ಬಂಟ್ವಾಳ, ಫೆಬ್ರವರಿ 17, 2023 (ಕರಾವಳಿ ಟೈಮ್ಸ್) : ಪೂರ್ಣ ಪ್ರಮಾಣದಲ್ಲಿ ವಿಜೃಂಭಣೆಯಿಂದ ಈ ಬಾರಿ 12ನೇ ವರ್ಷದ ಮೂಡೂರು-ಪಡೂರು “ಬಂಟ್ವಾಳ ಕಂಬಳ”ವನ್ನು ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಮಾರ್ಚ್ 4 ರಂದು ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ನೇತೃತ್ವದ ಕಂಬಳ ಸಮಿತಿ ಆಶ್ರಯದಲ್ಲಿ ಸಡಗರ-ಸಂಭ್ರಮದಿಂದ ನಡೆಸಲಾಗುವುದು ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು.
ಬಿ ಸಿ ರೋಡಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವಳಕಟ್ಟೆಯಲ್ಲಿ ಆಯೋಜಿಸಲಾಗಿದ್ದ “ಮೂಡೂರು-ಪಡೂರು” ಜೋಡುಕರೆ ಕಂಬಳದ ಮುಂದುವರಿದ ಭಾಗವಾಗಿ ಸೂಕ್ತ ಸ್ಥಳಾವಕಾಶದ ಹುಡುಕಾಟದಲ್ಲಿ ಕೆಲ ವರ್ಷಗಳ ವಿರಾಮದ ನಂತರ ಮತ್ತೆ “ಬಂಟ್ವಾಳ ಕಂಬಳ” ಎಂಬ ವಿಶೇಷತೆಯೊಂದಿಗೆ ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ಕಳೆದ ವರ್ಷದಿಂದ ಆರಂಭಿಸಲಾಗಿದೆ. ಕಳೆದ ವರ್ಷ ಪ್ರಥಮ ವರ್ಷದ ಹಿನ್ನಲೆಯಲ್ಲಿ ಕೆಲವೊಂದು ಸಮಸ್ಯೆಗಳಿದ್ದವು, ಮಳೆಗಾಲ ಕೂಡಾ ಸಮೀಪಿಸಿದ್ದರಿಂದ ಮಳೆಯಿಂದ ಕೂಡಾ ಅಲ್ಪ ತೊಂದರೆಯಾಗಿತ್ತು. ಆದರೂ ಕಂಬಳದ ದಿನದ ಎಲ್ಲ ಕಾರ್ಯಕ್ರಮಗಳೂ ಸುಸೂತ್ರವಾಗಿ ನಡೆದು ಕಂಬಳ ಸಮಿತಿ ಪದಾಧಿಕಾರಿಗಳಿಂದಲೂ ಯಶಸ್ವಿ ಕಂಬಳ ಎಂಬ ಹೆಗ್ಗಳಿಕೆ ಪಡೆದುಕೊಂಡು ಮುಕ್ತಾಯ ಕಂಡಿದೆ.
ಈ ಬಾರಿ ಕಳೆದ ವರ್ಷದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗಿದ್ದು, ಮತ್ತೆ ಕಾವಳಕಟ್ಟೆ ಕಂಬಳದ ವೈಭಕ್ಕೆ ಮರಳಿ ಕಂಬಳ ಸರಣಿ ಮುಂದುವರಿಸಲಾಗುವುದು ಎಂದು ರಮಾನಾಥ ರೈ ತಿಳಿಸಿದರು. ಕಳೆದ ವರ್ಷದ ಬಂಟ್ವಾಳ ಕಂಬಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೋಣಗಳ ಯಜಮಾನರು ಭಾಗವಹಿಸಿದ ಹೆಗ್ಗಳಿಕೆಯೂ ನಮ್ಮ ಪಾಲಿಗಿದೆ ಎಂದವರು ಹೆಮ್ಮೆ ವ್ಯಕ್ತಪಡಿಸಿದರು.
ಕಂಬಳ ಸಮಿತಿಯ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಹಾಗೂ ಕಾರ್ಯದರ್ಶಿ ಎಡ್ತೂರು ರಾಜೇಶ್ ಶೆಟ್ಟಿ ಬಂಟ್ವಾಳ ಕಂಬಳದ ಕೆಲವೊಂದು ವಿಶೇಷತೆಗಳ ಬಗ್ಗೆ ವಿವರಿಸಿದರು.
ಇದೇ ವೇಳೆ ಬಂಟ್ವಾಳ ಕಂಬಳದ ಆರಂಭಿಕ ಹಂತದ ಪೋಸ್ಟರನ್ನು ರಮಾನಾಥ ರೈ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಕಂಬಳ ಸಮಿತಿ ಪ್ರಮುಖರಾದ ಬಿ ಪದ್ಮಶೇಖರ್ ಜೈನ್, ಅವಿಲ್ ಮೆನೇಜಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಸದಾಶಿವ ಬಂಗೇರ, ಬಿ ಎಂ ಅಬ್ಬಾಸ್ ಅಲಿ, ಕೆ ಪದ್ಮನಾಭ ರೈ, ಎಂ ಎಸ್ ಮುಹಮ್ಮದ್, ಸುಭಾಶ್‍ಚಂದ್ರ ಶೆಟ್ಟಿ ಕುಳಾಲು, ದೇವಿಪ್ರಸಾದ್ ಪೂಂಜಾ, ಬಿ ವಾಸು ಪೂಜಾರಿ, ಬಿ ಮೋಹನ್, ಫಿಲಿಪ್ ಫ್ರಾಂಕ್, ಶಬೀರ್ ಸಿದ್ದಕಟ್ಟೆ, ಉಮೇಶ್ ಕುಲಾಲ್, ವೆಂಕಪ್ಪ ಪೂಜಾರಿ, ಡೆಂಝಿಲ್ ನೊರೊನ್ಹಾ, ಇಬ್ರಾಹಿಂ ನವಾಝ್ ಬಡಕಬೈಲು, ಸಿರಿಲ್ ಡಿ’ಸೋಜ, ಸುರೇಶ್ ಪೂಜಾರಿ ಜೋರಾ, ಸಂಜಿತ್ ಪೂಜಾರಿ ಮೊದಲಾದವರು ಜೊತೆಗಿದ್ದರು.
0 comments:
Post a Comment