ಬಂಟ್ವಾಳ, ಫೆಬ್ರವರಿ 22, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಗಳಲ್ಲಿ ನಿರಂತರ ಚರ್ಚೆಗೆ ಒಳಪಟ್ಟ ಬಳಿಕ ಕೊನೆಗೂ ಬಿ ಸಿ ರೋಡು ಪೇಟೆಯ ಹೆದ್ದಾರಿ ಬದಿಗಳಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವ ತರಕಾರಿ ಹಾಗೂ ಜಂಕ್ ಫುಡ್ ಅಂಗಡಿಗಳನ್ನು ಮಂಗಳವಾರ ಪುರಸಭಾ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.
ಬಿ ಸಿ ರೋಡು ಪೇಟೆಯ ಹೆದ್ದಾರಿ ಬದಿಯ ಎಲ್ಲೆಂದರಲ್ಲಿ ಅಕ್ರಮ ಹಾಗೂ ಅನಧಿಕೃತವಾಗಿ ಕೆಲ ವ್ಯಾಪಾರಿಗಳು ತರಕಾರಿ ಸಹಿತ ವಿವಿಧ ವ್ಯಾಪಾರಗಳನ್ನು ನಿತ್ಯವೂ ಮಾಡಿಕೊಂಡು ಬರುತ್ತಿದ್ದು, ಇವುಗಳ ಬಗ್ಗೆ ಪುರಸಭೆಯ ಸಾಮಾನ್ಯ ಸಭೆಗಳಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರುಗಳು ತಗಾದೆ ಎತ್ತುತ್ತಲೇ ಬಂದಿದ್ದರು. ಅನಧಿಕೃತ ರಸ್ತೆ ಬದಿ ಹಾಗೂ ಅಂಗಡಿಗಳ ಹೊರಗೆ ಬಂದು ರಸ್ತೆ ಬದಿಗಳನ್ನು ಅತಿಕ್ರಮಿಸಿ ವ್ಯಾಪಾರ ಮಾಡುತ್ತಿರುವ ಅಂಗಡಿದಾರರನ್ನು ತೆರವುಗೊಳಿಸುವ ಬಗ್ಗೆ ಭಾರೀ ಚರ್ಚೆಗಳು ನಡೆದಿತ್ತು. ಈ ಹಿನ್ನಲೆಯಲ್ಲಿ ಮಂಗಳವಾರ ಮಧ್ಯಾಹ್ನ ಅಧಿಕಾರಿಗಳ ಸೂಚನೆ ಮೇರೆಗೆ ಪುರಸಭಾ ಸಿಬ್ಬಂದಿಗಳು ಬಿ ಸಿ ರೋಡು ರಸ್ತೆ ಬದಿ ಅನಧಿಕೃತ ಹಾಗೂ ಅಕ್ರಮ ವ್ಯಾಪಾರ ನಡೆಸುವ ಮಂದಿಗಳನ್ನು ತೆರವುಗೊಳಿಸಿದ್ದಾರೆ. ಆದರೆ ತೆರವುಗೊಳಿಸಿ ಸಿಬ್ಬಂದಿಗಳು ಸ್ಥಳದಿಂದ ತೆರಳಿದ ಕೆಲವೇ ಕ್ಷಣಗಳಲ್ಲಿ ಮತ್ತದೇ ಜಾಗದಲ್ಲಿ ವ್ಯಾಪಾರಿಗಳು ಬೀಡು ಬಿಟ್ಟು ವ್ಯಾಪಾರ ನಡೆಸುತ್ತಿದ್ದ ದೃಶ್ಯ ಕಂಡು ಬಂತು.
0 comments:
Post a Comment