ಬಂಟ್ವಾಳ, ಜನವರಿ 27, 2023 (ಕರಾವಳಿ ಟೈಮ್ಸ್) : ತಾಲೂಕಿನ ಪಚ್ಚಿನಡ್ಕ ನಿವಾಸಿ, ಧಾರ್ಮಿಕ, ಸಾಮಾಜಿಕ ರಂಗಗಳಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಉದ್ಯಮಿ ಕೆ ಸೇಸಪ್ಪ ಕೋಟ್ಯಾನ್ (75) ಹಠಾತ್ ಅನಾರೋಗ್ಯಕ್ಕೊಳಗಾಗಿ ಗುರುವಾರ (ಜ 26) ಸಂಜೆ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಇವರಿಗೆ ಹಠಾತ್ ಅನಾರೋಗ್ಯ ಕಾಡಿದ್ದು, ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಗುರುವಾರ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ ಅವರ ಮೃತದೇಹವನ್ನು ಬಂಟ್ವಾಳದ-ಪಚ್ಚಿನಡ್ಕದ ಶುಭ ನಿಲಯಕ್ಕೆ ತಂದು ಶುಕ್ರವಾರ ಬೆಳಗ್ಗಿನಿಂದ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನದ ವೇಳೆಗೆ ಮನೆ ಸಮೀಪದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
ಬಂಟ್ವಾಳದಲ್ಲಿ ಶುಭ ಬೀಡಿ, ಶುಭ ಟ್ರಾವೆಲ್ಸ್, ಶುಭಲಕ್ಮೀ ಮದುವೆ ಹಾಲ್ ಸಹಿತ ಅನೇಕ ಉದ್ಯಮಗಳನ್ನು ನಡೆಸುತ್ತಿದ್ದ ಇವರು ಯಶಸ್ವೀ ಉದ್ಯಮಿ ಎಂಬ ಹೆಸರು ಗಳಿಸಿದ್ದರು. ಇವರ ಮದುವೆಯಾಗಿ ಐವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚಿಗೆ ಮನೆಯಲ್ಲಿ ಶುಭಯಾನ ಎಂಬ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿ ಸರಕಾರದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದರು.
ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಅನೇಕ ದೈವ-ದೇವಸ್ಥಾನಗಳ ಜೀರ್ಣೋದ್ಧಾರ ನಡೆಸಿದ್ದಾರೆ. ಬಂಟ್ವಾಳ ಪೆÇೀಲೀಸ್ ಲೈನ್ ದೇವಸ್ಥಾನದ ಅಧ್ಯಕ್ಷರಾಗಿದ್ದ ಇವರು ಕಳೆದ 25 ವರ್ಷಗಳಿಂದ ಬಂಟ್ವಾಳ ಬಿಲ್ಲವ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೃತರು ಪತ್ನಿ, ಪುತ್ರ, ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಮಾಜಿ ಸಚಿವ ಬಿ ರಮಾನಾಥ ರೈ, ಕೇಂದ್ರದ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ, ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬುಡಾ ಅಧ್ಯಕ್ಷ ಬಿ ದೇವದಾಸ ಶೆಟ್ಟಿ ಸಹಿತ ವಿವಿಧ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
0 comments:
Post a Comment