ಪುತ್ತೂರು, ಜನವರಿ 17, 2023 (ಕರಾವಳಿ ಟೈಮ್ಸ್) : ಮನೆಯಲ್ಲಿದ್ದ ಯುವತಿಗೆ ಮನೆಯಂಗಳಕ್ಕೆ ಪ್ರವೇಶಿಸಿದ ದುಷ್ಕರ್ಮಿ ಆಯುಧದಿಂದ ದಾಳಿ ನಡೆಸಿ ಹತ್ಯೆಗೈದು ಪರಾರಿಯಾದ ಘಟನೆ ಪುತ್ತೂರು ತಾಲೂಕು, ಮುಂಡೂರು ಗ್ರಾಮದ ಕಂಪ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಮೃತ ಯುವತಿಯನ್ನು ಇಲ್ಲಿನ ನಿವಾಸಿ ದಿವಂಗತ ಗುರುವ ಹಾಗೂ ಶ್ರೀಮತಿ ಗಿರಿಜಾ ದಂಪತಿಯ ಪುತ್ರಿ ಜಯಶ್ರೀ (23) ಎಂದು ಹೆಸರಿಸಲಾಗಿದೆ. ಮೃತ ಜಯಶ್ರೀ ಬಿಎಸ್ಸಿ ಪದವಿ ಮುಗಿಸಿ ಮನೆಯಲ್ಲೇ ಇದ್ದಳು. ಮಂಗಳವಾರ (ಜ 17) ಜಯಶ್ರೀ ತಾಯಿ ಗಿರಿಜಾ ತನ್ನ ತೋಟಕ್ಕೆ ತೆರಳಿದ್ದ ವೇಳೆ ಜಯಶ್ರೀ ಒಬ್ಬಳೇ ಮನೆಯಲ್ಲಿದ್ದಳು. ಈ ವೇಳೆ ಮನೆಗೆ ಪ್ರವೇಶಿಸಿದ ದುಷ್ಕರ್ಮಿ ಯಾವುದೇ ಆಯುಧದಿಂದ ಜಯಶ್ರೀ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಜಯಶ್ರೀ ತೋಟದಲ್ಲಿದ್ದ ತಾಯಿ ಬಳಿ ಓಡಿ ಬಂದಿದ್ದು, ತಾಯಿ ಗಿರಿಜಾ ಅವರು ತಕ್ಷಣ ಅಟೋ ರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಜಯಶ್ರೀ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಜಯಶ್ರೀಯನ್ನು ಕನಕಮಜಲಿನ ಉಮೇಶ ಎಂಬಾತ ಕೆಲವು ಸಮಯದಿಂದ ಪ್ರೀತಿಸುತ್ತಿದ್ದು, ಆತ ಆಗ್ಗಾಗ್ಗೆ ಗಿರಿಜಾರವರ ಮನೆಗೂ ಬರುತ್ತಿದ್ದನು. ಆದರೆ ಇತ್ತೀಚೆಗೆ ಅವನ ಗುಣ ನಡತೆ ಜಯಶ್ರೀಗೆ ಇಷ್ಟವಾಗದ ಕಾರಣ 2022ರ ನವೆಂಬರ್ ವೇಳೆಗೆ ಜಯಶ್ರೀ ಉಮೇಶನನ್ನು ದೂರ ಮಾಡಿರುತ್ತಾಳೆ. ಈ ವಿಷಯದಲ್ಲಿ ಸದ್ರಿ ಉಮೇಶನು ಅಸಮಾಧಾನದಿಂದ ಇದ್ದ. ಉಮೇಶನೇ ಜಯಶ್ರೀಯನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಿರುವ ಜಯಶ್ರೀ ತಾಯಿ ಗಿರಿಜಾ ಅವರು ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 07/2023 ಕಲಂ 448, 302 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment