ನಾಗರಿಕರಲ್ಲಿ ಆತಂಕ ಸೃಷ್ಟಿಸಿದ ಬಿ.ಸಿ.ರೋಡು ಪ್ರಿಯಾ ಸಂಸ್ಥೆಯ ಬೆಂಕಿ ಅನಾಹುತ : ಕಟ್ಟಡ ನಿರ್ಮಾಣ ವೇಳೆ ನಿಯಮ ಪಾಲಿಸದ ಪುರಸಭೆ ವಿರುದ್ದ ಜನಾಕ್ರೋಶ - Karavali Times ನಾಗರಿಕರಲ್ಲಿ ಆತಂಕ ಸೃಷ್ಟಿಸಿದ ಬಿ.ಸಿ.ರೋಡು ಪ್ರಿಯಾ ಸಂಸ್ಥೆಯ ಬೆಂಕಿ ಅನಾಹುತ : ಕಟ್ಟಡ ನಿರ್ಮಾಣ ವೇಳೆ ನಿಯಮ ಪಾಲಿಸದ ಪುರಸಭೆ ವಿರುದ್ದ ಜನಾಕ್ರೋಶ - Karavali Times

728x90

2 February 2023

ನಾಗರಿಕರಲ್ಲಿ ಆತಂಕ ಸೃಷ್ಟಿಸಿದ ಬಿ.ಸಿ.ರೋಡು ಪ್ರಿಯಾ ಸಂಸ್ಥೆಯ ಬೆಂಕಿ ಅನಾಹುತ : ಕಟ್ಟಡ ನಿರ್ಮಾಣ ವೇಳೆ ನಿಯಮ ಪಾಲಿಸದ ಪುರಸಭೆ ವಿರುದ್ದ ಜನಾಕ್ರೋಶ

ಬಂಟ್ವಾಳ, ಫೆಬ್ರವರಿ 03, 2023 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪ್ರಮುಖ ಪಟ್ಟಣವಾಗಿರುವ ಬಿ ಸಿ ರೋಡಿನಲ್ಲಿ ಕಾರ್ಯಾಚರಿಸುತ್ತಿದ್ದ ಪ್ರಿಯಾ ಎಲೆಕ್ಟ್ರೋನಿಕ್ಸ್ ಹಾಗೂ ಬ್ಯಾಟರಿ ಚಾಲಿತ ಸ್ಕೂಟರ್ ಮಳಿಗೆಯಲ್ಲಿ ಗುರುವಾರ ಹಠಾತ್ ಅಗ್ನಿ ಆಕಸ್ಮಿಕ ಸಂಭವಿಸಿದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಘಟನೆಗೆ ಇಲ್ಲಿನ ಪುರಸಭಾಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಾನೂನು ಮೀರಿದ ನಡವಳಿಕೆಯೇ ಕಾರಣ ಎಂದು ಪುರವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರೀತಂ ರೋಡ್ರಿಗಸ್ ಎಂಬವರ ಮಾಲಕತ್ವದ ಪ್ರಿಯಾ ಎಲೆಕ್ಟ್ರಾನಿಕ್ಸ್ ಹಾಗೂ ಕೊಮಾಕಿ ಕಂಪೆನಿಗೆ ಸೇರಿದ ಚಾರ್ಜಿಂಗ್ ಬ್ಯಾಟರಿಗಳನ್ನು ಒಳಗೊಂಡ ದ್ವಿಚಕ್ರ ವಾಹನಗಳ ದಾಸ್ತಾನು ಮಳಿಗೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಬ್ಯಾಟರಿ ಚಾಲಿತ ಸ್ಕೂಟರ್‍ಗಳ ಬ್ಯಾಟರಿ ಸ್ಪೋಟಗೊಂಡು ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದ್ದರೂ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಿ ಸಿ ರೋಡಿನ ಮಿನಿ ವಿಧಾನಸೌಧ ಹಾಗೂ ನ್ಯಾಯಾಲಯದ ಮುಂಭಾಗದಲ್ಲೇ ಈ ಅವಘಡ ಸಂಭವಿಸಿದ್ದುದರಿಂದ ಸಾರ್ವಜನಿಕರು ಸಹಜವಾಗಿಯೇ ಗಂಭೀರ ಆತಂಕಕ್ಕೆ ಒಳಗಾಗಿದ್ದರು. ಬಳಿಕ ಅಗ್ನಿಶಾಮಕ ಸಿಬ್ಬಂದಿಗಳ ಜೊತೆ ಸೇರಿದ ಸಾರ್ವಜನಿಕರು ಹರಸಾಹಸಪಟ್ಟು ಕೊನೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಮಧ್ಯಾಹ್ನದ ವೇಳೆ ಸಾರ್ವಜನಿಕರು ಹಾಗೂ ಸಮೀಪದ ಅಂಗಡಿ ಮಾಲಕರು ನಿಟ್ಟುಸಿರು ಬಿಟ್ಟಿದ್ದಾರೆ. 

