾಸಗಿ ಬಸ್ಸು ನಿಲ್ದಾಣಕ್ಕೆ ತಿರುವು ಪಡೆಯುವ ಜಾಗದಲ್ಲಿ ಅರ್ಧ ರಸ್ತೆ ಡಾಮರು ಹಾಗೂ ಕಾಂಕ್ರಿಟೀಕರಣ ಇಲ್ಲದೆ ಸೊರಗಿ ನಿಂತಿದೆ. ಜನರಿಗೆ ಉಪಯುಕ್ತವಾಗುವ ಕೆಲಸ ಮುಗಿದ ಮೇಲೆ ಪೈಂಟಿಂಗ್ ಹಾಗೂ ಇತರ ಅಲಂಕಾರಿಕ ಕಾಮಗಾರಿಗಳು ಸರ್ವೇ ಸಾಮಾನ್ಯವಾಗಿ ನಡೆಯುತ್ತದೆ. ಆದರೆ ಬಿ ಸಿ ರೋಡಿನಲ್ಲಿ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮುಂಚೆಯೇ ಅಲಂಕಾರಿಕ ಕೆಲಸ ಆರಂಭಗೊಂಡಿರುವ ಬಗ್ಗೆ ಸಾರ್ವಜನಿಕರು ಸಹಜವಾಗಿಯೇ ಪ್ರಶ್ನಿಸುತ್ತಿದ್ದಾರೆ.
ಅಲ್ಲದೆ ಬಿ ಸಿ ರೋಡು ಪೇಟೆಯೇ ಒಂದು ರೀತಿಯ ಕಿಷ್ಕಿಂಧೆಯಾಗಿ ಪರಿವರ್ತನೆಯಾಗಿದೆ. ಸರಕಾರಿ ಹಾಗೂ ಖಾಸಗಿ ಬಸ್ಸು ನಿಲುಗಡೆಗೆ ಸೂಕ್ತ ಜಾಗ ಗುರುತಿಸುವಿಕೆಯಾಗಲೀ, ಖಾಸಗಿ ವಾಹನಗಳ ಹಾಗೂ ಅಟೋ ರಿಕ್ಷಾಗಳ ಪಾರ್ಕಿಂಗಿಗೆ ಸೂಕ್ತ ಸ್ಥಳ ಗುರುತಿಸುವುದಾಗಲೀ, ಪ್ರಯಾಣಿಕರಿಗೆ ತಂಗಲು ಯೋಗ್ಯ ಸ್ಥಳಾವಕಾಶವಾಗಲೀ ಇರುವುದಿಲ್ಲ. ಮಳೆಗಾಲದಲ್ಲಂತೂ ಮಳೆ ನೀರು ಹರಿದು ಹೋಗುವ ಯಾವುದೇ ವ್ಯವ್ಯಸ್ಥೆಗಳು ಅಲ್ಲೋಕಲ್ಲೋಲವಾಗಿ ಮಳೆ ನೀರು ಅಂಗಡಿ-ಮುಂಗಟ್ಟುಗಳಿಗೆ ನುಗ್ಗುತ್ತಿವೆ. ಹೆದ್ದಾರಿ ಬದಿ ಅಕ್ರಮ ಹಾಗೂ ಅನಧಿಕೃತ ಅಂಗಡಿ-ವ್ಯಾಪಾರಸ್ಥರು ಬೀಡು-ಬಿಟ್ಟು ಗೊಂದಲದ ಪರಿಸ್ಥಿತಿ ಪ್ರತಿನಿತ್ಯವೂ ಕಂಡು ಬರುತ್ತಿದೆ. ಹೆದ್ದಾರಿ ಅಗಲೀಕರಣಕ್ಕೆ ಆಹುತಿಯಾಗುವ ಕಟ್ಟಡಗಳ ಮಾಲಕರಿಗೆ ಪರಿಹಾರ ನೀಡಿದರೂ ಅದಿನ್ನೂ ಪೂರ್ಣ ಪ್ರಮಾಣದಲ್ಲಿ ತೆರವುಗೊಳ್ಳುವ ಯಾವುದೇ ಲಕ್ಷಣಗಳೂ ಕಂಡುಬಂದಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಾಣದೆ ಕೇವಲ ಪೈಂಟಿಂಗ್ ಹಾಗೂ ಕಲಾಕೃತಿ ರಚನೆಯಿಂದ ಜನರಿಗೆ ಆಗುವ ಪ್ರಯೋಜನವಾದರೂ ಏನು? ಇದೆಲ್ಲವೂ ಕೇವಲ ಕಣ್ಣಿಗೆ ಮಣ್ಣು ಹಾಕುವ ಪ್ರಯತ್ನವೇ ಅಥವಾ ಚುನಾವಣಾ ಹೊಸ್ತಿಲಲ್ಲಿ ಅಭಿವೃದ್ದಿ ಎಂದು ತೋರ್ಪಡಿಸುವ ಪ್ರಯತ್ನವೇ ಎಂಬಿತ್ಯಾದಿ ಪ್ರಶ್ನೆಗಳನ್ನು ಸಾರ್ವಜನಿಕರು ಸಂಬಂಧಪಟ್ಟವರಿಗೆ ಕೇಳುತ್ತಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಬಿ ಸಿ ರೋಡು ಪೇಟೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವುದರ ಜೊತೆಗೆ ಸುಂದರ ಬಿ ಸಿ ರೋಡು ಪರಿಕಲ್ಪನೆಯ ಕಾಮಗಾರಿ ಮುಂದುವರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment