ಬಂಟ್ವಾಳ, ಫೆಬ್ರವರಿ 03, 2023 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು, ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯಥಿಗಳ ಪಟ್ಟಿಗಳನ್ನೂ ರೆಡಿ ಮಾಡುತ್ತಿದೆ. ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಸಕಲ ಪೂರ್ವ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಹೈಕಮಾಂಡ್ ಅಂಗಳದಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮ ಸಿದ್ದತೆಗಾಗಿ ಕಾಯುತ್ತಿದೆ. ಈ ಮಧ್ಯೆ ರಾಜ್ಯದಲ್ಲೇ ಮೊದಲ ಕಾಂಗ್ರೆಸ್ ಟಿಕೆಟ್ ಕನ್ಫರ್ಮ್‍ಗೊಂಡಿದೆ ಎಂದು ತಿಳಿದು ಬಂದಿದ್ದು, ಅದು ಬಂಟ್ವಾಳದ್ದು ಎನ್ನಲಾಗಿದೆ.
ಬಂಟ್ವಾಳದ ರಾಜಕೀಯ ಭೀಷ್ಮ, ವೈಯುಕ್ತಿಕ ಜೀವನಕ್ಕಿಂತಲೂ ಜನಸೇವೆಗಾಗಿ ಜೀವನದ ಬಹುಪಾಲು ಸಮಯವನ್ನು ಮೀಸಲಿಟ್ಟು ಕಳೆದ ಚುನಾವಣೆಯಲ್ಲಿ ಸೋತ ಬಳಿಕವೂ ಕ್ಷೇತ್ರಾದ್ಯಂತ ಹಾಗೂ ಜಿಲ್ಲೆ, ರಾಜ್ಯಾದ್ಯಂತ ಪಾದರಸ ಸಂಚಾರ ನಡೆಸುತ್ತಿರುವ ಮಾಜಿ ಸಚಿವ, ಮಾಜಿ ಶಾಸಕ, ಬಂಟ್ವಾಳದ ಬಂಟ, ಅಜಾತಶತ್ರು ಎಂದೇ ವಿರೋಧಿಗಳೂ ಒಪ್ಪಿಕೊಳ್ಳುವ ಬೆಳ್ಳಿಪ್ಪಾಡಿ ರಮಾನಾಥ ರೈ ಅವರಿಗೆ ಬಂಟ್ವಾಳ ಕ್ಷೇತ್ರದಲ್ಲಿ ಈ ಬಾರಿಯೂ “ಕೈ” ಕಮಾಂಡ್ ಮನ್ನಣೆ ನೀಡಿದ್ದು, ಸ್ಪರ್ಧೆಗೆ ಸಜ್ಜಾಗುವಂತೆ ಸೂಚಿಸಿದೆ ಎನ್ನಲಾಗಿದೆ.
ಬಂಟ್ವಾಳ ಕ್ಷೇತ್ರದಲ್ಲಿ 8 ಬಾರಿ ಸ್ಪರ್ಧಿಸಿ ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿ, ರಾಜ್ಯ ಸರಕಾರದ ಕ್ಯಾಬಿನೆಟ್ ಮಂಡಳಿಯಲ್ಲಿ ವಿವಿಧ ಸಚಿವ ಸ್ಥಾನಗಳನ್ನು ಅಲಂಕರಿಸಿ ಭ್ರಷ್ಟಾಚಾರ ರಹಿತವಾಗಿ, ನಿಷ್ಕಳಂಕ ರಾಜಕಾರಣಿಯಾಗಿ ಸ್ವತಃ ಕಾಂಗ್ರೆಸ್ ಪಕ್ಷದ ಹೈಕಮಾಂಡಿನಿಂದ ಮಾತ್ರವಲ್ಲದೆ ಎಲ್ಲ ರಾಜಕೀಯ ಪಕ್ಷಗಳ ಹಿರಿಯ ನಾಯಕರಿಂದ ಬೆನ್ನು ತಟ್ಟಿಸಿಕೊಂಡು ರಾಜಕೀಯವಾಗಿ ಸೈ ಎನಿಸಿಕೊಂಡಿರುವ ರಮಾನಾಥ ರೈ ಅವರಿಗೆ ಈ ಬಾರಿಯೂ ಟಿಕೆಟ್ ಖಚಿತ ಎಂಬುದು ಮೊದಲೇ ತಿಳಿದಿತ್ತಾದರೂ ಹೈಕಮಾಂಡಿನ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಹಿತ ಕೆಲ ನಿಯಮಗಳಿಂದಾಗಿ ಕಾದು ನೋಡುವ ತಂತ್ರ ಅನುಸರಿಲಾಗಿತ್ತು. ಆದರೂ ಅಧಿಕಾರ ಇದ್ದರೂ ಇಲ್ಲದಿದ್ದರೂ ಜನಸೇವೆಯಲ್ಲೇ ವರ್ಷಪೂರ್ತಿ ಓಡಾಡುತ್ತಿದ್ದ ರೈಗಳು ಈ ಬಾರಿ ಟಿಕೆಟ್ ದೊರೆತರೂ ದೊರೆಯದಿದ್ದರೂ ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಿರಂತರವಾಗಿ ಮತ ನೀಡಿ ಪ್ರೀತಿ ಧಾರೆ ಎರೆದಿದ್ದ ಕ್ಷೇತ್ರದ ಜನರ ಆಶೋತ್ತರಗಳ ಈಡೇರಿಕೆಗಾಗಿ, ಜನರ ಮೇಲಿನ ಋಣ ಜನ್ಮ ಜನ್ಮಾಂತರಗಳಲ್ಲೂ ತೀರಿಸಲು ಸಾಧ್ಯವಿಲ್ಲ ಎಂಬ ನೆಲೆಯಲ್ಲಿ ಜನಸೇವೆಯ ಜೊತೆಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.