ಬಂಟ್ವಾಳ ಪುರಸಭಾಧಿಕಾರಿಗಳು ಹೃದಯ ಪಟ್ಟಣವೆಂದೂ ನೋಡದೆ, ಯಾವುದೇ ಪರಿಶೀಲನೆ ನಡೆಸದೆ ಸಾರ್ವಜನಿಕರ ಆಕ್ಷೇಪಣೆಗೂ ಮನ್ನಣೆ ನೀಡದೆ ಬೇಕಾಬಿಟ್ಟಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿರುವುದೇ ಇಂತಹ ಅವಘಡಗಳಿಗೆ ಮೂಲ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿ ಸಿ ರೋಡಿನ ಬಹುತೇಕ ಕಟ್ಟಡಗಳಲ್ಲಿ ಪುರಸಭಾ ನಿಯಮ ಪಾಲನೆಯಾಗುತ್ತಿಲ್ಲ. ಎಲ್ಲವೂ ಕಡತದಲ್ಲಿ ಮಾತ್ರ ಪರಿಪೂರ್ಣವಾಗಿರುತ್ತದೆಯೇ ಹೊರತು ಯಾವ ಸುರಕ್ಷಾ ನಿಯಮಗಳೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಇಲ್ಲಿನ ಬಹುತೇಕ ಕಟ್ಟಡಗಳಲ್ಲಿ ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ವಾಹನ ತೆರಳುವ ವ್ಯವಸ್ಥೆ ಇರುವುದಿಲ್ಲ. ಅಪಾಯದ ಸಂದರ್ಭ ಸುರಕ್ಷತೆಗಾಗಿ ಇರುವ ತುರ್ತು ನಿರ್ಗಮನ ಬಾಗಿಲುಗಳೂ ಇರುವುದಿಲ್ಲ. ಸೂಕ್ತ ಪಾರ್ಕಿಂಗ್ ವ್ಯವಸ್ಥೆಗಳಾಗಲೀ, ಕನಿಷ್ಠ ಪಕ್ಷ ಪುರಸಭಾಡಳಿತದಿಂದ ಸಮರ್ಪಕ ಪರವಾನಿಗೆಯಾಗಲೀ, ಇತರ ಇಲಾಖೆಗಳಿಂದ ಸಮರ್ಪಕವಾದ ನಿರಾಕ್ಷೇಪಣಾ ಪರವಾನಿಗೆಗಳೂ ಇರುವುದಿಲ್ಲ. ಈ ಎಲ್ಲ ನಿಯಮ ಮೀರಿದ ಕಟ್ಟಡ ನಿರ್ಮಾಣವೇ ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ ಎನ್ನುವ ಸಾರ್ವಜನಿಕರು, ಗುರುವಾರ ನಡೆದ ಬೆಂಕಿ ಅವಘಡ ಹಾಡಹಗಲೇ ನಡೆದಿದ್ದರಿಂದ ಸಾರ್ವಜನಿಕರು ಗಮನಿಸಿದ್ದರಿಂದ ಸಂಭಾವ್ಯ ಗಂಭೀರ ಅಪಾಯ ಸ್ವಲ್ಪದರಲ್ಲೇ ತಪ್ಪಿ ಹೋಗಿದೆ. ಒಂದು ವೇಳೆ ರಾತ್ರಿ ವೇಳೆ ಏನಾದರೂ ಇಂತಹ ಘಟನೆಗಳು ನಡೆದರೆ ಅಪಾಯ ಹಾಗೂ ಆತಂಕ ಊಹೆಗೂ ನಿಲುಕದ್ದು. ಇನ್ನಾದರೂ ಸಂಬಂಪಟ್ಟವರು ಜನರ ರಕ್ಷಣೆಗೆ ಆದ್ಯತೆಯನ್ನು ನೀಡಿ ಕಾನೂನು ಬಾಹಿತ ಕಟ್ಟಡ ನಿರ್ಮಾಣಗಳನ್ನು ತಡೆಯಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ನಾಗರಿಕರಲ್ಲಿ ಆತಂಕ ಸೃಷ್ಟಿಸಿದ ಬಿ.ಸಿ.ರೋಡು ಪ್ರಿಯಾ ಸಂಸ್ಥೆಯ ಬೆಂಕಿ ಅನಾಹುತ : ಕಟ್ಟಡ ನಿರ್ಮಾಣ ವೇಳೆ ನಿಯಮ ಪಾಲಿಸದ ಪುರಸಭೆ ವಿರುದ್ದ ಜನಾಕ್ರೋಶ Rating: 5 Reviewed By: karavali Times
Scroll to Top