ಇದೀಗ ಬಂಟ್ವಾಳದಲ್ಲಿ ಕೈ ಟಿಕೆಟ್ ಖಚಿತ ಎನ್ನಲಾಗಿದ್ದು, ಇದೀಗ ರೈಗಳ ಓಡಾಟ ಚುರುಕುತನ ಮತ್ತಷ್ಟು ವೇಗ ಪಡೆದುಕೊಂಡಿದೆ. ಕಳೆದ ಬಾರಿ ರೈಗಳು ಚುನಾವಣೆ ಸೋತರೂ ಕಾಂಗ್ರೆಸ್ ಪಕ್ಷಕ್ಕೆ ಮತ ಗಳಿಕೆಯಲ್ಲಿ ಯಾವುದೇ ರೀತಿಯ ಚ್ಯುತಿ ಬರದಂತೆ ನೋಡಿಕೊಂಡಿದ್ದಲ್ಲದೆ ತನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಹಲವು ರೀತಿಯ ದೂರದೃಷ್ಟಿ ಯೋಜನೆಗಳನ್ನು ಜಾರಿಗೆ ತಂದಿರುವುದೂ ಈ ಬಾರಿಯೂ ಹೈಕಮಾಂಡ್ ರೈ ಕೈ ಹಿಡಿಯುವಂತೆ ಮಾಡುವಲ್ಲಿ ಸಫಲವಾಗಿದೆ ಎನ್ನಲಾಗುತ್ತಿದೆ.
ಬಂಟ್ವಾಳ ಬಿಟ್ಟರೆ ಮಂಗಳೂರು ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಚಿವ ಯು ಟಿ ಖಾದರ್ ಅವರ ಉಮೇದುವಾರಿಕೆಯೂ ಬಹುತೇಕ ಖಚಿತ ಎನ್ನಲಾಗುತ್ತಿದೆ. ಜಿಲ್ಲೆಯ ಉಳಿದ ಕ್ಷೇತ್ರಗಳ ಟಿಕೆಟ್ ಹಂಚಿಕೆಗಳು ಕೂಡಾ ಗೊಂದಲ ರಹಿತವಾಗಿ ಪೂರ್ಣಗೊಂಡಿದ್ದರೂ ಅಭ್ಯರ್ಥಿಗಳ ಹೆಸರುಗಳು ಮಾತ್ರ ಇನ್ನೂ ಹೈಕಮಾಂಡ್ ಅಂಗಳದಲ್ಲಿ ರಹಸ್ಯವಾಗಿದೆ. ಕೆಲವೇ ದಿನಗಳಲ್ಲಿ ಎಲ್ಲವೂ ಅನಾವರಣಗೊಳ್ಳಲಿದ್ದು, ಯಾರಿಗೆ ಟಿಕೆಟ್ ದೊರೆತರೂ ಎಲ್ಲ ಆಕಾಂಕ್ಷಿಗಳು ಒಮ್ಮತದಿಂದ ಪಕ್ಷಕ್ಕಾಗಿ ದುಡಿಯಲು, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದು ಜನರ ಆಶೋತ್ತರಗಳ ಈಡೇರಿಕೆಗೆ ಶ್ರಮಿಸಲು ಪಣತೊಡಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ರಾಹುಲ್ ಗಾಂಧಿ ಅವರ ಕಠಿಣ ಭಾರತ್ ಜೋಡೋ ಯಾತ್ರೆ ಹಾಗೂ ರಾಜ್ಯದಲ್ಲಿ ಸಿದ್ದರಾಯಯ್ಯ, ಡಿ ಕೆ ಶಿವಕುಮಾರ್, ಬಿ ಕೆ ಹರಿಪ್ರಸಾದ್ ಮೊದಲಾದ ಮುಂಚೂಣಿ ನಾಯಕರ ಒಗ್ಗಟ್ಟಿನ ಜಂಟಿ ಪ್ರಜಾಧ್ವನಿ ಯಾತ್ರೆಗಳಿಗೆ ಜನರಿಂದ ದೊರೆತ ಅಭೂತಪೂರ್ವ ಬೆಂಬಲದಿಂದ ವಿಶೇಷ ಸ್ಪೂರ್ತಿ ಪಡೆದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೇರುವ ನಿಟ್ಟಿನಲ್ಲಿ ಸಿದ್ದತೆ ಮುಂದುವರಿಸಿದೆ. ಅಲ್ಲದೆ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದ ನಾಯಕರ ವಿವಿಧ ವೈಫಲ್ಯಗಳು ಕೂಡಾ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಿ ಪರಿಣಮಿಸುವ ಸಾಧ್ಯತೆ ಕೂಡಾ ಇದೆ ಎನ್ನಲಾಗುತ್ತಿದೆ.
0 comments:
Post a Comment